[ಆದಿಯೋಗಿ ಪ್ರತಿಮೆ ನಿರ್ಮಾಣ] ಟಿವಿ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯ ಗುಣಮಟ್ಟ ಪರಿಗಣಿಸುವುದಿಲ್ಲ: ಸಿಜೆ ವರಾಳೆ

“ಟಿ ವಿ ಮಾಧ್ಯಮಗಳು ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರನ್ನು ಅಶಾಂತಿ ಭೂಷಣ್‌ ಎಂದು ಜರಿದಿವೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ಕೋರಿದ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಂ ಶಿವಕುಮಾರ್‌.
Karnataka HC and Jaggi Vasudev
Karnataka HC and Jaggi Vasudev
Published on

“ಟಿವಿ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯ ಗುಣಮಟ್ಟವನ್ನು ನಾವು ಪರಿಗಣಿಸುವುದಿಲ್ಲ. ಈ ವಿಚಾರದಲ್ಲಿ ನೀವು (ಅರ್ಜಿದಾರರು) ಕ್ರಮಕೈಗೊಳ್ಳಬಹುದು” ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಅರ್ಜಿದಾರರನ್ನು ಕುರಿತು ಮೌಖಿಕವಾಗಿ ಹೇಳಿತು.

ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದಲ್ಲಿ ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣ ಪ್ರಶ್ನಿಸಿರುವ ಪ್ರಕರಣದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರನ್ನು ಟಿ ವಿ ಮಾಧ್ಯಮಗಳು ʼಅಶಾಂತಿ ಭೂಷಣ್‌ʼ ಎಂದು ಪದೇಪದೇ ಹೇಳಿವೆ” ಎಂದು ಪೀಠಕ್ಕೆ ವಿವರಿಸಿದಾಗ ನ್ಯಾಯಾಲಯವು ಮೇಲಿನಂತೆ ಹೇಳಿತು.

ನಂದಿ ಬೆಟ್ಟದ ಸಮೀಪ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನಿರ್ಮಿಸಿರುವುದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್‌ ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಆದಿಯೋಗಿ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 2023ರ ಜನವರಿ 11ರಂದು ಯಥಾಸ್ಥಿತಿ ಕಾಪಾಡುವಂತೆ ಇಶಾ ಯೋಗ ಕೇಂದ್ರಕ್ಕೆ ನಿರ್ದೇಶಿಸಿರುವ ಆದೇಶವು ಮುಂದುವರಿಯಲಿದೆ ಎಂದು ಪೀಠವು ಹೇಳಿತು.

ಈ ಸಂದರ್ಭದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಂ ಶಿವಕುಮಾರ್‌ ಅವರು “ಟಿ ವಿ ಮಾಧ್ಯಮಗಳು ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರನ್ನು ಅಶಾಂತಿ ಭೂಷಣ್‌ ಎಂದು ಜರಿದಿವೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ಪೀಠಕ್ಕೆ ಕೋರಿದರು.

ಆಗ ನ್ಯಾ. ಕಿಣಗಿ ಅವರು “ಟಿವಿ ಮಾಧ್ಯಮಗಳು ರಿಟ್‌ ಅರ್ಜಿಯಲ್ಲಿ ಪಕ್ಷಕಾರರಾಗಿಲ್ಲ. ಪ್ರತ್ಯೇಕವಾಗಿ ಮಾಧ್ಯಮಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿ” ಎಂದು ಸಲಹೆ ನೀಡಿದರು.

ಆಗ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು “ಈ ವಿಚಾರದಲ್ಲಿ ನೀವು ಕ್ರಮಕೈಗೊಳ್ಳಬಹುದು. ಟಿವಿ ಮಾಧ್ಯಮಗಳಲ್ಲಿ ಚರ್ಚೆಯ ಗುಣಮಟ್ಟವನ್ನು ನಾವು ಪರಿಗಣಿಸುವುದಿಲ್ಲ” ಎಂದರು.

ಈ ಮಧ್ಯೆ, ಇಶಾ ಯೋಗ ಕೇಂದ್ರ ಪ್ರತಿನಿಧಿಸಿದ್ದ ವಕೀಲರು “ಯಥಾಸ್ಥಿತಿ ಆದೇಶವು ಪೂರ್ವಗ್ರಹ ಪೀಡಿತವಾಗಿದೆ. ಆದ್ಯತೆಯ ಮೇರೆಗೆ ಪ್ರಕರಣ ಆಲಿಸಬೇಕು” ಎಂದರು.

Also Read
ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್‌ ಅನುಮತಿ; ಕಾಮಗಾರಿಗೆ ನಿರ್ಬಂಧ ಮುಂದುವರಿಕೆ

ಇದಕ್ಕೆ ನ್ಯಾ. ವರಾಳೆ ಅವರು “ಪೂರ್ವಗ್ರಹ ಉಂಟು ಮಾಡುವ ವಿಚಾರ ಏನಿದೆ. ಪರಿಸರಕ್ಕೆ ಹಾನಿ ಮಾಡುವುದಿಲ್ಲ ಎಂದು ಹೇಳಿ ನ್ಯಾಯಾಲಯದ ಮುಂದೆ ವಾಗ್ದಾನ ನೀಡಲಾಗಿದೆ. ಇದನ್ನು ಉಭಯ ಪಕ್ಷಕಾರರು ಒಪ್ಪಿದ್ದಾರೆ. ಹೀಗಿರುವಾಗ ಪೂರ್ವಗ್ರಹದ ಪ್ರಶ್ನೆ ಎಲ್ಲಿದೆ? ನಾವು ಪೂರ್ವಗ್ರಹ ಉಂಟು ಮಾಡುವ ಯಾವುದೇ ಆದೇಶ ಮಾಡಿಲ್ಲ. ಅರ್ಹತೆಯ ವಿಚಾರದ ಕುರಿತು ಎಲ್ಲರ ವಾದ ಆಲಿಸಲಾಗುವುದು. ಎಲ್ಲರ ಹಿತಾಸಕ್ತಿಯನ್ನು ಕಾಯಲಾಗುವುದು. ಪಕ್ಷಾಕರರ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳಲಾಗದು. ಈಗ ನಿಮ್ಮ ಪ್ರಕರಣವನ್ನು ಕೈಗೆತ್ತುಕೊಂಡರೆ ಎಲ್ಲರೂ ನಾಳೆ ನಮ್ಮ ಪ್ರಕರಣ ಪರಿಗಣಿಸಬೇಕು ಎಂದು ಕೋರಬಹುದು. ಪ್ರಾಯೋಗಿಕವಾಗಿ ಇದು ಸಾಧ್ಯವಿಲ್ಲ” ಎಂದು ಹೇಳಿ, ಅರ್ಜಿ ವಿಚಾರಣೆ ಮುಂದೂಡಿದರು.

Kannada Bar & Bench
kannada.barandbench.com