ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್‌ ಅನುಮತಿ; ಕಾಮಗಾರಿಗೆ ನಿರ್ಬಂಧ ಮುಂದುವರಿಕೆ

ಕಾರ್ಯಕ್ರಮಕ್ಕೆ ಅಗತ್ಯ ಇರುವುದನ್ನು ಹೊರತುಪಡಿಸಿ ಯಾವುದೇ ತೆರನಾದ ಅರಣ್ಯ ಹಾನಿ ಅಥವಾ ನಿರ್ಮಾಣ ಕಾಮಗಾರಿ ನಡೆಸುವುದಿಲ್ಲ ಎಂಬ ಇಶಾ ಯೋಗ ಕೇಂದ್ರದ ವಾಗ್ದಾನ ಮಾನ್ಯ ಮಾಡಿದ ನ್ಯಾಯಾಲಯ.
Isha Foundation and Karnataka High Court
Isha Foundation and Karnataka High Court

ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮ ಹಾಗೂ ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಮಾಡುವ ಸಂಬಂಧ ಜನವರಿ 15ರಂದು ಆಯೋಜಿಸಿರುವ ಕಾರ್ಯಕ್ರಮ ನಡೆಸಲು ಇಶಾ ಯೋಗ ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿಸಿದೆ. ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಶಾ ಯೋಗ ಕೇಂದ್ರದ ಕೋರಿಕೆಯ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್‌ ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಪ್ರತಿವಾದಿಗಳು ಪಿಐಎಲ್‌ ವಿರೋಧಿಸಿ, ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಗಣ್ಯರನ್ನು ಈಗಾಗಲೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಅಗತ್ಯ ಇರುವುದನ್ನು ಹೊರತುಪಡಿಸಿ ಯಾವುದೇ ತೆರನಾದ ಅರಣ್ಯ ಹಾನಿ ಅಥವಾ ನಿರ್ಮಾಣ ಕಾಮಗಾರಿ ನಡೆಸುವುದಿಲ್ಲ ಎಂಬ ವಾಗ್ದಾನವನ್ನು ಇಶಾ ಯೋಗ ಕೇಂದ್ರ ನೀಡಿದೆ. ಅರ್ಜಿಯ ಅರ್ಹತೆಯ ಬಗ್ಗೆ ಅರ್ಜಿದಾರರು ಮತ್ತು ಪ್ರತಿವಾದಿಗಳ ಆಕ್ಷೇಪಣೆಯನ್ನು ನ್ಯಾಯಾಲಯವು ಪರಿಗಣಿಸಿಲ್ಲ. ಇಶಾ ಯೋಗ ಕೇಂದ್ರದ ಕಾರ್ಯಕ್ರಮದ ತುರ್ತನ್ನು ಪರಿಗಣಿಸಿ ಜನವರಿ 11ರಂದು ಮಾಡಿರುವ ಆದೇಶವು ಜನವರಿ 15ರಂದು ನಡೆಸಲಿರುವ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದಿಲ್ಲ. ಉಳಿದಂತೆ ಯಥಾಸ್ಥಿತಿ ಕಾಪಾಡುವಂತೆ ಮಾಡಿರುವ ಆದೇಶವು ಮುಂದಿನ ವಿಚಾರಣೆಯವರೆಗೆ ಮುಂದುವರಿಯಲಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ. ಫೆಬ್ರವರಿ 2ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಇಶಾ ಯೋಗ ಕೇಂದ್ರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಹಾಗೂ ವಕೀಲ ಪಿ ಎನ್‌ ಮನಮೋಹನ್‌ ಅವರು “ಅರ್ಜಿದಾರರು ನೈಜ ವಿಚಾರಗಳನ್ನು ಮರೆಮಾಚಿದ್ದಾರೆ. ಆದಿಯೋಗಿ ಮೂರ್ತಿಯು ಆರೋಪಿಸಿರುವ ಸ್ಥಳದಿಂದ 31 ಕಿ. ಮೀ ದೂರದಲ್ಲಿದೆ. ಜನವರಿ 15ರಂದು ಕಾರ್ಯಕ್ರಮ ನಡೆಸಲು ಈ ಹಿಂದೆಯೇ ನಿರ್ಣಯಿಸಲಾಗಿದೆ. ಕಾರ್ಯಕ್ರಮದಲ್ಲಿ ಅತ್ಯುನ್ನತ ಗಣ್ಯರು ಭಾಗವಹಿಸುತ್ತಿದ್ದು, ಅವರ ಅನುಕೂಲ ಆಧರಿಸಿ ಕಾರ್ಯಕ್ರಮ ನಿಯೋಜಿಸಲಾಗಿದೆ. ಪಿಐಎಲ್‌ ಸಲ್ಲಿಕೆಗೂ ಮುನ್ನವೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಗಣ್ಯರ ಅನುಮತಿ ಮತ್ತು ಒಪ್ಪಿಗೆ ಪಡೆಯಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

