ಸಂವಿಧಾನ ದಿನ 2022: ಸಾಂವಿಧಾನಿಕ ದೃಷ್ಟಿಕೋನವನ್ನು ರಕ್ಷಿಸಲು ಚಿಂತನಶೀಲರಾಗುವಂತೆ ನ್ಯಾಯಾಧೀಶರಿಗೆ ಸಿಜೆಐ ಕರೆ

ಯುವ ಮನಸ್ಸುಗಳು ಭಾರತದ ಸಾಮಾಜಿಕ ವಾಸ್ತವಗಳಿಗೆ ತೆರೆದುಕೊಳ್ಳ ಬೇಕಿದೆ ಎಂದ ಸಿಜೆಐ ಬದಲಾವಣೆ ಯಾವಾಗಲೂ ಸಣ್ಣ ದಯಾಪರ ಕೆಲಸಗಳಿಂದ ಆಗುತ್ತದೆ ಎಂದರು.
ಸಂವಿಧಾನ ದಿನ 2022: ಸಾಂವಿಧಾನಿಕ ದೃಷ್ಟಿಕೋನವನ್ನು ರಕ್ಷಿಸಲು ಚಿಂತನಶೀಲರಾಗುವಂತೆ ನ್ಯಾಯಾಧೀಶರಿಗೆ ಸಿಜೆಐ ಕರೆ

ನಾಗರಿಕರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ರಕ್ಷಿಸುವ ಸಾಂವಿಧಾನಿಕ ದೃಷ್ಟಿಕೋನವನ್ನು ರಕ್ಷಿಸುವ ಬಗ್ಗೆ ಆಲೋಚನಾಪರರಾಗುವಂತೆ ಸಂವಿಧಾನ ದಿನದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಜಿಲ್ಲಾ ನ್ಯಾಯಾಲಯಗಳಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರಗಳಿಗೆ ಸಲಹೆ ನೀಡಿದರು.

ಅಗಾಧ ಜೀವನಾನುಭವ ಇರುವ ಜನರ ಜೊತೆ ಒಡನಾಡದೆ ಹೋದರೆ ನ್ಯಾಯಾಧೀಶರು ತಮ್ಮ ಪಾತ್ರ ನಿರ್ವಹಣೆಯಲ್ಲಿ ವಿಫಲರಾಗುತ್ತಾರೆ ಎಂದರು.

"ಸಂಸ್ಥೆಯು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಕಾಲ ಸರಿದಂತೆ ಅಭಿವೃದ್ಧಿ ಹೊಂದುತ್ತಾ ಸಾಗುತ್ತದೆ. ನಾನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ  ಸರ್ವೋಚ್ಚ ನ್ಯಾಯಾಲಯ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಸುವುದು ನನ್ನ ಹೊಣೆ ಎಂದು ನಂಬುತ್ತೇನೆ” ಎಂಬುದಾಗಿ ಅವರು ಹೇಳಿದರು.  

Also Read
ಯಾವುದೇ ಸಂಸ್ಥೆ ಪರಿಪೂರ್ಣವಲ್ಲ ಎಂದ ಸಿಜೆಐ; ನ್ಯಾಯಂಗ- ಕಾರ್ಯಾಂಗ ಸಂಘರ್ಷ ಅರ್ಥಹೀನ ಎಂದ ಕಾನೂನು ಸಚಿವ ರಿಜಿಜು

ಸಂವಿಧಾನ ಕೇವಲ ಕಾನೂನು ಪಠ್ಯವಲ್ಲ ಎಂದ ಅವರು ಅದು  ಚಾರಿತ್ರಿಕವಾಗಿ ಅಧಿಕಾರದಲ್ಲಿದ್ದವರು (ವಸಾಹತುಶಾಹಿ ಆಡಳಿತಗಾರರು) ಮತ್ತು ತಮ್ಮನ್ನು ತಾವು ಆಳಿಕೊಳ್ಳಲು ಮುಂದಾದ ಸಮಾಜದಂಚಿನ ಜನರ ನಡುವಿನ ಸಾಮಾಜಿಕ ಒಪ್ಪಂದ ಎಂದು ಬಣ್ಣಿಸಿದರು.

