ಬಿಡಿಎಯಿಂದ ಅಕ್ರಮವಾಗಿ ಖಾಸಗಿ ವ್ಯಕ್ತಿಯ ಜಾಗದಲ್ಲಿ ರಸ್ತೆ ನಿರ್ಮಾಣ; ಪರಿಹಾರ ನೀಡಲು ಆದೇಶಿಸಿದ ಹೈಕೋರ್ಟ್‌

ಶಾಸನಬದ್ಧ ಸಂಸ್ಥೆಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಲವಂತವಾಗಿ, ಅಕ್ರಮವಾಗಿ, ಕಾನೂನಿಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಯ ಜಾಗವನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಿದೆ ಎಂದು ಚಾಟಿ ಬೀಸಿದ ನ್ಯಾಯಾಲಯ.
Karnataka HC and BDA
Karnataka HC and BDA

“ಶಾಸನಬದ್ಧ ಸಂಸ್ಥೆಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಲವಂತವಾಗಿ, ಅಕ್ರಮವಾಗಿ, ಕಾನೂನಿಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಯ ಜಾಗವನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಿದೆ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಚಾಟಿ ಬೀಸಿದ್ದು, ಭೂಮಾಲೀಕನಿಗೆ ಐದು ಲಕ್ಷ ರೂಪಾಯಿ ಪರಿಹಾರ ಮತ್ತು ಎರಡು ಗುಂಟೆ ಅಭಿವೃದ್ಧಿಪಡಿಸಿದ ಜಾಗ ನೀಡುವಂತೆ ಬಿಡಿಎಗೆ ಆದೇಶಿಸಿದೆ.

ಬಿಡಿಎ ಕ್ರಮ ಪ್ರಶ್ನಿಸಿ ಕೆ ಶ್ರಿನಿವಾಸ ಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಶಾಸನಬದ್ಧ ಸಂಸ್ಥೆಯಾದ ಬಿಡಿಎ ಬಲವಂತವಾಗಿ, ಅಕ್ರಮವಾಗಿ, ಕಾನೂನಿಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಯ ಜಾಗವನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಿದೆ. ಈಗ ಅರ್ಜಿದಾರರ ರೀತಿಯ ನಾಗರಿಕರು ಜಾಗ ರಕ್ಷಿಸಿಕೊಳ್ಳಬೇಕು ಎಂದು ನಿರೀಕ್ಷಿಸುವುದು ಮತ್ತು ಅದನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಅರ್ಜಿದಾರರ ಮೇಲಿದೆ ಎಂದು ಬಯಸಲಾಗದು” ಎಂದು ಪೀಠ ಹೇಳಿತು.

“ಶಾಸನಬದ್ಧ ಪ್ರಾಧಿಕಾರವಾದ ಬಿಡಿಎ ಅನ್ವಯವಾಗುವ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ. ಖಾಸಗಿ ವ್ಯಕ್ತಿಯ ಭೂಮಿಯನ್ನು ವಶಪಡಿಸಿಕೊಳ್ಳದೇ ಅದನ್ನು ಮುಂಚಿತವಾಗಿಯೇ ಲೇಔಟ್‌ ಅಭಿವೃದ್ಧಿಪಡಿಸಲು ಬಿಡಿಎ ಬಳಸಿಕೊಳ್ಳುವಂತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಹಲಸೂರು ಗ್ರಾಮದ ಸರ್ವೇ ನಂಬರ್ 35/4ರ 11 ಗುಂಟೆ ಜಾಗವು ಶ್ರೀನಿವಾಸ ಮೂರ್ತಿ ಅವರ ತಂದೆಯ ಒಡೆತನದಲ್ಲಿತ್ತು. ಆ ಜಾಗವನ್ನು 1967ರಲ್ಲಿ ಎಚ್‌ಎಎಲ್ 4ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಹಿಂದಿನ ನಗರ ಅಭಿವೃದ್ಧಿ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಸ್ವಾಧೀನಪಡಿಸಿಕೊಂಡಿತ್ತು. 1976ರಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಈ ಜಾಗವನ್ನು ಕೈಬಿಡಲಾಗಿತ್ತು. ಆದರೂ ಈ 11 ಗುಂಟೆ ಜಾಗದಲ್ಲಿ ಬಿಡಿಎ ಬಡಾವಣೆ ನಿರ್ಮಿಸಿತ್ತು.

Also Read
ನಮ್ಮದು ಕಲ್ಯಾಣ ರಾಜ್ಯವೇ ಹೊರತು ಈಸ್ಟ್‌ ಇಂಡಿಯಾ ಕಂಪೆನಿ ಆಳ್ವಿಕೆಯಲ್ಲ: ಬಿಡಿಎ ನಡೆಗೆ ಹೈಕೋರ್ಟ್‌ ಅಸಮಾಧಾನ

ಈ ಕುರಿತು ಮೂರ್ತಿ ಅವರ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಡಾವಣೆಗೆ ಬಳಸಿದ ಜಾಗಕ್ಕೆ ಶೇ 50ರಷ್ಟು ಅಭಿವೃದ್ಧಿಪಡಿಸಿದ ಪರ್ಯಾಯ ಜಾಗ ನೀಡುವಂತೆ ಬಿಡಿಎಗೆ ಹೈಕೋರ್ಟ್ ಆದೇಶಿಸಿತ್ತು. ಬಿಡಿಎ ಮಾತ್ರ 7 ಗುಂಟೆ ಜಾಗಕ್ಕೆ ಪರ್ಯಾಯವಾಗಿ 3.5 ಗುಂಟೆ ಅಭಿವೃದ್ಧಿಪಡಿಸಿದ ಜಾಗ ನೀಡಿತ್ತು. ಇದರಿಂದ ಶ್ರೀನಿವಾಸ್‌ಮೂರ್ತಿ 2016ರಲ್ಲಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಉಳಿದ 11 ಗುಂಟೆ ಜಾಗಕ್ಕೆ 2 ಗುಂಟೆ ಪರ್ಯಾಯ ಅಭಿವೃದ್ಧಿಪಡಿಸಿದ ಜಾಗ ನೀಡಲು ಬಿಡಿಎಗೆ ಆದೇಶಿಸುವಂತೆ ಕೋರಿದ್ದರು.

ಇದೀಗ ಹೈಕೋರ್ಟ್, ಎಚ್‌ಎಎಲ್ 4ನೇ ಹಂತಕ್ಕೆ ಬಡಾವಣೆ ನಿರ್ಮಾಣಗೊಂಡ ನಂತರ ನಿರ್ಮಿಸಿದ ಯಾವುದೇ ಬಡಾವಣೆಯಲ್ಲಿ 2 ಗುಂಟೆ ಅಭಿವೃದ್ಧಿ ಹೊಂದಿದ ಪರ್ಯಾಯ ಜಾಗ ಪಡೆಯಲು ಶ್ರೀನಿವಾಸ ಮೂರ್ತಿ ಅರ್ಹರಾಗಿದ್ದಾರೆ. ಹಾಗೆಯೇ, ಶ್ರೀನಿವಾಸ್ ಮೂರ್ತಿಗೆ ಬಿಡಿಎ ಐದು ಲಕ್ಷ ಪರಿಹಾರ ನೀಡಬೇಕು. ಆ ಮೊತ್ತವನ್ನು ತಪ್ಪಿತಸ್ಥರ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದು ಆದೇಶಿಸಿದೆ.

Kannada Bar & Bench
kannada.barandbench.com