ಇದನ್ನು ಆಲಿಸಿದ ಪೀಠವು “ಕೆಲವು ವಿಚಾರಗಳನ್ನು ಪರಿಗಣಿಸಬೇಕಿದೆ. ಉಪರಾಷ್ಟ್ರಪತಿ ಸೇರಿದಂತೆ ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ತಾವು ತಿಳಿಸಿದ್ದೀರಿ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರಿಗೆ ತಪ್ಪು ಸಂದೇಶ ರವಾನೆಯಾಗಬಾರದು ಎಂಬುದು ನಿಮ್ಮ ಕಳಕಳಿ. ನಿಯೋಜಿತವಾಗಿರುವಂತೆ ಕಾರ್ಯಕ್ರಮ ನಡೆಯುವುದಕ್ಕೆ ನಾವು ಅನುಮತಿಸುತ್ತೇವೆ. ಈ ವಿಚಾರದಲ್ಲಿ ಕಳೆದ ವಿಚಾರಣೆಯಲ್ಲಿ ಮಾಡಿರುವ ಯಥಾಸ್ಥಿತಿ ಕಾಪಾಡುವ ಆದೇಶ ಅನ್ವಯಿಸುವುದಿಲ್ಲ. ಉಳಿದಂತೆ ಮಧ್ಯಂತರ ಆದೇಶ ಮುಂದುವರಿಯಲಿದೆ. ಆನಂತರ 2-3 ವಾರಗಳ ಬಳಿಕ ಪ್ರಕರಣದ ಅರ್ಹತೆ ಕುರಿತು ನಿಮ್ಮೆಲ್ಲರ ವಾದವನ್ನು ವಿಸ್ತೃತವಾಗಿ ಆಲಿಸಲಾಗುವುದು” ಎಂದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು “ಉದ್ದೇಶಿತ ಕಾರ್ಯಕ್ರಮ ನಡೆಸುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಕಾರ್ಯಕ್ರಮದ ಹೆಸರಿನಲ್ಲಿ ಅರಣ್ಯ ನಾಶ ಮತ್ತು ನಿರ್ಮಾಣ ಕಾಮಗಾರಿಗೆ ಅವಕಾಶ ಇರಬಾರದು. ಪ್ರತಿವಾದಿಗಳು ಉಪರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಹೆಸರು ಬಳಕೆ ಮಾಡಿಕೊಂಡು ತಮ್ಮ ಬಳಿ ಇರುವ ರಾಜಕೀಯ ಪ್ರಭಾವವನ್ನು ತೋರಿಸುತ್ತಿದ್ದಾರೆ. ಹೀಗಾಗಿ, ಅವರು ಅರಣ್ಯದಲ್ಲಿ ರಸ್ತೆ ನಿರ್ಮಾಣ ಇತ್ಯಾದಿ ಚಟುವಟಿಕೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಾವಿರಾರು ಕಾರುಗಳು ಅಲ್ಲಿ ಓಡಾಡಬಹುದಾಗಿದೆ. ವಾಸ್ತವದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬಾರದಿತ್ತು. ಈ ಕಾಡಿನ ಮಧ್ಯದಲ್ಲಿ ನಿರ್ಮಾಣ ಕಾಮಗಾರಿಗೆ ಮೊದಲನೆಯಾದಗಿ ಅನುಮತಿ ನೀಡಬಾರದಿತ್ತು. ಕೆಲವು ಕಾಮಗಾರಿಗಳನ್ನು ಈಗ ಕೈಗೊಂಡರೆ ಅವುಗಳನ್ನು ರದ್ದುಪಡಿಸಲಾಗದು. ಯಾವುದೇ ತೆರನಾದ ಕಾಮಗಾರಿ ನಡೆಸದೆ, ಅರಣ್ಯ ನಾಶ ಮಾಡದೇ ಕಾರ್ಯಕ್ರಮ ನಡೆಸಬಹುದು” ಎಂದರು.

Also Read
ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣ: ಯಥಾಸ್ಥಿತಿ ಕಾಪಾಡಲು ಇಶಾ ಯೋಗ ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

ಈ ಮಧ್ಯೆ, ಅರ್ಜಿದಾರರ ಪರ ವಕೀಲರಲ್ಲಿ ಒಬ್ಬರಾದ ಎಂ ಶಿವಕುಮಾರ್‌ ಅವರು “ಇಶಾ ಯೋಗ ಕೇಂದ್ರವು ಅರಣ್ಯಕ್ಕೆ ಅಪಾರ ಹಾನಿ ಮಾಡಿದೆ. ಕ್ಷಮಿಸಲಾರದ ಪಾಪ ಕೃತ್ಯವನ್ನು ಅವರು ಎಸಗಿದ್ದಾರೆ” ಎಂದು ಆಕ್ಷೇಪಿಸಿದರು. ಆಗ ಮಧ್ಯಪ್ರವೇಶಿಸಿದ ಉದಯ್‌ ಹೊಳ್ಳ ಅವರು “ಅರ್ಜಿದಾರರು ನೈಜ ವಿಚಾರಗಳನ್ನು ಮರೆಮಾಚಿದ್ದಾರೆ” ಎಂದು ಆಕ್ಷೇಪಿಸಿದರು. ಅಂತಿಮವಾಗಿ ಪೀಠವು ಕಾರ್ಯಕ್ರಮಕ್ಕೆ ನಡೆಸಲು ಅನುಮತಿಸಿತು.

Related Stories

No stories found.
Kannada Bar & Bench
kannada.barandbench.com