ಸಾಂವಿಧಾನಿಕ ಯೋಜನೆ ಅಡಿಯಲ್ಲಿ ಸಾಂವಿಧಾನಿಕ ಕಾರ್ಯವಿಧಾನ ಮತ್ತು ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಚುನಾವಣಾ ಆಯೋಗಗಳು ಮತ್ತು ಸುಪ್ರೀಂ ಕೋರ್ಟ್‌ಗಳ ಪಾತ್ರವನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶನಿವಾರ ಎತ್ತಿ ತೋರಿಸಿದರು.
ಬಾಂಗ್ಲಾದೇಶದ ಢಾಕಾದಲ್ಲಿ ಇಂದು ಆಯೋಜಿಸಲಾಗಿದ್ದ ದಕ್ಷಿಣ ಏಷ್ಯಾದ ಸಾಂವಿಧಾನಿಕ ನ್ಯಾಯಾಲಯಗಳ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಸ್ಪಷ್ಟತೆ ಮತ್ತು ಅನಿಶ್ಚಿತತೆಯ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದಂತಹ ಸಂಸ್ಥೆಗಳು ಎದ್ದು ನಿಲ್ಲಬೇಕು ಎಂದು ಸಿಜೆಐ ಅಭಿಪ್ರಾಯಪಟ್ಟರು.
"ಸಂವಿಧಾನ ಎಂಬುದು ಆದಾಯ ತೆರಿಗೆ ಕಾಯಿದೆಯಂತಲ್ಲ. ಆಡಳಿತದ ಸಂಸ್ಥೆಯ ನ್ಯಾಯಸಮ್ಮತತೆ ಎಂಬುದು ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಅಸ್ಪಷ್ಟತೆ ಮತ್ತು ಅನಿಶ್ಚಿತತೆಯ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಇತ್ಯಾದಿಗಳು ಎದ್ದು ನಿಂತಾಗ ಮಾತ್ರ ಅದು (ಸಾಂವಿಧಾನಿಕ ವ್ಯವಸ್ಥೆ) ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳಿದರು.
ನೆರೆಯ ದೇಶಗಳಿಂದ ಕಾನೂನುಗಳನ್ನು ಉತ್ತಮವಾಗಿ ಪರೀಕ್ಷಿಸಲು ಸಹಾಯವಾಗುವ ನಿಟ್ಟಿನಲ್ಲಿ ದಕ್ಷಿಣ ಏಷ್ಯಾದ ಉನ್ನತ ನ್ಯಾಯಾಂಗದ ನಡುವೆ ತುಲನಾತ್ಮಕ ಸಾಂವಿಧಾನಿಕ ಪ್ರಕ್ರಿಯೆ ಅಗತ್ಯವಿದೆ ಎಂದು ಕರೆ ನೀಡಿದರು.
...ಸಾರ್ವಜನಿಕ ಸ್ಥಳವನ್ನು ತಾರತಮ್ಯದ ಸ್ಥಳವೆಂದು ಗುರುತಿಸುವುದು ನಮ್ಮ ಸಾಂಸ್ಕೃತಿಕ ಸನ್ನಿವೇಶದಲ್ಲಿ ಮಹತ್ವದ್ದಾಗಿದೆ. ನಮ್ಮ ಸಂವಿಧಾನವು ಪ್ರಜಾಪ್ರಭುತ್ವಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಸಂಸ್ಥೆಗಳ ಅಂಶಗಳನ್ನು ಉಳಿಸಿಕೊಂಡಿದೆ. ನಮ್ಮ ನ್ಯಾಯಾಲಯಗಳು ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು" ಎಂದರು.
ಹಾಗೆ ವಿವಿಧ ದೇಶಗಳ ನ್ಯಾಯಾಲಯಗಳ ನಡುವಿನ ಸಂವಾದಗಳು ನ್ಯಾಯಾಂಗ ಮೈತ್ರಿಗೆ ಸಾಕ್ಷಿಯಾಗಿವೆ. ಎಂದು ಅವರು ತಿಳಿಸಿದರು.
ಭಾರತ ಮತ್ತು ಬಾಂಗ್ಲಾದೇಶದ ಬೆಳವಣಿಗೆಯಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನು ಆಡಳಿತ ವಹಿಸಿರುವ ಪ್ರಮುಖ ಪಾತ್ರದ ಬಗ್ಗೆ ಸಿಜೆಐ ಮಾತನಾಡಿದರು.
"ಭಾರತೀಯ ಸಂವಿಧಾನ ರಚನೆಯಾದಾಗ ಅದು ಉಳಿಯುತ್ತದೆಯೇ ಎಂದು ಕೇಳಲಾಯಿತು. ಸಂವಿಧಾನವನ್ನು ಅಳವಡಿಸಿಕೊಂಡ ಮಾತ್ರಕ್ಕೆ ಅಸಮಾನತೆ ನಿರ್ಮೂಲನೆಯಾಗುವುದಿಲ್ಲ. ಜನರನ್ನು ಹಕ್ಕುಗಳನ್ನು ಹೊಂದಿರುವ ನಾಗರಿಕರು ಎಂದು ನಮ್ಮ ಸಂವಿಧಾನ ಗುರುತಿಸುತ್ತದೆ. ಕಾನೂನುಬದ್ಧ ಕಾಳಜಿ ಹೊಂದಿರುವ ಯಾರಿಗಾದರೂ ಪರಿಹಾರ ನೀಡಲು ಅನುವಾಗುವಂತೆ ರಿಟ್ ಹೊರಡಿಸುವ ನ್ಯಾಯಾಲಯಗಳನ್ನು ಸಂವಿಧಾನ ಸ್ಥಾಪಿಸಿತು" ಎಂದು ಅವರು ಹೇಳಿದರು.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಅಲ್ಲಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಹಾಗೂ ಅವರ ಪತ್ನಿ, ಸಿಜೆಐ ಡಿ ವೈ ಚಂದ್ರಚೂಡ್ ಅವರ ಪತ್ನಿ ಕಲ್ಪನಾ ದಾಸ್ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.