ನ್ಯಾಯಾಂಗ ನಿಂದನೆ ಅಧಿಕಾರವನ್ನು ಶಾಸಕಾಂಗದ ಕಾಯಿದೆಯಿಂದಲೂ ತೆಗೆದುಹಾಕಲಾಗದು: ಸುಪ್ರೀಂಕೋರ್ಟ್

ತನ್ನ ಮೇಲೆ ₹ 25 ಲಕ್ಷ ದಂಡ ವಿಧಿಸಿದ್ದ 2017ರ ನ್ಯಾಯಾಲಯದ ತೀರ್ಪನ್ನು ಹಿಂಪಡೆಯಬೇಕು ಎಂದು ಟ್ರಸ್ಟ್ ಕೋರಿತ್ತು.
Justices SK Kaul and MM Sundresh
Justices SK Kaul and MM Sundresh
Published on

ಕಪ್ಪುಪಟ್ಟಿಯಲ್ಲಿದ್ದ ಅರ್ಜಿದಾರ ಸೂರಜ್ ಇಂಡಿಯಾ ಟ್ರಸ್ಟ್ ಅನ್ನು ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ಸುಪ್ರೀಂಕೋರ್ಟ್‌ ಇಂದು ಪರಿಗಣಿಸಿದ್ದು ನ್ಯಾಯಾಂಗ ನಿಂದನೆ ಅಧಿಕಾರವನ್ನು ಶಾಸಕಾಂಗದ ಕಾಯಿದೆಯಿಂದಲೂ ತೆಗೆದುಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದೆ (ಸೂರಜ್ ಇಂಡಿಯಾ ಟ್ರಸ್ಟ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).

ತಮಗೆ ಸರಿತೋರಿದ್ದು ಸಿಗಲಿಲ್ಲ ಎಂಬ ಕಾರಣಕ್ಕೆ ನ್ಯಾಯಧೀಶರು, ಆಡಳಿತಾತ್ಮಕ ಸಿಬ್ಬಂದಿ ಮತ್ತು ರಾಜ್ಯ ಸರ್ಕಾರದ ಮೇಲೆ ಕೆಸರೆರಚುವ ಅರ್ಜಿದಾರರ ನಡವಳಿಕೆ ಬಗ್ಗೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದ್ರೇಶ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. "ನಾವು ಹಿಂದೆ ಸರಿಯಲು ಬಯಸುವುದಿಲ್ಲ, ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ," ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಲಯವನ್ನು ವಿವಾದದಲ್ಲಿ ಸಿಲುಕಿಸುವ ಪ್ರಯತ್ನವನ್ನು ಸುಮ್ಮನೆ ಬಿಡಲಾಗದು. ಅರ್ಜಿದಾರರು ಮಾಡಿರುವ ಕ್ಷಮೆಯಾಚನೆಯು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಕಾರಣದಿಂದ ಮಾಡಿರುವಂತಹವು. ಇದರ ಬೆನ್ನಿಗೇ ಮತ್ತಷ್ಟು ಆರೋಪಗಳನ್ನು ಮಾಡಲಾಗಿದ್ದು, ಇದು ಕೇವಲ ತೋರಿಕೆಯಾಗಿದೆ. ಹೀಗಾಗಿ ಇದು ಪಶ್ಚಾತ್ತಾಪ ಎನ್ನುವುದಕ್ಕೆ ಅರ್ಹವಾಗುವುದಿಲ್ಲ. ಹಾಗಾಗಿ, ಅರ್ಜಿದಾರರು ಯಾವುದೇ ಅನುಕಂಪಕ್ಕೆ ಅರ್ಹರಲ್ಲ ಎಂದು ನ್ಯಾಯಾಲಯ ಹೇಳಿದೆ.

Also Read
[ಯೆಸ್ ಬ್ಯಾಂಕ್ ಹಗರಣ] ರಾಣಾ ಕಪೂರ್ ಪತ್ನಿ, ಪುತ್ರಿಯರಿಗೆ ಜಾಮೀನು ನಿರಾಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ

ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವವರ ವಾದವನ್ನು ಆಲಿಸಬೇಕೆ ಅಥವಾ ಬೇಡವೇ ಎಂಬುದಷ್ಟೇ ನ್ಯಾಯಾಲಯದ ಮುಂದಿದ್ದ ಪ್ರಶ್ನೆಯಾಗಿತ್ತು. ಅವರಿಗೆ ಅವಕಾಶ ನೀಡುವುದು ಅನಿವಾರ್ಯವಾಗಿದ್ದಲ್ಲಿ ಬದಲಿಗೆ ಅವರಿಗೊಂದು ಅವಕಾಶ ನೀಡುವ ವಿಚಾರವಾಗಿತ್ತು ಎಂದ ಪೀಠ ಶಿಕ್ಷೆಯ ಪ್ರಮಾಣ ಘೋಷಿಸುವ ಅಕ್ಟೋಬರ್ 7 ರಂದು ಹಾಜರಿರುವಂತೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವವರಿಗೆ ನೋಟಿಸ್‌ ನೀಡಿದೆ.

ಕ್ಷುಲ್ಲಕ ಮೊಕದ್ದಮೆ ಹೂಡಿದ್ದಕ್ಕೆ ಮತ್ತು ನ್ಯಾಯಾಂಗದ ವಿರುದ್ಧ ವೃಥಾ ಆಪಾದನೆ ಮಾಡಿದ್ದಕ್ಕೆ ಮೂರು ದಿನದೊಳಗೆ ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಕಳೆದ ವಿಚಾರಣೆ ವೇಳೆ ನ್ಯಾಯಾಲಯ ಸೂಚಿಸಿತ್ತು. ತನಗೆ ಮೇಲೆ ₹ 25 ಲಕ್ಷ ದಂಡ ವಿಧಿಸಿದ್ದ 2017ರ ನ್ಯಾಯಾಲಯದ ತೀರ್ಪನ್ನು ಹಿಂಪಡೆಯಬೇಕು ಎಂದು ಟ್ರಸ್ಟ್‌ ಕೋರಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಅಲ್ಲದೆ ದೇಶದ ಯಾವುದೇ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದಂತೆಯೂ ಸರ್ವೋಚ್ಚ ನ್ಯಾಯಾಲಯ ನಿರ್ಬಂಧಿಸಿತ್ತು. ಟ್ರಸ್ಟ್ 64 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದು ಅವುಗಳೆಲ್ಲವನ್ನೂ ನ್ಯಾಯಾಲಯ ವಜಾಗೊಳಿಸಿತ್ತು. ನ್ಯಾಯಾಂಗದ ವಿರುದ್ಧ ಪದೇ ಪದೇ ಒಳಸಂಚು ಮಾಡಿದ ಆರೋಪವನ್ನೂ ಟ್ರಸ್ಟ್‌ ವಿರುದ್ಧ ಹೊರಿಸಲಾಯಿತು.

Kannada Bar & Bench
kannada.barandbench.com