ಆಸ್ತಿಗಳನ್ನು ಖರೀದಿಸುವ/ಮಾರಾಟ ಮಾಡುವ ಚಟುವಟಿಕೆಯಲ್ಲಿ ತೊಡಗಿಕೊಳ್ಳದ, ಅಂತಹ ಉದ್ದೇಶಕ್ಕಾಗಿ ಮನೆಯನ್ನು ಖರೀದಿಸದ ಮನೆ ಖರೀದಿದಾರರು ಗ್ರಾಹಕ ಸಂರಕ್ಷಣಾ ಕಾಯಿದೆ- 1986ರ ಸೆಕ್ಷನ್ 2(1)(ಡಿ) ಅಡಿ ಗ್ರಾಹಕರೇ ಆಗಿರುತ್ತಾರೆ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಪುನರುಚ್ಚರಿಸಿದೆ (ಅಲೋಕ್ ಆನಂದ್ ಮತ್ತು ಐರಿಯೊ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ).
ಸರಕು ಖರೀದಿಸುವ ವ್ಯಕ್ತಿ ಅಂತಹ ಸರಕುಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಇದ್ದಾಗ ಮಾತ್ರ ಆತ ಗ್ರಾಹಕನಾಗಿರುತ್ತಾನೆ ಎಂದು ಎನ್‌ಸಿಡಿಆರ್‌ಸಿ ಹೇಳಿದೆ.
ಈ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಫ್ಲಾಟ್ ನೀಡಲು ವಿಫಲವಾದದ್ದಕ್ಕೆ ವಾರ್ಷಿಕ ಶೇಕಡಾ 10.25ರ ಬಡ್ಡಿ ದರದೊಂದಿಗೆ ₹ 2.23 ಕೋಟಿಗಿಂತ ಹೆಚ್ಚಿನ ಮೊತ್ತ ಮರುಪಾವತಿಸುವಂತೆ ಗುರುಗ್ರಾಮ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಐರಿಯೊ ಪ್ರೈವೇಟ್ ಲಿಮಿಟೆಡ್‌ಗೆ ಅದು ಸೂಚಿಸಿದೆ.
ದೂರುದಾರ ಅಲೋಕ್ ಆನಂದ್ ಅವರಿಗೆ ವ್ಯಾಜ್ಯ ವೆಚ್ಚವಾಗಿ ₹ 25,000 ಪಾವತಿಸುವಂತೆಯೂ ನ್ಯಾಯಮೂರ್ತಿ ದೀಪಾ ಶರ್ಮ ಮತ್ತು ಆಯೋಗದ ಸದಸ್ಯ ಸುಭಾಷ್ ಚಂದ್ರ ಅವರನ್ನೊಳಗೊಂಡ ಪೀಠ ಬಿಲ್ಡರ್‌ಗೆ ಸೂಚಿಸಿತು.
ಆದೇಶದ ಪ್ರಕಾರ, ಆನಂದ್ ಅವರು 2011ರ ಜನವರಿಯಲ್ಲಿ ಸೆಕ್ಟರ್ 60, ಗುರುಗ್ರಾಮ್‌ನಲ್ಲಿ ಡೆವಲಪರ್‌ನೊಂದಿಗೆ ಅಪಾರ್ಟ್ಮೆಂಟ್ ಬುಕ್ ಮಾಡಿದ್ದರು ಮತ್ತು ₹ 2.39 ಕೋಟಿ ವೆಚ್ಚದ ಫ್ಲಾಟ್‌ಗಳಿಗೆ ₹ 2.23 ಕೋಟಿಗೂ ಹೆಚ್ಚು ಹಣ ಪಾವತಿಸಿದ್ದರು. ಫ್ಲಾಟ್ ಸ್ವಾಧೀನಪಡಿಸಿಕೊಳ್ಳುವ ಅಂತಿಮ ದಿನಾಂಕವು ಆರು ತಿಂಗಳ ಗ್ರೇಸ್ ಅವಧಿ ಸೇರಿ 42 ತಿಂಗಳುಗಳಾಗಿದ್ದವು. ಆದರೆ ನಿಗದಿತ ಗಡುವಿನೊಳಗೆ ಬಿಲ್ಡರ್ ಫ್ಲಾಟ್ ನೀಡಿರಲಿಲ್ಲ. ಬಳಿಕ ಆನಂದ್ ಗ್ರಾಹಕ ಆಯೋಗದ ಮೊರೆ ಹೋಗಿ ವಿಳಂಬಕ್ಕೆ ಪರಿಹಾರ ರೂಪದಲ್ಲಿ 18% ಬಡ್ಡಿಯೊಂದಿಗೆ ತಮಗೆ ಫ್ಲಾಟ್ ಮಾಲೀಕತ್ವ ನೀಡಲು ಬಿಲ್ಡರ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ಇತ್ತ ʼಆನಂದ್ ಅವರು ಗ್ರಾಹಕ ಸಂರಕ್ಷಣಾ ಕಾಯಿದೆ- 1986ರ ಸೆಕ್ಷನ್ 2(1)(ಡಿ) ಅಡಿ ಗ್ರಾಹಕರಲ್ಲ. ಅವರು ಈಗಾಗಲೇ ಎರಡು ವಸತಿ ವಿಳಾಸಗಳನ್ನು ಹೊಂದಿರುವುದರಿಂದ ಮತ್ತು ಇನ್ನೊಂದು ಯೋಜನೆಯಲ್ಲಿ ಅವರು ಹೂಡಿಕೆ ಮಾಡಿರುವುದರಿಂದ ಕೇವಲ ಹೂಡಿಕೆದಾರರಾಗಿದ್ದಾರೆʼ ಎಂದು ಡೆವಲಪರ್ ವಾದಿಸಿದರು. ಉತ್ತಮ ಮೌಲ್ಯಕ್ಕೆ ಬಾಡಿಗೆಗೆ ನೀಡುವ ಇಲ್ಲವೇ ಮಾರಾಟ ಮಾಡುವ ವಾಣಿಜ್ಯ ಲಾಭಕ್ಕಾಗಿ ಅವರು ಹೂಡಿಕೆ ಮಾಡಿದ್ದಾರೆ ಎಂದು ದೂರಿದ್ದರು.
ಸರಕು ಖರೀದಿಸುವ ವ್ಯಕ್ತಿ ಅಂತಹ ಸರಕುಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಇದ್ದಾಗ ಆತ ಗ್ರಾಹಕನಾಗಿರುತ್ತಾನೆ ಎಂದು ಲಕ್ಷ್ಮಿ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಪಿಎಸ್‌ಜಿ ಇಂಡಸ್ಟ್ರಿಯಲ್ ಇನ್‌ಸ್ಟಿಟ್ಯೂಟ್ ನಡುವಣ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಆಧರಿಸಿ ಎನ್‌ಸಿಡಿಆರ್‌ಸಿ ಆದೇಶ ನೀಡಿತು. ಮನೆ ಖರೀದಿದಾರ ಆಸ್ತಿ ಖರೀದಿಸುವ/ಮಾರಾಟ ಮಾಡುವ ಚಟುವಟಿಕೆಯಲ್ಲಿ ತೊಡಗದೆ ಇದ್ದಾಗ ಮತ್ತು ಆ ಉದ್ದೇಶಕ್ಕಾಗಿ ಮನೆ ಖರೀದಿಸದೆ ಇದ್ದಾಗ ಮಾತ್ರ, ಆತ ಗ್ರಾಹಕನಾಗಿರುತ್ತಾನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆದರೂ ದೂರುದಾರರು ಫ್ಲಾಟ್‌ಗಳ ಮಾರಾಟ ಮತ್ತು ಖರೀದಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಾಬೀತುಪಡಿಸುವ ಹೊರೆ ವಿರೋಧಿ ಪಕ್ಷಕಾರರ ಮೇಲೆ ಇರುತ್ತದೆ ಎಂದು ಎನ್‌ಸಿಡಿಆರ್‌ಸಿ ಅಭಿಪ್ರಾಯಪಟ್ಟಿದ್ದು, ಈ ಪ್ರಕರಣದಲ್ಲಿ ಅದನ್ನು ಸಾಬೀತುಪಡಿಸಲು ವಿರೋಧಿ ಪಕ್ಷಕಾರರು ವಿಫಲವಾಗಿದ್ದಾರೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅದು ದೂರುದಾರರ ಪರವಾಗಿ ತೀರ್ಪು ನೀಡಿದೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ: