ನಮ್ಮದು ಕಲ್ಯಾಣ ರಾಜ್ಯವೇ ಹೊರತು ಈಸ್ಟ್‌ ಇಂಡಿಯಾ ಕಂಪೆನಿ ಆಳ್ವಿಕೆಯಲ್ಲ: ಬಿಡಿಎ ನಡೆಗೆ ಹೈಕೋರ್ಟ್‌ ಅಸಮಾಧಾನ

ಪದ್ಮನಾಭನಗರ ನಿವಾಸಿಯೊಬ್ಬರ ಬೆಲೆಬಾಳುವ ನಿವೇಶನಗಳನ್ನು ನಾಗರಿಕ ಸೌಲಭ್ಯಗಳಿಗೆ ಮೀಸಲಿರಿಸಲಾದ (ಸಿ ಎ) ನಿವೇಶನಗಳು ಎಂದಿದ್ದ ಬಿಡಿಎ ಆಯುಕ್ತರ ಆದೇಶಗಳನ್ನು ಈಚೆಗೆ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌.
Justice Krishna S Dixit and Karnataka HC
Justice Krishna S Dixit and Karnataka HC

ಬೆಂಗಳೂರಿನ ಪದ್ಮನಾಭನಗರ ನಿವಾಸಿಯೊಬ್ಬರ ಬೆಲೆಬಾಳುವ ಎರಡು ನಿವೇಶನಗಳನ್ನು ನಾಗರಿಕ ಸೌಲಭ್ಯಗಳಿಗೆ ಮೀಸಲಿರಿಸಲಾದ (ಸಿ ಎ) ನಿವೇಶನಗಳು ಎಂದು ಆದೇಶಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರ ಆದೇಶಗಳನ್ನು ಈಚೆಗೆ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌, “ನಮ್ಮದು ಈಸ್ಟ್‌ ಇಂಡಿಯಾ ಕಂಪೆನಿಯ ಆಳ್ವಿಕೆಯಲ್ಲ. ಕಲ್ಯಾಣ ರಾಜ್ಯಕ್ಕೆ ಒಳಪಟ್ಟಿರುವ ಆಡಳಿತ” ಎಂದು ಮಾರ್ಮಿಕವಾಗಿ ನುಡಿದಿದೆ.

ಪದ್ಮನಾಭನಗರದ ಪಾರ್ಟಿ ಇನ್‌ ಪರ್ಸನ್‌ ಬಿ ವಿ ಓಂಪ್ರಕಾಶ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಶ್ರೀ ರಾಧಕೃಷ್ಣ ಹೌಸ್‌ ಬಿಲ್ಡಿಂಗ್‌ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ ಖಾಸಗಿ ಲೇಔಟ್‌ ಅಭಿವೃದ್ಧಿಪಡಿಸಿದ್ದು, ಇದಕ್ಕೆ ಕಟ್ಟಡ ನಿರ್ಮಾಣ ಕ್ಷೇತ್ರದ ತರಬೇತಿ ಮಂಡಳಿಯು (ಸಿಐಟಿಬಿ) 1993ರ ಅಕ್ಟೋಬರ್‌ 24ರಂದು ಒಪ್ಪಿಗೆ ನೀಡಿತ್ತು. ಈ ಸಂದರ್ಭದಲ್ಲಿ ಬಿಡಿಎ ಕಾಯಿದೆ-1976 ಜಾರಿಗೆ ಬಂದಿರಲಿಲ್ಲ. ಒಪ್ಪಿಗೆ ನೀಡಲಾಗಿದ್ದ ಲೇಔಟ್‌ ಯೋಜನೆಯ ಮಧ್ಯದಲ್ಲಿ ಅರ್ಜಿದಾರರ ನಿವೇಶನಗಳಾದ 86 ಮತ್ತು 86ಎ ಇವೆ. ಲೇಔಟ್‌ ಯೋಜನೆಗೆ ಒಪ್ಪಿಗೆ ನೀಡಿರುವುದಕ್ಕೂ ಆಕ್ಷೇಪಣೆಯಲ್ಲಿ ಬಿಡಿಎ ಸೊಲ್ಲೆತ್ತಿಲ್ಲ. 1973ರ ಲೇಔಟ್‌ ಯೋಜನೆಯ ಅಧಿಕೃತತೆ ಆಕ್ಷೇಪಿಸಿ 1990ರ ಅಕ್ಟೋಬರ್‌ 10ರಂದು ವ್ಯಾಪ್ತಿ ಹೊಂದಿದ ಕಂದಾಯ ಅಧಿಕಾರಿಯು ಸಲ್ಲಿಸಿರುವ ಅಫಿಡವಿಟ್‌ ಬಗ್ಗೆ ಬಿಡಿಎ ವಕೀಲರು ಗಮನಸೆಳೆದಿದ್ದಾರೆ. ಆದರೆ, ಇಂಥ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಮುನ್ನ ಯಾವುದಾದರೂ ತನಿಖೆ ನಡೆಸಲಾಗಿದೆಯೇ ಎಂಬುದರ ಬಗ್ಗೆ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ, ಕಾನೂನಿನಲ್ಲಿ ಇದಕ್ಕೆ ಮಾನ್ಯತೆ ಇಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“1985ರ ಜೂನ್‌ 7ರಂದು ಸೊಸೈಟಿಯು ಓಂಪ್ರಕಾಶ್‌ ಅವರಿಗೆ ಎರಡು ನಿವೇಶನಗಳನ್ನು ಕ್ರಯ ಮಾಡಿಕೊಟ್ಟಿದೆ. ಈ ಕ್ರಯ ಪತ್ರದಲ್ಲಿ ಕೆಲವು ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ 1997ರ ಮಾರ್ಚ್‌ 29ರಂದು ಮತ್ತೊಂದು ಕ್ರಯ ಪತ್ರ ಮಾಡಿಕೊಡಲಾಗಿದೆ. ಅಸಲಿ ಕ್ರಯ ಪತ್ರಕ್ಕೆ 30 ವರ್ಷಗಳಾಗಿವೆ. ಕ್ರಯ ಪತ್ರದ ಬಳಿಕ ಅರ್ಜಿದಾರರಿಗೆ ಖಾತಾ ವರ್ಗಾವಣೆ ಮಾಡಿಕೊಡಲಾಗಿದೆ; ಇದಕ್ಕೆ ತೆರಿಗೆ ಪಾವತಿಸಿರುವ ರಸೀದಿಗಳನ್ನು ಅರ್ಜಿದಾರರು ಹೊಂದಿದ್ದಾರೆ. ಆನಂತರ ಈ ನಿವೇಶನಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿದ್ದು, ಸಾಕಷ್ಟು ಹಣ ಖರ್ಚು ಮಾಡಿ ಓಂಪ್ರಕಾಶ್‌ ಅವರು ಕಟ್ಟಡ ನಿರ್ಮಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

