ಯೋಗೀಶ್‌ ಗೌಡ ಕೊಲೆ: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಧಾರವಾಡದಲ್ಲಿ ಹಾಡುಹಗಲೇ 2016ರಲ್ಲಿ ನಡೆದಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣವು ಭಾರಿ ಸಂಚಲನ ಸೃಷ್ಟಿಸಿತ್ತು. ಸಿಬಿಐಗೆ ಪ್ರಕರಣ ವರ್ಗಾವಣೆಯಾದ ಬಳಿಕ ವಿನಯ್‌ ಕುಲಕರ್ಣಿಯನ್ನು ಅರೋಪಿಯನ್ನಾಗಿಸಿ, ಬಂಧಿಸಲಾಗಿತ್ತು.
Vinay Kulkarni
Vinay Kulkarni
Published on

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಇದರಿಂದ ವಿನಯ್‌ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು ಎದುರಾಗಿದೆ.

ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಬುಧವಾರ 17 ಮಂದಿಯನ್ನು ದೋಷಿಗಳು ಎಂದು ತೀರ್ಮಾನಿಸಿತ್ತು. ಗುರುವಾರ ಶಿಕ್ಷೆಯ ಪ್ರಮಾಣ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಹಾಗೂ ವಿನಯ್‌ ಕುಲಕರ್ಣಿ ಪರ ಹಿರಿಯ ವಕೀಲ ಶ್ಯಾಮಸುಂದರ್‌, ಇತರೆ ಅಪರಾಧಿಗಳ ಪರ ವಕೀಲರು ಹಾಗೂ ಸ್ವತಃ ಅಪರಾಧಿಗಳ ಮನವಿಯನ್ನು ಆಲಿಸಿದ್ದ ನ್ಯಾಯಾಲಯವು ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

ವಿಕ್ರಮ್‌ ಬಳ್ಳಾರಿ (A2), ಕೀರ್ತಿ ಕುಮಾರ್‌ ಅಲಿಯಾಸ್‌ ಬಸವರಾಜ್‌ ಕುರಹಟ್ಟಿ (A3), ಸಂದೀಪ್‌ ಸವದತ್ತಿ ((A24), ವಿನಾಯಕ್‌ ಕಟಗಿ (A5), ಮಹಾಬಲೇಶ್ವರ್‌ ಹೊಂಗಲ್‌ ಅಲಿಯಾಸ್‌ ಮುದಕ (A6), ಸಂತೋಷ್‌ ಸವದತ್ತಿ (A7), ಎಂ ದಿನೇಶ್‌ (A8), ಎಸ್‌ ಅಶ್ವತ್‌ (A9), ಕೆ ಎಸ್‌ ಸುನೀಲ್‌ (A10), ನಜೀರ್‌ ಅಹ್ಮದ್‌ (A11), ಶನ್ವಾಜ್‌ (A12), ಕೆ ನೂತನ್‌ (A13), ಸಿ ಹರ್ಷಿತ್‌ (A14), ವಿನಯ್‌ ಕುಲಕರ್ಣಿ (A15), ಚಂದ್ರಶೇಖರ್‌ ಇಂಡಿ ಅಲಿಯಾಸ್‌ ಚಂದ್ರು ಮಾಮ (A16) ಮತ್ತು ವಿಕಾಸ್‌ ಕಲಬುರ್ಗಿಗೆ (A18) ಐಪಿಸಿ ಸೆಕ್ಷನ್‌ 302 ಜೊತೆಗೆ 120-B ಅಪರಾಧಕ್ಕೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

20ನೇ ಆರೋಪಿ ವಾಸುದೇವ ರಾಮ ನಿಲೇಕಣಿ ಮತ್ತು 21ನೇ ಆರೋಪಿ ಸೋಮಶೇಖರ್‌ ಬಸಪ್ಪ ನ್ಯಾಮಗೌಡ ಅವರಿಗೆ ಅನುಮಾನದ ಲಾಭ ನೀಡಿ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ. ಒಂದನೇ ಆರೋಪಿ ಬಸವರಾಜ್‌ ಮುತ್ತಗಿ ನೀಡಲಾಗಿದ್ದ ಕ್ಷಮಾದಾನವನ್ನು ಕಾಯಂಗೊಳಿಸಲಾಗಿದೆ. ಅಪ್ರೂವರ್‌ ಆಗಿ, ಪ್ರತೀಕೂಲ ಸಾಕ್ಷಿಯಾಗಿ ಬದಲಾಗಿದ್ದ 17ನೇ ಆರೋಪಿ ಶಿವಾನಂದ ಬಿರಾದಾರ್‌ನನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಅಗತ್ಯ ಅನುಮತಿ ಪಡೆಯಲು ಪ್ರಾಸಿಕ್ಯೂಷನ್‌ಗೆ ಅನುಮತಿಸಲಾಗಿದೆ. ಹೀಗಾಗಿ, ಒಟ್ಟು 21 ಆರೋಪಿಗಳ ಪೈಕಿ ನಾಲ್ವರನ್ನು ಹೊರತುಪಡಿಸಿ ಉಳಿದ 17 ಮಂದಿಗೆ ಶಿಕ್ಷೆಯಾಗಿದೆ.