ಸ್ವಾತಂತ್ರ್ಯ ಬಂದಾಗ ಭಾರತ ಸಾಮಾಜಿಕ ಅನಿಷ್ಠಗಳಿಂದ ಪೀಡಿತವಾಗಿತ್ತು. ವಸಾಹತುಶಾಹಿ ಮತ್ತು ವಸಾಹತುಪೂರ್ವ ನ್ಯಾಯಾಲಯಗಳು ಜನರ ಹಕ್ಕು ರಕ್ಷಿಸುವ ಬಗ್ಗೆ ಅನಾಸಕ್ತಿಯ ಧೋರಣೆ ಹೊಂದಿದ್ದವು ಎಂದು ಅವರು ಹೇಳಿದರು. ಇಂದು ಭಾರತೀಯ ನ್ಯಾಯಾಂಗ ಸಮಾಜದಂಚಿನಲ್ಲಿರುವವರನ್ನು ರಕ್ಷಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.

ನ್ಯಾಯ ವಿತರಣಾ ವ್ಯವಸ್ಥೆಯು ಎಲ್ಲರಿಗೂ ದೊರೆಯುವಂತಾಗಬೇಕಿದ್ದು ಈ ನಿಟ್ಟಿನಲ್ಲಿ ಭಾರತೀಯ ನ್ಯಾಯಾಂಗ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ ಎಂದು ಸಿಜೆಐ ಹೇಳಿದರು. ಜಿಲ್ಲಾ ನ್ಯಾಯಾಂಗ ನ್ಯಾಯ ದೊರಕಿಸಿಕೊಡುವ ಮೊದಲ ಹಂತವಾಗಿದ್ದು ಅದನ್ನು ಉನ್ನತೀಕರಿಸುವುದು, ಬಲಪಡಿಸುವುದು ಮಹತ್ವದ ಸಂಗತಿ ಎಂದರು. ಜೊತೆಗೆ ಯುವ ಮನಸ್ಸುಗಳು ಭಾರತದ ಸಾಮಾಜಿಕ ವಾಸ್ತವಗಳಿಗೆ ತೆರೆದುಕೊಳ್ಳಬೇಕಿದೆ. ಬದಲಾವಣೆ ಯಾವಾಗಲೂ ಸಣ್ಣ ದಯಾಪರ ಕೆಲಸಗಳಿಂದ ಆಗುತ್ತದೆ ಎಂದರು.

AG R Venkatramani
AG R Venkatramani

ಇದೇ ವೇಳೆ ಮಾತನಾಡಿದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು “ಅಂತ್ಯವೇ ಇಲ್ಲದ ಶಾಸನಾತ್ಮಕ ಮೇಲ್ಮನವಿಗಳನ್ನು ಸರ್ವೋಚ್ಚ ನ್ಯಾಯಾಲಯದ ಮೇಲೆ ತಂದು ಸುರಿಯದಂತೆ ಸಲಹೆ ನೀಡಿದರು. ಸುಪ್ರೀಂ ಕೋರ್ಟನ್ನು ಸಣ್ಣ ವ್ಯಾಜ್ಯಗಳ ನ್ಯಾಯಾಲಯವನ್ನಾಗಿ ಬದಲಿಸದಂತೆಯೂ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಸರ್ಕಾರಗಳು ದಾವೆ ನೀತಿ ರೂಪಿಸುವುದಾಗಿ ದೀರ್ಘಕಾಲದಿಂದ ಹೇಳುತ್ತಿದ್ದು ಅದು ಕಾರಣವೇ ಇಲ್ಲದೆ ರೂಪುಗೊಳ್ಳದೆ ಉಳಿದಿದೆ ಎಂದರು.  

Kannada Bar & Bench
kannada.barandbench.com