ಭಾರತ ಒಗ್ಗಟ್ಟಿನಿಂದ ಇರುವಂತೆ ಸಂವಿಧಾನ ನೋಡಿಕೊಳ್ಳುತ್ತದೆ: ಸಿಜೆಐ ಗವಾಯಿ

ಅಲಾಹಾಬಾದ್ ಹೈಕೋರ್ಟ್‌ನಲ್ಲಿ ನೂತನವಾಗಿ ನಿರ್ಮಿಸಲಾದ ವಕೀಲರ ಕೊಠಡಿಗಳು ಮತ್ತು ಬಹು ಹಂತದ ಪಾರ್ಕಿಂಗ್ ಸೌಲಭ್ಯ ಉದ್ಘಾಟಿಸಿ ನ್ಯಾ. ಗವಾಯಿ ಮಾತನಾಡಿದರು.
CJI BR Gavai
CJI BR Gavai
Published on

ಅಲಾಹಾಬಾದ್ ಹೈಕೋರ್ಟ್‌ನಲ್ಲಿ ನೂತನವಾಗಿ ನಿರ್ಮಿಸಲಾದ ವಕೀಲರ ಕೊಠಡಿಗಳು ಮತ್ತು ಬಹು ಹಂತದ ಪಾರ್ಕಿಂಗ್ ಸೌಲಭ್ಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ಭಾರತ ಒಗ್ಗಟ್ಟಿನಿಂದ ಇರುವಂತೆ ಸಂವಿಧಾನ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಪ್ರಭಾರ) ಅರ್ಜುನ್ ರಾಮ್ ಮೇಘವಾಲ್ , ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

Also Read
ನೂತನ ಸಿಜೆಐ ಗವಾಯಿ ಅವರಿಗೆ ರಾಷ್ಟ್ರಪತಿ ಮುರ್ಮು ಅವರಿಂದ ಔತಣಕೂಟ

ಸಭೆಯನ್ನುದ್ದೇಶಿಸಿ ಮಾತನಾಡಿದ  ಸಿಜೆಐ ಗವಾಯಿ, ಉತ್ತರ ಪ್ರದೇಶ ಪ್ರಬಲ ಮತ್ತು ಶ್ರಮಶೀಲ ಮುಖ್ಯಮಂತ್ರಿಯನ್ನು ಹೊಂದಿದೆ ಎಂದು ಆಗಾಗ್ಗೆ ಹೇಳಲಾಗುತ್ತದೆ. ಆದರೆ ಸ್ವತಃ ರಾಜ್ಯವೇ ಶಕ್ತಿಶಾಲಿ ಜನರ ನೆಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಿಧಾನದ ಅಂತಿಮ ಕರಡನ್ನು ಮಂಡಿಸಿದಾಗ, ಡಾ. ಬಿ ಆರ್ ಅಂಬೇಡ್ಕರ್ ಅವರು, ಸಂಪೂರ್ಣವಾಗಿ ಒಕ್ಕೂಟ ಸರ್ಕಾರವೂ ಇರದ ಇಡಿಯಾಗಿ ಏಕಾತ್ಮಕವೂ ಅಲ್ಲದ ವ್ಯವಸ್ಥೆ ಬೇಕೆಂದು ಹೇಳಿದ್ದರು ಎಂಬುದನ್ನು ಅವರು ಇದೇ ವೇಳೆ ಸ್ಮರಿಸಿದರು.

"ದೇಶ ಒಗ್ಗಟ್ಟಿನಿಂದ ಇರಬೇಕೆಂದು ಸಂವಿಧಾನ ಹೇಳುತ್ತದೆ. ನಮ್ಮ ದೇಶದ ಮೇಲೆ ದಾಳಿಯಾದಾಗಲೆಲ್ಲಾ ಅದು ವಿಜಯಶಾಲಿಯಾಗಿ ಹೊರಹೊಮ್ಮಿದ್ದು ಆ ಕೀರ್ತಿ ನಮ್ಮ ಸಂವಿಧಾನಕ್ಕೇ ಸಲ್ಲಬೇಕು" ಎಂದು ಸಿಜೆಐ ಗವಾಯಿ ಹೇಳಿದರು.

ಭಾರತದ ಸಮಾಜೋ-ಆರ್ಥಿಕ ಅಸಮಾನತೆಗಳನ್ನು ಪರಿಹರಿಸುವುದು ಪ್ರಜಾಪ್ರಭುತ್ವವಾಗಿ ಭಾರತದ ಯಶಸ್ಸಿಗೆ ಮುಖ್ಯ ಎಂಬ ಡಾ. ಅಂಬೇಡ್ಕರ್ ಅವರು ನೀಡಿದ್ದ ಎಚ್ಚರಿಕೆಯನ್ನು ಅವರು ನೆನಪಿಸಿಕೊಂಡರು.

"ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಭಾಷಣ ಮಾಡುತ್ತಾ.. ನಾವು ಒಬ್ಬ ವ್ಯಕ್ತಿ-ಒಂದು ಮತ-ಒಂದು ಮೌಲ್ಯದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ, ಅದರ ಮೂಲಕ ನಾವು ರಾಜಕೀಯ ಸಮಾನತೆಯನ್ನು ತರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ವಿಚಾರವೇನು? ಸಾಮಾಜಿಕ ಚೌಕಟ್ಟಿನಲ್ಲಿ, ದೇಶವು ನಾಲ್ಕು ಚೌಕಟ್ಟುಗಳಾಗಿ (ವರ್ಣಗಳು) ವಿಂಗಡಿಸಲಾಗಿದೆ, ಅಲ್ಲಿ ಒಂದರಿಂದ ಮತ್ತೊಂದಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಮತ್ತು ಸಂಪತ್ತು ಕೆಲವರ ಕೈಯಲ್ಲಿ ಕೇಂದ್ರೀಕೃತವಾಗಿರುತ್ತದೆ ಎಂದು ಅವರು ಉತ್ತರಿಸಿದ್ದರು. ಇದನ್ನು ನಾವು ಪರಿಹರಿಸದ ಹೊರತು ಪ್ರಜಾಪ್ರಭುತ್ವವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದರು," ಎಂದು ಸಿಜೆಐ ಗವಾಯಿ ಹೇಳಿದರು.

ಹಲವು ವರ್ಷಗಳಿಂದ ಕಾರ್ಯಾಂಗ ಮತ್ತು ನ್ಯಾಯಾಂಗ ಸಾಮರಸ್ಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದ ಅವರು ಸಂವಿಧಾನವನ್ನು ವ್ಯಾಖ್ಯಾನಿಸುವಲ್ಲಿ ಮತ್ತು ಅದು ಒದಗಿಸುವ ಮೂಲಭೂತ ಹಕ್ಕುಗಳ ಮಹತ್ವವನ್ನು ಗುರುತಿಸುವಲ್ಲಿ ಸುಪ್ರೀಂ ಕೋರ್ಟ್‌ನ ಪಾತ್ರ ಮಹತ್ವದ್ದು ಎಂದರು.

Also Read
ನಿವೃತ್ತಿ ನಂತರ ಯಾವುದೇ ಹುದ್ದೆ ಪಡೆಯದಿರಲು ನ್ಯಾ. ಓಕಾ ಮತ್ತು ನಾನು ನಿರ್ಧರಿಸಿದ್ದೇವೆ: ಸಿಜೆಐ ಬಿ ಆರ್‌ ಗವಾಯಿ

ಕಾನೂನಾತ್ಮಕ ಆಡಳಿತದಲ್ಲಿ ವಕೀಲರು  ನಿರ್ಣಾಯಕ ಪಾತ್ರ ವಹಿಸುತ್ತಾರೆ. ನ್ಯಾಯಾಧೀಶ ವರ್ಗ ಮತ್ತು ವಕೀಲ ವರ್ಗ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದೇ ರಥದ ಎರಡು ಚಕ್ರಗಳು. ಅವು ಒಟ್ಟಿಗೆ ಕೆಲಸ ಮಾಡದಿದ್ದರೆ ನ್ಯಾಯದ ರಥ ಮುಂದಡಿ ಇಡುವುದಿಲ್ಲ ಎಂದರು.

ಮಹಾಕುಂಭ ಮೇಳವನ್ನು ಸುಗಮವಾಗಿ ನಡೆಸುವಲ್ಲಿ ಅಲಾಹಾಬಾದ್ ಹೈಕೋರ್ಟ್ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಲ್ಲೇಖಿಸಿದರು. ಎಲ್ಲವೂ ಶಾಂತಿಯುತವಾಗಿ ನಡೆಯಲು ಅವಕಾಶ ನೀಡಿದ ಹೈಕೋರ್ಟ್‌ನ ಬೆಂಬಲವನ್ನು ಅವರು ಶ್ಲಾಘಿಸಿದರು. ನ್ಯಾಯಾಲಯವು ಸರ್ಕಾರದ ಯಾವುದೇ ನಿರ್ಧಾರಗಳಿಗೆ ತಡೆ ನೀಡಿದ್ದರೆ ಈ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದರು. ನ್ಯಾಯಾಲಯದ ಕಟ್ಟಡಗಳಿಗೆ ಒದಗಿಸಲಾಗಿರುವ ಮೂಲಭೂತ ಸೌಕರ್ಯಗಳ ಕುರಿತಂತೆ ವಕೀಲರ ಗಮನ ಸೆಳೆದರು.

Kannada Bar & Bench
kannada.barandbench.com