ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಮುಂದೂಡುವುದನ್ನು ಪರಿಗಣಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಗುರುವಾರ ಅಲಾಹಾಬಾದ್ ಹೈಕೋರ್ಟ್ ಮನವಿ ಮಾಡಿದೆ.
ಆರೋಪಿ ಸಂಜಯ್ ಯಾದವ್ ಎಂಬಾತ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೇಖರ್ ಯಾದವ್ ನೇತೃತ್ವದ ಏಕಸದಸ್ಯ ಪೀಠವು “ಜೀವವಿದ್ದರೆ ಜಗತ್ತಿದೆ” (ಜಾನ್ ಹೈನ್ ತೋಹ್ ಜಹಾನ್ ಹೈನ್ - ಆರೋಗ್ಯವೇ ಭಾಗ್ಯ ಎನ್ನುವ ಅರ್ಥದಲ್ಲಿ) ಎಂದಿದ್ದು, ಚುನಾವಣೆ ಮತ್ತು ರಾಜಕೀಯ ಸಮಾವೇಶಗಳನ್ನು ಮುಂದೂಡುವಂತೆ ಪ್ರಧಾನಿ ಮತ್ತು ಆಯೋಗಕ್ಕೆ ಮನವಿ ಮಾಡಿದೆ.
“ಉತ್ತರ ಪ್ರದೇಶದ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಜನರನ್ನು ಕೊರೊನಾ ಮೂರನೇ ಅಲೆಯಿಂದ ರಕ್ಷಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಆಯೋಜಿಸುವ ಚುನಾವಣಾ ಸಮಾವೇಶಗಳಿಗೆ ನಿಷೇಧ ಹೇರಬೇಕಿದೆ. ರಾಜಕೀಯ ಪಕ್ಷಗಳಿಗೆ ಟಿವಿ ಮತ್ತು ಪತ್ರಿಕೆಗಳ ಮೂಲಕ ಪ್ರಚಾರ ನಡೆಸಲು ಸೂಚಿಸಬೇಕು. ರಾಜಕೀಯ ಪಕ್ಷಗಳು ಚುನಾವಣಾ ಸಭೆಗಳು ಮತ್ತು ಸಮಾವೇಶಗಳನ್ನು ನಡೆಸದಂತೆ ಚುನಾವಣಾ ಆಯೋಗವು ಕಠಿಣ ಕ್ರಮಕೈಗೊಳ್ಳಬೇಕು. ಇದೆಲ್ಲದರ ಜೊತೆಗೆ ಚುನಾವಣೆ ಮುಂದೂಡುವುದನ್ನು ಪರಿಗಣಿಸಬೇಕು. ಜೀವವಿದ್ದಾಗ ಮಾತ್ರವೇ ಜಗತ್ತಿಗೆ ಅರ್ಥ ಬರುತ್ತದೆ” ಎಂದು ನ್ಯಾಯಾಲಯವು ಮಾರ್ಮಿಕವಾಗಿ ನುಡಿದಿದೆ.
“ನ್ಯಾಯಾಲಯದ ವ್ಯಾಪ್ತಿಯಲ್ಲೂ ಅಪಾರ ಸಂಖ್ಯೆಯಲ್ಲಿ ಜನರು ನೆರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿಲ್ಲ. ಕೊರೊನಾ ಹೊಸ ತಳಿ ಓಮಿಕ್ರಾನ್ ಕಾಣಿಸಿಕೊಂಡಿದ್ದು, ಇದು ಮೂರನೇ ಅಲೆಗೆ ನಾಂದಿ ಹಾಡುವ ಸಾಧ್ಯತೆ ಇದೆ” ಎಂದು ಪೀಠವು ಆತಂಕ ವ್ಯಕ್ತಪಡಿಸಿದೆ.
“ಎರಡನೇ ಅಲೆಯ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಸೋಂಕು ತಗುಲಿ ಸಾಕಷ್ಟು ಮಂದಿ ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ಮಂದಿಗೆ ಕೊರೊನಾ ಸೋಂಕು ತಗುಲಿ, ಸಾಕಷ್ಟು ಹಾನಿ ಉಂಟಾಗಿತ್ತು” ಎಂದು ಪೀಠವು ನೆನಪಿಸಿದೆ.
“ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂಥ ರಾಷ್ಟ್ರದಲ್ಲಿ ಉಚಿತ ಲಸಿಕಾ ಅಭಿಯಾನವನ್ನು ಮುನ್ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಈ ನ್ಯಾಯಾಲಯವು ಮೆಚ್ಚುತ್ತದೆ. ಅಂತೆಯೇ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಭಯಾನಕವಾದ ಈ ಸಾಂಕ್ರಾಮಿಕದ ಆತಂಕದಿಂದಾಗಿ ರಾಜಕೀಯ ಸಮಾವೇಶ, ಸಭೆಗಳನ್ನು ನಿರ್ಬಂಧಿಸಲು ಅಥವಾ ಮುಂದೂಡಲು ಕಠಿಣ ಕ್ರಮಕೈಗೊಳ್ಳುವಂತೆ ಕೋರುತ್ತೇನೆ. ಬದುಕಿಲ್ಲದಿದ್ದರೆ ಜಗತ್ತಿಗೆ ಅರ್ಥವೇ ಇರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಆದೇಶದ ಈ ಪ್ರತಿಯನ್ನು ಅಲಾಹಾಬಾದ್ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್, ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಪೀಠ ಆದೇಶ ಮಾಡಿದೆ.