“ಸಂವಿಧಾನದ 300ಎ ವಿಧಿಯಡಿ ಆಸ್ತಿಯ ಹಕ್ಕುಗಳನ್ನು ಖಾತರಿಪಡಿಸಲಾಗಿದೆ. ನಮ್ಮದು ಕಲ್ಯಾಣ ರಾಜ್ಯದ ಆಡಳಿತವೇ ಹೊರತು ವಿನಾ ಈಸ್ಟ್‌ ಇಂಡಿಯಾ ಕಂಪೆನಿಯ ಆಡಳಿತವಲ್ಲ. ಹೀಗಾಗಿ, ಬಿಡಿಎ ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ಗಂಭೀರವಾಗಿ ಪರಿಶೀಲಿಸಲಾಗುವುದು” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

"ಒಪ್ಪಿಗೆ ನೀಡಿರುವ ಯೋಜನೆಯು ಮೂಲ ದಾಖಲೆಯಾಗಿದ್ದು, ಅದಕ್ಕೆ ವಿರುದ್ದವಾಗಿ ಬಿಡಿಎ ಹೊರಡಿಸಿರುವ ಆಕ್ಷೇಪಾರ್ಹ ಪತ್ರ ಮತ್ತು ಆದೇಶಗಳು ಅತಾರ್ಕಿಕವಾಗಿವೆ. ಲೇಔಟ್‌ ಯೋಜನೆಯ ಅಧಿಕೃತತೆಯ ಬಗ್ಗೆ ಯಾವುದೇ ವಿವಾದ ಇಲ್ಲ. ಸೊಸೈಟಿಯಿಂದ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದರೆ, ಅರ್ಜಿದಾರರನ್ನು ಈ ಸ್ಥಿತಿಗೆ ದೂಡುವಂತಿರಲಿಲ್ಲ. ಮಾನವ ಜನ್ಮವು ಅತ್ಯಂತ ಅಲ್ಪದ್ದಾಗಿದ್ದು, ತಡವಾಗಿ ಕ್ರಮಕೈಗೊಳ್ಳುವುದು, ಕಾರಣ ತಿರಸ್ಕರಿಸುವುದು ಮತ್ತು ನ್ಯಾಯದಾನದ ತಿರಸ್ಕಾರವಾಗಿದೆ. ಈ ನೆಲೆಯಲ್ಲಿಯೂ ಆಕ್ಷೇಪಾರ್ಹವಾದ ಆದೇಶಗಳು ಅಸಿಂಧುವಾಗಲಿವೆ” ಎಂದು ಪೀಠ ಹೇಳಿದೆ.

“ದುಬಾರಿ ದಂಡ ವಿಧಿಸಲು ಇದು ಸೂಕ್ತವಾದ ಪ್ರಕರಣವಾಗಿದ್ದು, ಬಿಡಿಎ ವಕೀಲರ ಕೋರಿಕೆ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿದೆ. ವಜಾ ಮಾಡಲಾದ ಆದೇಶಗಳಿಗೆ ಸಂಬಂಧಿಸಿದಂತೆ ಬಿಡಿಎ ಯಾವುದೇ ಕ್ರಮಕೈಗೊಂಡಿದ್ದರೆ ಅವುಗಳನ್ನು ಆರು ವಾರಗಳಲ್ಲಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಅರ್ಜಿದಾರರು ದಂಡ ವಿಧಿಸಲು ಕೋರಿ ಮೆಮೊ ಸಲ್ಲಿಸಬಹುದಾಗಿದ್ದು. ಅದನ್ನು ತಪ್ಪಿತಸ್ಥ ಅಧಿಕಾರಿಗಳು ಪಾವತಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com