ಯಾವ ಸೆಕ್ಷನ್‌ಗೆ ಯಾವ ಶಿಕ್ಷೆ ಮತ್ತು ದಂಡ

  1. ಐಪಿಸಿ ಸೆಕ್ಷನ್‌ 302 (ಕೊಲೆ) ಜೊತೆಗೆ 120-B (A2 to A16 & A18)- ಜೀವಾವಧಿ ಶಿಕ್ಷೆ ಮತ್ತು ಪ್ರತಿಯೊಬ್ಬರಿಗೂ ₹30,000 ದಂಡ. ಇದನ್ನು ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಮೂರು ತಿಂಗಳು ಜೈಲು ಶಿಕ್ಷೆ.

  2. ಐಪಿಸಿ ಸೆಕ್ಷನ್‌ 201(ಸಾಕ್ಷ್ಯ ನಾಶ) ಜೊತೆಗೆ 120B ಜೊತೆಗೆ 149 (ಏಕ ಉದ್ದೇಶದಿಂದ ಎಲ್ಲರೂ ಒಗ್ಗೂಡುವುದು) (A2 to A16, A18 & A19- ಚನ್ನಕೇಶವ ಟಿಂಗರಿಕರ್)–‌ ಏಳು ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ ₹30,000 ದಂಡ.

  3. ಐಪಿಸಿ ಸೆಕ್ಷನ್‌ 218 (ಸರ್ಕಾರಿ ಅಧಿಕಾರಿ ಆರೋಪಿಗಳಿಗೆ ನೆರವಾಗಲು ಸಾಕ್ಷ್ಯ ನಾಶಪಡಿಸುವುದು) ಜೊತೆಗೆ 120-B ಜೊತೆಗೆ 149 (A2 to A16, A18 & A19)- ಏಳು ವರ್ಷ ಜೈಲು ಮತ್ತು ತಲಾ ₹20,000 ದಂಡ. ಜುಲ್ಮಾನೆ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳು ಹೆಚ್ಚುವರಿಯಾಗಿ ಜೈಲು ವಾಸ.

  4. ಐಪಿಸಿ ಸೆಕ್ಷನ್‌ 143 ಜೊತೆಗೆ 120B (A2 to A14 & A18)- ಆರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ಮತ್ತು ತಲಾ ₹2,000 ದಂಡ. ಜುಲ್ಮಾನೆ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳು ಸಾಮಾನ್ಯ ಹೆಚ್ಚುವರಿ ಜೈಲು ಶಿಕ್ಷೆ.

  5. ಐಪಿಸಿ ಸೆಕ್ಷನ್ 147 ಜೊತೆಗೆ 120-B (A2 to A14 & A18)- ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಜೊತೆಗೆ ತಲಾ ₹2,000 ಜುಲ್ಮಾನೆ. ದಂಡ ಪಾವತಿಸಲು ವಿಫಲರಾದರೆ ಒಂದು ತಿಂಗಳ ಸಾಮಾನ್ಯ ಜೈಲು ಶಿಕ್ಷೆ.

  6. IPC Section 148 ಜೊತೆಗೆ 120-B (A2 to A14 & A18)- ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಜೊತೆಗೆ ತಲಾ ₹2,000 ಜುಲ್ಮಾನೆ. ದಂಡ ಪಾವತಿಸಲು ವಿಫಲರಾದರೆ ಒಂದು ತಿಂಗಳ ಸಾಮಾನ್ಯ ಜೈಲು ಶಿಕ್ಷೆ.

  7. ಐಪಿಸಿ 120B (A2 to A16 & A18)- ಜೀವಾವಧಿ ಶಿಕ್ಷೆ ಮತ್ತು ತಲಾ ₹30,000 ದಂಡ; ಜುಲ್ಮಾನೆ ಪಾವತಿಸಲು ವಿಫಲರಾದರೆ ಹೆಚ್ಚುವರಿಯಾಗಿ ಮೂರು ತಿಂಗಳು ಜೈಲು ಶಿಕ್ಷೆ.

