ಐಆರ್‌ಸಿಟಿಸಿ ಹಗರಣ: ನಿತ್ಯ ವಿಚಾರಣೆ ಪ್ರಶ್ನಿಸಿ ದೆಹಲಿ ನ್ಯಾಯಾಲಯಕ್ಕೆ ಲಾಲು, ರಾಬ್ಡಿ ಮೊರೆ

18,000ಕ್ಕೂ ಹೆಚ್ಚು ಪುಟದ ದಾಖಲೆಗಳಿದ್ದು, ಆರೋಪಕ್ಕೆ ಸಂಬಂಧಿಸಿದ ಆದೇಶ ಸುಮಾರು 250 ಪುಟಗಳನ್ನು ಒಳಗೊಂಡಿದೆ ಎಂದು ಲಾಲು ಮತ್ತು ರಾಬ್ಡಿ ದೇವಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
Rabri Devi, Lalu Yadav
Rabri Devi, Lalu Yadav Facebook
Published on

ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ನಿತ್ಯ ವಿಚಾರಣೆ ನಡೆಸಬಾರದು ಎಂದು ಕೋರಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ಡಿ ದೇವಿ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಲಾಲು, ರಾಬ್ಡಿ, ಅವರ ಪುತ್ರ ತೇಜಸ್ವಿ ಯಾದವ್‌ ಇನ್ನಿತರರ ವಿರುದ್ಧ ಅಕ್ಟೋಬರ್ 13 ರಂದು ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಆರೋಪ ನಿಗದಿಪಡಿಸಿದ್ದರು. ಅಕ್ಟೋಬರ್ 27ರಿಂದ ಪ್ರಕರಣವನ್ನು ನಿತ್ಯ ಆಲಿಸುವುದಾಗಿ ಆಗ ನ್ಯಾಯಾಲಯ ನುಡಿದಿತ್ತು.

Also Read
ಐಆರ್‌ಸಿಟಿಸಿ ಹಗರಣ: ಲಾಲು, ತೇಜಸ್ವಿ ಯಾದವ್, ರಾಬ್ಡಿ ದೇವಿ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ ನಿಗದಿ

ಲಾಲು ಯಾದವ್ ಮತ್ತು ರಾಬ್ಡಿ ದೇವಿ ಅವರ ಅರ್ಜಿ ಸೋಮವಾರ ವಿಚಾರಣೆಗೆ ಬಂದಾಗ ನಿತ್ಯ ವಿಚಾರಣೆಯನ್ನು ಅವರಿಬ್ಬರೂ ಪ್ರಶ್ನಿಸಿದರು.

ಲಾಲು ಯಾದವ್ ಮತ್ತು ರಾಬ್ಡಿ ದೇವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್, ಯಾದವ್ ಕುಟುಂಬದ ವಿರುದ್ಧ ಒಟ್ಟು ನಾಲ್ಕು ಕ್ರಿಮಿನಲ್ ಪ್ರಕರಣ ನ್ಯಾಯಾಲಯದ ಮುಂದೆ ಬಾಕಿ ಇದ್ದು, ಎಲ್ಲಾ ಪ್ರಕರಣಗಳಲ್ಲಿ ನಿತ್ಯದ ವಿಚಾರಣೆಗೆ ಆದೇಶಿಸಲಾಗಿದೆ.ಈ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳನ್ನು ಪ್ರತಿನಿಧಿಸುವ ವಕೀಲರು ಒಂದೇ ಆಗಿದ್ದಾರೆ, ಅವರಿಗೆ ಪ್ರಕರಣಗಳನ್ನು ಸರಿಯಾಗಿ ಮಂಡಿಸಲು ಸಮಯಾವಕಾಶ ಬೇಕಾಗುತ್ತದೆ ಎಂದು ಹೇಳಿದರು.

18,000 ಕ್ಕೂ ಹೆಚ್ಚು ಪುಟಗಳ ದಾಖಲೆಗಳಿದ್ದು, ಆರೋಪಕ್ಕೆ ಸಂಬಂಧಿಸಿದ ಆದೇಶ ಸುಮಾರು 250 ಪುಟಗಳನ್ನು ಒಳಗೊಂಡಿದ್ದು ಆದೇಶವನ್ನು ಪರಿಶೀಲಿಸಲು ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡುವಂತೆ ಸಿಂಗ್ ನ್ಯಾಯಾಲಯವನ್ನು ಕೋರಿದರು. ಕಕ್ಷಿದಾರರು ಬಿಹಾರ ಚುನಾವಣೆಯಲ್ಲಿ ಮಗ್ನರಾಗಿರುವ ವಿಚಾರವನ್ನೂ ಅವರು ಇದೇ ವೇಳೆ ಪ್ರಸ್ತಾಪಿಸಿದರು.

ಮನವಿಗೆ ವಿರೋಧ ವ್ಯಕ್ತಪಡಿಸಿದ ಸಿಬಿಐನ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಡಿ.ಪಿ. ಸಿಂಗ್, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಪ್ರಕಾರ, ಸಂಸದರು ಮತ್ತು ಶಾಸಕರು ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಹೇಳಿದರು. ಸೆಷನ್ಸ್‌ ನ್ಯಾಯಾಲಯಗಳು ನಿತ್ಯ ವಿಚಾರಣೆ ನಡೆಸದಿರುವುದಕ್ಕೆ ಸುಪ್ರೀಂ ಕೋರ್ಟ್‌ ಕೆಲ ದಿನಗಳ ಹಿಂದೆ ಆಕ್ಷೇಪ ವ್ಯಕ್ತಪಡಿಸಿದೆ ಎಂದ ನ್ಯಾಯಾಧೀಶ ಗೋಗ್ನೆ ಹೇಳಿದರು. ಅಂತಿಮವಾಗಿ ಅರ್ಜಿಯ ಪ್ರತಿಯನ್ನು ಸಿಬಿಐಗೆ ಸಲ್ಲಿಸಬೇಕು. ಬಳಿಕ ಅದು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಅವರು ಹೇಳಿದರು.

Also Read
ಬಳಕೆದಾರರು ವಾಟ್ಸಾಪ್‌ ಬಳಕೆ ನಿಲ್ಲಿಸಲು ಸ್ವತಂತ್ರರು: ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್‌ ವಿವರಣೆ

ಏತನ್ಮಧ್ಯೆ, ನ್ಯಾಯಾಲಯವು ಪ್ರಾಸಿಕ್ಯೂಷನ್ ಸಾಕ್ಷಿಗಳಲ್ಲಿ ಒಬ್ಬರ ಮುಖ್ಯ ವಿಚಾರಣೆಯನ್ನು ಸಹ ನಡೆಸಿತು. ನಂತರದ ಹಂತದಲ್ಲಿ ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸಲಿದೆ.

ಲಾಲು ಪ್ರಸಾದ್‌ ಅವರು ರೈಲ್ವೆ ಸಚಿವರಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿನ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮಕ್ಕೆ( ಐಆರ್‌ಸಿಟಿಸಿ) ಸೇರಿದ ಹೊಟೆಲ್‌ಗಳನ್ನು ಸುಜಾತಾ ಹೊಟೆಲ್ಸ್‌ ಎನ್ನುವ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಟೆಂಡರ್‌ ನಿಯಮವಳಿಗಳನ್ನು ಬದಲಿಸಿತ್ತು ಎನ್ನುವುದು ಸಿಬಿಐ ಆರೋಪ. ಗುತ್ತಿಗೆಗೆ ಬದಲಾಗಿ ಲಾಲು ಅವರ ಪತ್ನಿ ರಾಬ್ಡಿ ದೇವಿ ಮತ್ತು ಅವರ ಪುತ್ರ ತೇಜಸ್ವಿ ಯಾದವ್‌ ಅವರಿಗೆ ಕೋಟಿಗಟ್ಟಲೆ ಬೆಲೆಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ವರ್ಗಾಯಿಸಿತ್ತು ಎಂದು ಸಿಬಿಐ ಆರೋಪಿಸಿತ್ತು. ಲಾಲು ಮತ್ತವರ ಕುಟುಂಬಸ್ಥರು ತನಿಖೆಯನ್ನು ಪ್ರಶ್ನಿಸಿದ್ದು, ತಮ್ಮ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದರು. ಪ್ರಕರಣ ರಾಜಕೀಯ ಪ್ರೇರಿತ ಎಂದು ಅವರು ವಾದಿಸಿದ್ದರು. ಪ್ರಕರಣದಲ್ಲಿ ಯಾದವ್ ಕುಟುಂಬದ ಸದಸ್ಯರಲ್ಲದೆ, 10 ಮಂದಿ ಬೇರೆ ಆರೋಪಿಗಳಿದ್ದಾರೆ.

Kannada Bar & Bench
kannada.barandbench.com