

ಹುಳು ಇದ್ದ ಆಹಾರ ಸೇವಿಸಿ ಅಸ್ವಸ್ಥಗೊಂಡ ರೈಲು ಪ್ರಯಾಣಿಕನಿಗೆ ₹25,000 ಪರಿಹಾರ ನೀಡುವಂತೆ ದೆಹಲಿಯ ಗ್ರಾಹಕ ನ್ಯಾಯಾಲಯ ಭಾರತೀಯ ರೈಲ್ವೆ ಊಟೋಪಚಾರ ಮತ್ತು ಪ್ರವಾಸೋದ್ಯಮ ನಿಗಮಕ್ಕೆ (ಐಆರ್‌ಸಿಟಿಸಿ) ಆದೇಶಿಸಿದೆ.
ಸೇವಾ ನ್ಯೂನತೆಯ ಕಾರಣಕ್ಕೆ ಐಆರ್‌ಸಿಟಿಸಿ ತಪ್ಪಿತಸ್ಥನಾಗಿದೆ ಎಂದು ಅಕ್ಟೋಬರ್ 28ರಂದು ಹೊರಡಿಸಲಾದ ಆದೇಶದಲ್ಲಿ, ಅಧ್ಯಕ್ಷೆ ಮೋನಿಕಾ ಶ್ರೀವಾಸ್ತವ ಮತ್ತು ಸದಸ್ಯ ಕಿರಣ್ ಕೌಶಲ್ ಅವರನ್ನೊಳಗೊಂಡ ಜಿಲ್ಲಾ ಗ್ರಾಹಕ ಪರಿಹಾರ ಆಯೋಗದ (ಡಿಸಿಡಿಆರ್‌ಸಿ ಸಮಿತಿ ತೀರ್ಪು ನೀಡಿದೆ.
ವಿಷಾದ ವ್ಯಕ್ತಪಡಿಸಿರುವ ಐಆರ್‌ಸಿಟಿಸಿ ಸೇವಾ ಪೂರೈಕೆದಾರರಿಗೆ ದಂಡ ವಿಧಿಸಿದ್ದರೂ, ದೂರುದಾರರು ಅನುಭವಿಸಿದ ದೈಹಿಕ ಮತ್ತು ಮಾನಸಿಕ ಆಘಾತ ಸರಿಪಡಿಸುವುದು ಸಾಧ್ಯವಿಲ್ಲ ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿರುವ ಗ್ರಾಹಕರಿಗೆ ನೀಡಲಾಗುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿ, ನಿರ್ದಿಷ್ಟ ಮಟ್ಟದ ಮಾನದಂಡಗಳನ್ನು ಪಾಲಿಸುವುದು ಪ್ರತಿವಾದಿಯಕರ್ತವ್ಯ. ಈ ಹಿನ್ನಲೆಯಲ್ಲಿ ಪ್ರತಿವಾದಿ ಒದಗಿಸಿದ ಸೇವೆಯಲ್ಲಿ ನ್ಯೂನತೆ ಇರುವುದು ಪತ್ತೆಯಾಗಿದ್ದು ಪರಿಹಾರದ ರೂಪದಲ್ಲಿ ₹25,000 ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಆಯೋಗದ ಆದೇಶ ತಿಳಿಸಿದೆ.
ಡಿಸೆಂಬರ್ 28, 2018 ರಂದು ರಾಜ್ ಎಂಬುವವರು ಪೂರ್ವ ಎಕ್ಸ್‌ಪ್ರೆಸ್‌ನಲ್ಲಿ ನವದೆಹಲಿಯಿಂದ ಜಾರ್ಖಂಡ್‌ನ ಜಸಿದಿಹ್‌ಗೆ ಪ್ರಯಾಣಿಸುತ್ತಿದ್ದಾಗ, ₹80 ಬೆಲೆಯ ತರಕಾರಿ ಬಿರಿಯಾನಿಗೆ ಆರ್ಡರ್ ಮಾಡಿದ್ದರು.
ಆಹಾರದಲ್ಲಿ ಸತ್ತ ಬಿಳಿ ಹುಳು ಪತ್ತೆಯಾಗಿತ್ತು. ಆಹಾರ ಸೇವಿಸಿದ ಕೂಡಲೇ ಅವರ ಆರೋಗ್ಯ ಹದಗೆಟ್ಟಿತ್ತು. ವಾಂತಿಯೂ ಆಗಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದರು.
ರೈಲಿನಲ್ಲಿ ಒಬ್ಬಂಟಿಯಾಗಿದ್ದ ರಾಜ್ ತಕ್ಷಣದ ವೈದ್ಯಕೀಯ ಸಹಾಯ ಲಭ್ಯವಿಲ್ಲದ ಕಾರಣ, ಪ್ರಯಾಣದುದ್ದಕ್ಕೂ ಕಷ್ಟಪಟ್ಟರು. ದೂರು ಸ್ವೀಕರಿಸಲು ಆರಂಭದಲ್ಲಿ ರೈಲ್ವೆ ಸಿಬ್ಬಂದಿ ನಿರಾಕರಿಸಿದರು. ಹೇಗೋ ಕೊನೆಗೆ ದೂರು ದಾಖಲಿಸಿದಾಗ ಅದನ್ನು ಹಿಂಪಡೆಯುವಂತೆ ಆಹಾರ ಮಾರಿದ್ದ ವ್ಯಾಪಾರಿ ಒತ್ತಡ ಹೇರಿದ್ದು ರಾಜ್ ಅವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿತ್ತು. ತಾನು ಅನುಭವಿಸಿದ ಮಾನಸಿಕ ಯಾತನೆ ಮತ್ತು ಕಿರುಕುಳಕ್ಕೆ ₹5 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು.
ವಾದ ಮತ್ತು ರಾಜ್ ಸಲ್ಲಿಸಿದ ವೀಡಿಯೊ ರೆಕಾರ್ಡಿಂಗ್ ಪರಿಗಣಿಸಿದ ನ್ಯಾಯಾಲಯ ಅವರಿಗೆ ₹25,000 ಪರಿಹಾರ ನೀಡುವಂತೆ ಐಆರ್‌ಸಿಟಿಸಿಗೆ ಸೂಚಿಸಿತು.
[ಆದೇಶದ ಪ್ರತಿ]