  8. ಇದೇ ಅಪರಾಧಕ್ಕೆ ಐಪಿಸಿ ಸೆಕ್ಷನ್‌ 218 ಅಡಿ 19ನೇ ಆರೋಪಿ ಚನ್ನಕೇಶವ ಟಿಂಗರಿಕರ್‌ಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಜೊತೆಗೆ ₹30,000 ದಂಡ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಮೂರು ತಿಂಗಳು ಜೈಲು ವಾಸ ಅನುಭವಿಸಲು ನ್ಯಾಯಾಲಯ ಆದೇಶಿಸಿದೆ.

ಯಾವ ಆರೋಪದಿಂದ ಯಾರ್ಯಾರು ಖುಲಾಸೆ?

  • ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 25 ಜತೆಗೆ 3, 5, 8 ಮತ್ತು 29ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಂದ ವಿನಯ ಕುಲಕರ್ಣಿ ಹಾಗೂ ಚಂದ್ರಶೇಖರ್ ಇಂಡಿ ಅವರನ್ನು ಖುಲಾಸೆಗೊಳಿಸಲಾಗಿದೆ.

  • ವಾಸುದೇವ ರಾಮ ನಿಲೇಕಣಿ (ಎ20) ಅವರನ್ನು ಸೆಕ್ಷನ್ 201 ಜತೆಗೆ 120ಬಿ ಹಾಗೂ 218ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧದಿಂದ ಖುಲಾಸೆಗೊಳಿಸಲಾಗಿದೆ.

  • ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 13(1)(ಡಿ) ಜತೆಗೆ 13(2)ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಂದ ಚೆನ್ನಕೇಶವ ಟಿಂಗರೀಕರ್ ಹಾಗೂ ವಾಸುದೇವ ರಾಮ ನಿಲೇಕಣಿ ಅವರನ್ನು ಖುಲಾಸೆಗೊಳಿಸಲಾಗಿದೆ.

  • ಸೋಮಶೇಖರ್ ಬಸಪ್ಪ ನ್ಯಾಮನಗೌಡ (ಎ21) ಅವರನ್ನು ಐಪಿಸಿ ಸೆಕ್ಷನ್ 120ಬಿ ಹಾಗೂ 302 ಅಡಿಯಲ್ಲಿನ ಶಿಕ್ಷಾರ್ಹ ಅಪರಾಧದಿಂದ ಖುಲಾಸೆಗೊಳಿಸಲಾಗಿದೆ.

  • ಮಾಫಿ ಸಾಕ್ಷಿಯಾಗಿದ್ದ (ಅಪ್ರೂವರ್) ಮೊದಲನೇ ಆರೋಪಿ ಬಸವರಾಜ ಮುತ್ತಗಿಗೆ ನೀಡಲಾಗಿದ್ದ ಕ್ಷಮಾದಾನವನ್ನು ಕಾಯಂಗೊಳಿಸಲಾಗಿದೆ.

ಶ್ರೀಶೈಲ ಬಿರಾದಾರ್ ವಿರುದ್ಧ ಕ್ರಮಕ್ಕೆ ಅವಕಾಶ: ಮೊದಲು ಮಾಫಿ ಸಾಕ್ಷಿಯಾಗಿ ಆ ನಂತರ ನ್ಯಾಯಾಲಯದ ಮುಂದೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದ (ಹಾಸ್ಟೈಲ್) ಶಿವಾನಂದ ಶ್ರೀಶೈಲ ಬಿರಾದಾರ್ (ಎ17) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅಗತ್ಯ ಅರ್ಜಿ ಸಲ್ಲಿಸಲು ಅಭಿಯೋಜನೆಗೆ (ಪ್ರಾಸಿಕ್ಯೂಷನ್) ನ್ಯಾಯಾಲಯ ಅವಕಾಶ ನೀಡಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ, ಶಂಕರಗೌಡ ಬಸನಗೌಡ ಪಾಟೀಲ್ ಹಾಗೂ ಇತರ ಸ್ವತಂತ್ರ ಸಾಕ್ಷಿಗಳಾದ ದತ್ತಾತ್ರೇಯ ಗುಡಗಂಟಿ, ಆನಂದ ಈರಪ್ಪ ಉದ್ದಣ್ಣವರ್‌, ವಿನಾಯಕ ಬಿಂಜಿಯವರ್‌, ಮೋಹನ್‌ ಈಚರಪ್ಪ ಮಲ್ಮುತ್ತಲ್, ವಿವೇಕಾನಂದ ದಳವಾಯಿ, ನಟರಾಜ್‌ ಸರದೇಸಾಯಿ ಮತ್ತು ವಿಜಯ್‌ ಕುಲಕರ್ಣಿ ವಿರುದ್ಧ ಸುಳ್ಳು ಸಾಕ್ಷ್ಯದ ಪ್ರಕರಣವನ್ನು ದಾಖಲಿಸಲು ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ನಿರ್ದೇಶಿಸಲಾಗಿದೆ.

