

ಕೊಠಡಿ ನಿರ್ವಹಿಸುವ ಸಿಬ್ಬಂದಿ ಪ್ರಧಾನ ಕೀಲಿ (ಮಾಸ್ಟರ್ ಕೀ) ಬಳಸಿ ಮಹಿಳೆಯೊಬ್ಬರು ಉಳಿದುಕೊಂಡಿದ್ದ ಕೊಠಡಿ ಪ್ರವೇಶಿಸಿ ಆಕೆಯ ಖಾಸಗಿತನ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಉದಯಪುರದಲ್ಲಿನ ಲೀಲಾ ಪ್ಯಾಲೇಸ್ ಹೋಟೆಲ್ ₹10 ಲಕ್ಷ ಪರಿಹಾರ ಪಾವತಿಸಬೇಕು ಎಂದು ಚೆನ್ನೈನ ಗ್ರಾಹಕ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿದೆ [ಎಸ್‌ಎನ್ ಮತ್ತು ಸ್ಕ್ಲೂಸ್ ಉದಯಪುರ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].
ಆಂತರಿಕ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಎಂದು ಹೇಳಿ ವಾಸ್ತವ್ಯದಲ್ಲಿರುವ ಅತಿಥಿ ಕೊಠಡಿಗೆ ಹೌಸ್‌ಕೀಪಿಂಗ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಪ್ರವೇಶಿಸುವಂತಿಲ್ಲ ಎಂದು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಇಂತಹ ನಡೆ ಸೇವಾ ನ್ಯೂನತೆಯಾಗಿದ್ದು ಅತಿಥಿಯ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಆಯೋಗದ ಅಧ್ಯಕ್ಷ ಡಿ ಗೋಪಿನಾಥ್ ಹಾಗೂ ಸದಸ್ಯರಾದ ಕವಿತಾ ಕನ್ನನ್ ಮತ್ತು ಆರ್ ಶಿವಕುಮಾರ್ ಅವರನ್ನೊಳಗೊಂಡ ಚೆನ್ನೈ ಉತ್ತರ ಜಿಲ್ಲಾ ಗ್ರಾಹಕವ್ಯಾಜ್ಯ ಪರಿಹಾರ ಆಯೋಗ ಅಭಿಪ್ರಾಯಪಟ್ಟಿತು.
ಅಂತೆಯೇ ಆಯೋಗ ಜನವರಿ 26, 2025ರಿಂದ ಅನ್ವಯವಾಗುವಂತೆ ಹಣ ವಸೂಲಾಗುವ ತನಕ ವಾರ್ಷಿಕ ಶೇ 9ರ ಬಡ್ಡಿಯೊಂದಿಗೆ ಅತಿಥಿಗೆ ₹55,500 ಮೊತ್ತದ ಸಂಪೂರ್ಣ ಕೊಠಡಿ ಶುಲ್ಕ ಮರುಪಾವತಿಸಬೇಕು ಎಂದು ನಿರ್ದೇಶಿಸಿತು.
ಇದಲ್ಲದೆ, ಆರ್ಥಿಕ ಮತ್ತು ಹಣಕಾಸು ಹೊರತಾದ ನಷ್ಟಕ್ಕೆ ಪರಿಹಾರವಾಗಿ ₹10 ಲಕ್ಷ ಮತ್ತು ನ್ಯಾಯಾಂಗ ವೆಚ್ಚಗಳಿಗೆ ₹10,000 ನೀಡಲು ಆದೇಶಿಸಿತು. ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನದಿಂದ ಎರಡು ತಿಂಗಳೊಳಗೆ ಈ ಮೊತ್ತಗಳನ್ನು ಪಾವತಿಸಬೇಕು; ವಿಫಲವಾದಲ್ಲಿ ವಾರ್ಷಿಕ ಶೇ 9ರ ಬಡ್ಡಿ ವಿಧಿಸಲಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿತು.
ಉದಯಪುರದಲ್ಲಿನ ದ ಲೀಲಾ ಪ್ಯಾಲೇಸ್ ನಡೆಸುವ ಸ್ಕ್ಲೂಸ್ ಉದಯಪುರ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಚೆನ್ನೈ ಮೂಲದ ವಕೀಲೆ ದೂರು ನೀಡಿದ್ದರು. “ಗ್ರ್ಯಾಂಡ್ ರೂಮ್ ವಿತ್ ಲೇಕ್ ವ್ಯೂ; ಹೆಸರಿನ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದ ತಾವು ಮತ್ತು ತಮ್ಮ ಪತಿ ವಾಶ್‌ರೂಮ್‌ನೊಳಗಿದ್ದಾಗ ಸಿಬ್ಬಂದಿಯೊಬ್ಬರು ಕೊಠಡಿಯ ಪ್ರಧಾನ ಕೀಲಿ ಬಳಸಿ ಪ್ರವೇಶಿಸಿದರು. ಅವರು ಅನುಮತಿ ಇಲ್ಲದೆ ಪ್ರವೇಶಿಸಿದ್ದು ವಾಶ್‌ರೂಮ್ ಬಾಗಿಲು ಮುರಿದಿದ್ದ ಹಿನ್ನೆಲೆಯಲ್ಲಿ ತಮ್ಮ ಗೌಪ್ಯತೆಗೆ ಭಾರೀ ಧಕ್ಕೆ ಒದಗಿತು. ಘಟನೆಯಿಂದ ತಾವು ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದಾಗಿ ಅಳಲು ತೋಡಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹೋಟೆಲ್, ತಮ್ಮ ಸಿಬ್ಬಂದಿ ನಿಯಮ ಉಲ್ಲಂಘಿಸಿಲ್ಲ, ಪ್ರಮಾಣಿತ ಕಾರ್ಯಾಚರಣಾ ವಿಧಾನದ ಮೂಲಕವೇ ಸಿಬ್ಬಂದಿ ನಡೆದುಕೊಂಡಿದ್ದಾರೆ ಎಂದಿತು. ಬಾಗಿಲಿನ ಕರೆಗಂಟೆ ಒತ್ತಿ, ತಮ್ಮನ್ನು ಪರಿಚಯಿಸಿಕೊಂಡು, ಪ್ರತಿಕ್ರಿಯೆ ಬರದಿದ್ದರೆ ಸ್ವಲ್ಪ ಸಮಯ ಕಾಯುವಂತೆ ಸಿಬ್ಬಂದಿಗೆ ತರಬೇತಿ ನೀಡಲಾಗಿತ್ತು. ಮತ್ತೊಂದೆಡೆ ಅತಿಥಿ ʼಡು ನಾಟ್ ಡಿಸ್ಟರ್ಬ್ʼ ಫಲಕ ಪ್ರದರ್ಶಿಸಿರಲಿಲ್ಲ ಹಾಗೂ ಬಾಗಿಲಿನ ಲ್ಯಾಚ್ ಅಥವಾ ಡಬಲ್ ಲಾಕ್ ಹಾಕಿರಲಿಲ್ಲ ಎಂದು ಹೇಳಿತು.
ವಾಶ್‌ರೂಮ್ ಉಪಯೋಗಿಸಲಾಗುತ್ತಿದೆ ಎಂದು ತಿಳಿದ ಕೂಡಲೇ ಸಿಬ್ಬಂದಿ ಹೊರಬಂದರು. ಆ ಬಳಿಕ ತಾನು ಬರೆದ ವಿಷಾದಸೂಚಕ ಪತ್ರ ಕೇವಲ ಸೌಹಾರ್ದಸೂಚಕವಾಗಿದ್ದು ಅದು ತಪ್ಪನ್ನು ಒಪ್ಪಿಕೊಂಡಂತಲ್ಲ ಎಂದು ಹೋಟೆಲ್ ಸಮರ್ಥಿಸಿಕೊಂಡಿತು
ವಾದ ಆಲಿಸಿದ ಆಯೋಗವು, ಹೆಚ್ಚು ಕೊಠಡಿ ಶುಲ್ಕ ವಸೂಲು ಮಾಡುವಂತಹ ಪ್ರೀಮಿಯಂ ಹೋಟೆಲ್‌ಗಳು ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುವ ಹೋಟೆಲ್‌ನ ಮೂಲ ಕರ್ತವ್ಯಕ್ಕಿಂತಲೂ ಆಂತರಿಕವಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡಬಾರದು ಎಂದಿತು.
ಕರೆ ಗಂಟೆ ಬಾರಿಸಿ ಒಂದು ನಿಮಿಷದೊಳಗೇ ಪ್ರಧಾನ ಕೀಲಿ ಬಳಸಿ ಪ್ರವೇಶಿಸಲಾಗಿದೆ. ಕೊಠಡಿಯಲ್ಲಿ ವಾಸ್ತವ್ಯ ಹೂಡಿರುವಾಗ ಹಾಗೂ ವಾಶ್‌ರೂಮ್ ಬಳಕೆಯಲ್ಲಿರುವಾಗ ಈ ನಡೆ ಅಸಂಗತ ಹಾಗೂ ಅಸುರಕ್ಷಿತ ಎಂದು ಆಯೋಗ ತಿಳಿಸಿತು.
ಕೊಠಡಿಯಲ್ಲಿ ಯಾರಾದರೂ ವಾಸ್ತವ್ಯ ಹೂಡಿದ್ದಾರೆಯೇ ಎಂಬುದನ್ನು ಸ್ವಾಗತಕೊಠಡಿ ಅಥವಾ ಇಂಟರ್‌ಕಾಂ ಮೂಲಕ ದೃಢಪಡಿಸಿಕೊಳ್ಳದೆಯೇ ಸಿಬ್ಬಂದಿ ಪ್ರವೇಶಿಸಿರುವುದು ಗಂಭೀರ ಲೋಪ. ಅಲ್ಲದೆ ಅದೇ ದಿನ ಹೋಟೆಲ್ ಬರೆದಿರುವ ಪತ್ರ ಕೇವಲ ಸೌಹಾರ್ದಸೂಚಕವಲ್ಲ ಬದಲಿಗೆ ಅದಕ್ಕೆ ಸಾಕ್ಷ್ಯದ ಮೌಲ್ಯವಿದೆ ಎಂದು ಅದು ಹೇಳಿತು. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾ ಕಾರ್ಯ ನಿರ್ವಹಿಸದೆ ಇರುವುದು ಹಾಗೂ ದೃಶ್ಯಾವಳಿಗಳನ್ನು ಒದಗಿಸುವಲ್ಲಿ ವಿಳಂಬ ಉಂಟು ಮಾಡಿರುವುದು ಹೋಟೆಲ್‌ನ ಸೇವೆಯ ಮಟ್ಟದ ಬಗ್ಗೆ ಗಂಬೀರ ಪ್ರಶೆ ಎತ್ತುತ್ತದೆ ಎಂದು ಅದು ಹೇಳಿತು.