ಮಳಲಿ ಮಸೀದಿ ಸಮೀಕ್ಷೆಗಾಗಿ ಸಲ್ಲಿಸಿರುವ ಅರ್ಜಿ ಮೊದಲು ಆಲಿಸಬೇಕು: ಮಂಗಳೂರು ನ್ಯಾಯಾಲಯದಲ್ಲಿ ಹಿಂದೂ ಪಕ್ಷಕಾರರ ವಾದ

ಮಳಲಿಯಲ್ಲಿ ಯಾವ ದೇಗುಲ ಇತ್ತು ಎಂಬ ಬಗ್ಗೆ ಸಾಕ್ಷ್ಯ ಒದಗಿಸಬೇಕು. ಮಸೀದಿ ಚರಿತ್ರೆಗೆ ಪೂರಕ ದಾಖಲೆ ಇರುವುದರಿಂದ ಹಿಂದೂ ಪಕ್ಷಕಾರರ ಮನವಿ ತಿರಸ್ಕರಿಸಿ ಮಸೀದಿ ನವೀಕರಣ ಮುಂದುವರೆಸಲು ಅವಕಾಶ ಮಾಡಿಕೊಡಬೇಕು ಎನ್ನುವುದು ಮುಸ್ಲಿಂ ಪಕ್ಷಕಾರರ ವಾದ.
ಮಳಲಿ ಮಸೀದಿ ಸಮೀಕ್ಷೆಗಾಗಿ ಸಲ್ಲಿಸಿರುವ ಅರ್ಜಿ ಮೊದಲು ಆಲಿಸಬೇಕು: ಮಂಗಳೂರು ನ್ಯಾಯಾಲಯದಲ್ಲಿ ಹಿಂದೂ ಪಕ್ಷಕಾರರ ವಾದ

ಮಂಗಳೂರು ಮಳಲಿ ಮಸೀದಿಯ ಸಮೀಕ್ಷೆಗಾಗಿ ಸಲ್ಲಿಸಿರುವ ಅರ್ಜಿಯನ್ನೇ ಮೊದಲು ಆಲಿಸಬೇಕು ಅಲ್ಲಿಯವರೆಗೂ ಮಸೀದಿ ನವೀಕರಣಕ್ಕೆ ನೀಡಿರುವ ತಡೆಯಾಜ್ಞೆಯನ್ನು ಮುಂದುವರೆಸಬೇಕು ಎಂದು ಹಿಂದೂ ಪಕ್ಷಕಾರರು ನ್ಯಾಯಾಲಯವನ್ನು ಬುಧವಾರ ಕೋರಿದ್ದಾರೆ.

ಮಂಗಳೂರಿನ ಮಳಲಿಪೇಟೆ ಜುಮ್ಮಾ ಮಸೀದಿ ನವೀಕರಣ ವೇಳೆ ಏಪ್ರಿಲ್ 21ರಂದು ದೇಗುಲ ಶೈಲಿಯ ನಿರ್ಮಿತಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಧನಂಜಯ್‌ ಮತ್ತು ಮನೋಜ್‌ ಕುಮಾರ್‌ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಮನವಿ ಆಲಿಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯವು ನವೀಕರಣ ಕಾಮಗಾರಿಗೆ ತಡೆ ನೀಡಿತ್ತು. ಇದರ ಬೆನ್ನಿಗೇ ಮಳಲಿ ಪೇಟೆಯ ಅಸಯ್ಯಿದ್‌ ಅಬ್ದುಲ್ಲಾಹಿಲ್‌ ಮದನಿ ಮಸೀದಿ ಆಡಳಿತ ವರ್ಗವು ಹಿಂದೂ ಪಕ್ಷಕಾರರ ಅರ್ಜಿ ವಜಾಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು. ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಇಂದು ಸಹ ನ್ಯಾಯಾಲಯದಲ್ಲಿ ಮುಂದುವರೆಯಿತು.

ಹಿಂದೂ ಪಕ್ಷಕಾರರ ಪರ ವಾದ ಮಂಡಿಸಿದ ವಕೀಲ ಎಂ. ಚಿದಾನಂದ ಕೆದಿಲಾಯ ಅವರು ಮಸೀದಿ ನವೀಕರಣ ವೇಳೆ ದೇವಸ್ಥಾನದ ಮಾದರಿ ಸಿಕ್ಕಿದೆ. ಇದೊಂದು ಜ್ಞಾನವಾಪಿ ರೀತಿಯ ಪ್ರಕರಣ. ಸತ್ಯಾಸತ್ಯತೆ ತಿಳಿಯಲು ಸಮೀಕ್ಷೆ ನಡೆಸಬೇಕು. ಇದಕ್ಕಾಗಿ ನ್ಯಾಯಾಲಯ ಕೋರ್ಟ್ ಕಮಿಷನರ್ ನೇತೃತ್ವದ ಸಮಿತಿ ರಚಿಸಬೇಕು ಎಂದು ನ್ಯಾಯಾಧೀಶೆ ಸುಜಾತಾ ಎಚ್‌ ಅವರನ್ನು ಕೋರಿದರು.