ಯೋಗೀಶ ಗೌಡರ್ ಮಕ್ಕಳಿಗೆ ಪರಿಹಾರ:

ಅಪರಾಧಿಗಳು ದಂಡ ಪಾವತಿಸಲು ವಿಫಲವಾಗಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಿದರೂ ಸಹ, ದಂಡ ಪಾವತಿಸುವ ಹೊಣೆಗಾರಿಕೆಯಿಂದ ಅವರು ಮುಕ್ತರಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಅಪರಾಧಿಗಳಿಗೆ ವಿಧಿಸಲಾಗಿರುವ ಎಲ್ಲ ಶಿಕ್ಷೆಗಳೂ ಏಕಕಾಲದಲ್ಲಿ ಜಾರಿಯಾಗಲಿವೆ. ಅಪರಾಧಿಗಳೆಲ್ಲರೂ ವಿಚಾರಣಾಧೀನ ಕೈದಿಯಾಗಿ ಅನುಭವಿಸಿದ ಬಂಧನದ ಅವಧಿಯು ಜೈಲು ಶಿಕ್ಷೆಯಿಂದ ಕಡಿತಗೊಳ್ಳಲಿದೆ ಎಂದು ನ್ಯಾಯಾಲಯ ಹೇಳಿದೆ. ಒಟ್ಟು ದಂಡದ ಮೊತ್ತದಿಂದ ಮೃತ ಯೋಗೇಶ್ ಗೌಡ ಮತ್ತು ಗುರುನಾಥ ಗೌಡ ಅವರ ಮಕ್ಕಳು ₹16 ಲಕ್ಷ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಹಾಗೂ ಉಳಿದ ದಂಡದ ಮೊತ್ತ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2016ರ ಜೂನ್‌ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯೋಗೀಶ್‌ ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(B) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(d) ಅಡಿ ಆರೋಪ ಪಟ್ಟಿ ಸಲ್ಲಿಸಿತ್ತು.

Also Read
ʼಯಾರಿಗೂ ಅನ್ಯಾಯ ಮಾಡಿಲ್ಲʼ ಎಂದ ವಿನಯ್‌ ಕುಲಕರ್ಣಿ; ಕ್ಷಮಾದಾನವಿಲ್ಲದ ಜೀವನ ಪರ್ಯಂತ ಶಿಕ್ಷೆಗೆ ಸಿಬಿಐ ಮನವಿ

ಬಸವರಾಜ್‌, ವಿಕ್ರಮ್‌, ಕೀರ್ತಿ ಕುಮಾರ್‌, ಸಂದೀಪ್‌ ಅಲಿಯಾಸ್‌ ಸಂದಿ, ವಿನಾಯಕ್‌, ಮಹಾಬಲೇಶ್ವರ್‌ ಅಲಿಯಾಸ್‌ ಮುದಕ, ಸಂತೋಷ್‌, ಎಂ ದಿನೇಶ್‌, ಎಸ್‌ ಅಶ್ವತ್‌, ಕೆ ಎಸ್‌ ಸುನೀಲ್‌, ನಜೀರ್‌ ಅಹ್ಮದ್‌, ಶನ್ವಾಜ್‌, ಕೆ ನೂತನ್‌, ಸಿ ಹರ್ಷಿತ್‌, ವಿನಯ್‌ ಕುಲಕರ್ಣಿ, ಚಂದ್ರಶೇಖರ್‌ ಇಂಡಿ ಅಲಿಯಾಸ್‌, ಚಂದ್ರು ಮಾಮ, ಶಿವಾನಂದ ಬಿರಾದಾರ್‌, ವಿಕಾಸ್‌ ಕಲಬುರ್ಗಿ, ಚನ್ನಕೇಶವ ಟಿಂಗರಿಕರ್‌, ವಾಸುದೇವ್‌ ರಾಮ ನಿಲೇಕಣಿ ಮತ್ತು ಸೋಮಶೇಖರ್‌ ನ್ಯಾಮಗೌಡ ವಿರುದ್ಧ 26. 05.2023ರಂದು ನ್ಯಾಯಾಲಯವು ಆರೋಪ ನಿಗದಿ ಮಾಡಿತ್ತು.

2020ರ ನವೆಂಬರ್‌ 5ರಂದು ವಿನಯ್‌ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. 2021ರ ಆಗಸ್ಟ್‌ 11ರಂದು ಸುಪ್ರೀಂ ಕೋರ್ಟ್‌ ವಿನಯ್‌ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. 2025ರ ಜೂನ್‌ 7ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಯುತ್ತಿರುವಾಗ ವಿನಯ್‌ ಕುಲಕರ್ಣಿ ಅವರು ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಹೇಳಿ, ಜಾಮೀನು ರದ್ದುಗೊಳಿಸಿತ್ತು.

Kannada Bar & Bench
kannada.barandbench.com