
ಮೈಸೂರಿನ ದಟ್ಟಗಳ್ಳಿಯ 3ನೇ ಹಂತದ ಬಡಾವಣೆಯಲ್ಲಿ ನ್ಯಾಯಬೆಲೆ ಅಂಗಡಿಗೆ ಹಂಚಿಕೆಯಾದ ನಾಗರಿಕ ಸೌಲಭ್ಯ (ಸಿಎ) ನಿವೇಶನದಲ್ಲಿ ಕನಕದಾಸ ಪತ್ತಿನ ಸಹಕಾರ ಸಂಘದ ಆಡಳಿತಾತ್ಮಕ ಕಚೇರಿ ಕಟ್ಟಡ ನಿರ್ಮಿಸುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನೋಟಿಸ್ ಜಾರಿಗೊಳಿಸಿದೆ.
ಮೈಸೂರು ನಿವಾಸಿಗಳಾದ ಎಂ ಶಿವಕುಮಾರ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನಯ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ವಿ ಶ್ರೀಶಾನಂದ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಮುಡಾ ಹಾಗೂ ಮೈಸೂರು ನಗರ ಪಾಲಿಕೆ ಆಯುಕ್ತರು ಮತ್ತು ಕನಕದಾಸ ಪತ್ತಿನ ಸಹಕಾರ ಸಂಘಕ್ಕೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿತು. ಅರ್ಜಿ ಕುರಿತ ಮುಂದಿನ ಆದೇಶದವರೆಗೆ ವಿವಾದಿತ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಕುರಿತಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿದೆ.
ವಾಸು ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ರಚಿಸಿದ ದಟ್ಟಗಳ್ಳಿ 3ನೇ ಹಂತದ ಬಡಾವಣೆಯಲ್ಲಿ ಸಿಎ ನಿವೇಶನವೊಂದನ್ನು (ಸಿಎ-10-ಬಿ) ನ್ಯಾಯಬೆಲೆ ಅಂಗಡಿ, ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಸಾರ್ವಜನಿಕ ಬಳಕೆಯ ಉದ್ದೇಶಕ್ಕೆ ಮೀಸಲಿಡಲಾಗಿತ್ತು. ಮುಡಾವು ಈ ನಿವೇಶನವನ್ನು ನ್ಯಾಯಬೆಲೆ ಅಂಗಡಿಗೆ ಬಳಸಲು ಕನಕದಾಸ ಪತ್ತಿನ ಸಹಾಕರ ಸಂಘಕ್ಕೆ ಮಂಜೂರು ಮಾಡಿತ್ತು.
ಆದರೆ, ಅಲ್ಲಿ ನ್ಯಾಯ ಬೆಲೆ ಅಂಗಡಿಯ ಕಟ್ಟಡವನ್ನು ನಿರ್ಮಾಣ ಮಾಡದೆ ಸಂಘದ ಆಡಳಿತಾತ್ಮಕ ಕಚೇರಿ ಮತ್ತು ಅತಿಥಿ ಗೃಹ ನಿರ್ಮಾಣಕ್ಕೆ ಬಳಕೆ ಮಾಡುತ್ತಿದೆ. ಇದರಿಂದ ಕೂಡಲೇ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡವನ್ನು ತೆರವುಗೊಳಿಸಬೇಕು. ಸಿಎ ನಿವೇಶನವಾಗಿಯೇ ಮರು ಸ್ಥಾಪಿಸಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.