Also Read
ರಾಮ ಜನ್ಮಭೂಮಿ ಹಾಗೂ ಮಳಲಿ ಮಸೀದಿ ವಿವಾದದ ನಡುವೆ ವ್ಯತ್ಯಾಸವಿದೆ: ಮಂಗಳೂರು ನ್ಯಾಯಾಲಯದಲ್ಲಿ ಮುಸ್ಲಿಂ ಪಕ್ಷಕಾರರ ವಾದ

ಮಸೀದಿಯನ್ನು ನವೀಕರಣಕ್ಕಾಗಿ ಒಡೆಯಲಾಗಿದೆ. ಅಲ್ಲಿ ಈಗ ಪ್ರಾರ್ಥನೆ ನಡೆಯುತ್ತಿಲ್ಲ. ಹೀಗಾಗಿ ನಮಾಜ್‌ಗೆ ಭಂಗ ಉಂಟು ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ತರಾತುರಿಯ ಕ್ರಮ ಅಗತ್ಯವಿಲ್ಲ ಎಂದು ಅವರು ತಮ್ಮ ವಾದವನ್ನು ಸಮರ್ಥಿಸಿದರು.

ಆದರೆ ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಪಕ್ಷಕಾರರ ಪರ ವಕೀಲರಾದ ಎಂ ಪಿ ಶೆಣೈ “ಮಸೀದಿಗೆ 700 ವರ್ಷಗಳ ಇತಿಹಾಸ ಇದೆ. ಇದು ಸರ್ಕಾರಿ ಜಾಗದಲ್ಲಿರುವ ಮಸೀದಿ. ಮಳಲಿಯಲ್ಲಿ ಯಾವ ದೇಗುಲ ಇತ್ತು ಎಂಬ ಬಗ್ಗೆ ಸಾಕ್ಷ್ಯ ಒದಗಿಸಬೇಕು. ನ್ಯಾಯಾಲಯ ಹಿಂದೂ ಪಕ್ಷಕಾರರ ಪರ ಅರ್ಜಿಯನ್ನು ವಜಾ ಮಾಡಿ ಮಸೀದಿ ನವೀಕರಣ ಮುಂದುವರೆಸಲು ಅವಕಾಶ ಮಾಡಿಕೊಡಬೇಕು. ಪಂಚಾಯ್ತಿ ಅನುಮತಿ ಪಡದೇ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮಸೀದಿ ಚರಿತ್ರೆಗೆ ಪೂರಕ ದಾಖಲೆಗಳು ಇರುವುದರಿಂದ ಹಿಂದೂ ಪಕ್ಷಕಾರರ ಮನವಿ ತಿರಸ್ಕರಿಸಬೇಕು” ಎಂದು ಮನವಿ ಮಾಡಿದರು.

Also Read
ಮಂಗಳೂರು ಮಸೀದಿ ವಿವಾದ: ನವೀಕರಣ ಕಾಮಗಾರಿಗೆ ಮಧ್ಯಂತರ ತಡೆ ನೀಡಿರುವ ಸಿವಿಲ್ ನ್ಯಾಯಾಲಯ

“ಈ ಪ್ರಕರಣವನ್ನು ಜ್ಞಾನವಾಪಿ ಪ್ರಕರಣಕ್ಕಾಗಲೀ ಅಯೋಧ್ಯೆಗಾಗಲೀ ಹೋಲಿಸಲಾಗದು. ಅಯೋಧ್ಯೆ ಪ್ರಕರಣದಲ್ಲಿ ರಾಮ ಜನ್ಮಸ್ಥಳದ ವಿವಾದ ಇತ್ತು. ಆದರೆ ಮಳಲಿ ಮಸೀದಿಯಲ್ಲಿ ಅಂತಹ ಯಾವುದೇ ವಿಚಾರ ಇಲ್ಲ. ಅಲ್ಲಿ ಯಾವ ದೇವರಿತ್ತು, ಅದರ ಹಿನ್ನೆಲೆ ಏನು ಎಂಬ ಬಗ್ಗೆ ಅರ್ಜಿದಾರರು ಸಾಕ್ಷ್ಯ ನೀಡಿಲ್ಲ. ಆದರೆ ಸ್ಥಳದಲ್ಲಿ 700 ವರ್ಷಗಳಿಂದ ಮಸೀದಿ ಇತ್ತು ಎಂಬುದಕ್ಕೆ ದಾಖಲೆಗಳು ಇವೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆದಿಲಾಯ “ಇಸ್ಲಾಂ ನಿಯಮಗಳ ಪ್ರಕಾರ ಎಲ್ಲಿ ಬೇಕಾದರೂ ನಮಾಜ್‌ ಮಾಡಬಹುದಾಗಿದೆ. ನಿಗದಿತ ಜಾಗವೇ ಬೇಕೆಂದಿಲ್ಲ. ಹಾಗಾಗಿ ವಿವಾದಿತ ಸ್ಥಳದ ಸಮೀಕ್ಷೆ ನಡೆಸಲು ನ್ಯಾಯಾಲಯ ಆದೇಶ ನೀಡಬೇಕು” ಎಂದು ಕೋರಿದರು.

ಎರಡೂ ಕಡೆಯ ಪಕ್ಷಕಾರರ ಪರ ವಕೀಲರು ಸುಪ್ರೀಂ ಕೋರ್ಟ್‌ ಹಾಗೂ ವಿವಿಧ ನ್ಯಾಯಾಲಯಗಳ ತೀರ್ಪುಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ವಾದ ಆಲಿಸಿದ ನ್ಯಾಯಾಲಯ ಮುಂದಿನ ಆದೇಶದವರೆಗೂ ಮಧ್ಯಂತರ ತಡೆಯಾಜ್ಞೆ ಮುಂದುವರೆಸಲು ಸಮ್ಮತಿ ಸೂಚಿಸಿತು. ಆದೇಶಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯ ಜೂ 6ಕ್ಕೆ ಮುಂದೂಡಿತು. ಈ ಮಧ್ಯೆ 9 ಮತ್ತು 10ನೇ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ಮುಸ್ಲಿಂ ಪಕ್ಷಕಾರರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ವಿಚಾರಣೆ ನಾಳೆ (ಜೂ 2) ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com