ನ್ಯಾಯಾಂಗ ನಿಂದನೆ: ಬಾಲಿವುಡ್‌ ಗಾಯಕ ಲಕ್ಕಿ ಅಲಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ ಪತಿ ಸುಧೀರ್

ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದು, ಲಕ್ಕಿ ಅಲಿ ತಪ್ಪು ಮತ್ತು ನಿರ್ಲಕ್ಷ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ. ತಮ್ಮ ಪತ್ನಿ ಐಎಎಸ್‌ ಅಧಿಕಾರಿ ಹೆಸರನ್ನು ಎಳೆದು ತರಲಾಗಿದೆ ಎಂದು ಆಕ್ಷೇಪ.
Bollywood singer Lucky Ali & Bengaluru city civil court
Bollywood singer Lucky Ali & Bengaluru city civil court

ಆಸ್ತಿ ವಿವಾದ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿರುವ ಬಾಲಿವುಡ್‌ ಹಾಡುಗಾರ ಮಕ್ಸೂದ್‌ ಮಹಮ್ಮದ್‌ ಅಲಿ ಅಲಿಯಾಸ್‌ ಲಕ್ಕಿ ಅಲಿ ಸೇರಿದಂತೆ ಇತರೆ ಪ್ರತಿವಾದಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.

ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ 2016ರ ಆಗಸ್ಟ್‌ 3ರಂದು ನ್ಯಾಯಾಲಯ ಮಾಡಿರುವ ಮಧ್ಯಂತರ ಆದೇಶಕ್ಕೆ ಅಗೌರವ ತೋರಿದ್ದಾರೆ ಎಂದು ಆಕ್ಷೇಪಿಸಿ ಉದ್ಯಮಿ ಜಿ ಸುಧೀರ್‌ ರೆಡ್ಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 49ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಶವಂತ್‌ ಅವರು ಬುಧವಾರ ನಡೆಸಿದರು.

“ಪ್ರತಿವಾದಿಗಳು ಪ್ರತಿಬಂಧಕಾದೇಶಕ್ಕೆ ಅಗೌರವ ತೋರಿದ್ದಾರೆ ಎಂದು ಆಕ್ಷೇಪಿಸಿ ಫಿರ್ಯಾದಿ ಸುಧೀರ್‌ ರೆಡ್ಡಿ ಅವರು ಸಲ್ಲಿಸಿರುವ ಅರ್ಜಿಯನ್ನು ಪ್ರತ್ಯೇಕ ಮಿಸಲೇನಿಯಸ್‌ ಪ್ರಕರಣವನ್ನಾಗಿ ದಾಖಲಿಸಲು ಕಚೇರಿಗೆ ನಿರ್ದೇಶಿಸಲಾಗಿದೆ. ಪ್ರತಿವಾದಿ ಲಕ್ಕಿ ಅಲಿ ಅವರ ಪರ ವಕೀಲರು ಕೆಲವು ದಾಖಲೆಗಳು, ಮೆಮೊ ಹಾಗೂ ಉಲ್ಲೇಖಗಳನ್ನು ಸಲ್ಲಿಸಿದ್ದಾರೆ. ಮಧ್ಯಪ್ರವೇಶ ಕೋರಿರುವ 1, 2, ಮತ್ತು 3ನೇ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್‌ 16ಕ್ಕೆ ನಡೆಸಲಾಗುವುದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಪ್ರತಿವಾದಿಗಳ ನಡೆಯು ನ್ಯಾಯಾಂಗ ನಿಂದನೆಯಾಗಿದ್ದು, ಮೊದಲನೇ ಪ್ರತಿವಾದಿಯು ತಮ್ಮ ಬಾಲಿವುಡ್‌ ತಾರಾ ವರ್ಚಸ್ಸು ಬಳಸಿಕೊಂಡು ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಬೇರೆಯದೇ ಬಣ್ಣ ಕಟ್ಟುತ್ತಿದ್ದಾರೆ. ಅಲ್ಲದೇ, ಅದಕ್ಕೆ ಸಾರ್ವಜನಿಕರು ಹಾಗೂ ರಾಜಕೀಯ ಕ್ಷೇತ್ರದವರ ಬೆಂಬಲ ಕೋರುತ್ತಿದ್ದಾರೆ ಎಂದು ಸುಧೀರ್‌ ರೆಡ್ಡಿ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

ಭೌತಿಕವಾಗಿ ಮಧ್ಯಪ್ರವೇಶಿಸುವ ಮೂಲಕ ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದು, ಲಕ್ಕಿ ಅಲಿ ಅವರು ತಪ್ಪುಹೇಳಿಕೆ ಮತ್ತು ನಿರ್ಲಕ್ಷ್ಯತನದಿಂದ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಇದನ್ನು ಪ್ರಸರಣ ಮಾಡಿರುವುದಲ್ಲದೇ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅಲಿ ಅವರ ವಕೀಲರು ಮಾನಹಾನಿ ಹೇಳಿಕೆ ನೀಡಿದ್ದು, ತಮ್ಮ ಪತ್ನಿ ಐಎಎಸ್‌ ಅಧಿಕಾರಿ (ರೋಹಿಣಿ ಸಿಂಧೂರಿ) ಅವರ ಹೆಸರನ್ನೂ ಸಹ ಪ್ರಕರಣದಲ್ಲಿ ಎಳೆದು ತರಲಾಗಿದೆ. ಹಾಲಿ ಪ್ರಕರಣದಲ್ಲಿ ಅವರ ಯಾವುದೇ ಪಾತ್ರವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ವಾಸುದೇವಪುರ ಗ್ರಾಮದಲ್ಲಿ ಮೂರು ಎಕರೆ ಭೂಮಿಯನ್ನು ಶಾಂತಿಯುತವಾಗಿ ಅನುಭವಿಸುವುದಕ್ಕೆ ಯಾವುದೇ ಅಡ್ಡಿಯಾದಂತೆ ಹಾಗೂ ಅಲ್ಲಿಂದ ತಮ್ಮನ್ನು ಕದಲಿಸಲು ಪ್ರಯತ್ನಿಸದಂತೆ ಪ್ರತಿವಾದಿಗಳ ವಿರುದ್ಧ ಜಂಟಿ ಮತ್ತು ಪ್ರತ್ಯೇಕವಾಗಿ ಯಾವುದೇ ತೆರದಲ್ಲೂ ಮಧ್ಯಪ್ರವೇಶ ಮಾಡದಂತೆ ಆದೇಶ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ.

2015ರ ಜುಲೈ 15ರಂದು ಮನ್ಸೂರ್‌ ಎಂ ಅಲಿ ಮತ್ತು ಅವರ ಪುತ್ರಿ ಸಬ್ರಿನಾ ಅವರಿಂದ ಆಸ್ತಿ ಖರೀದಿಸಿದ್ದು, ಅದರ ಸಂಪೂರ್ಣ ವಾರಸುದಾರ ಸುಧೀರ್‌ ರೆಡ್ಡಿ ಅವರಾಗಿದ್ದಾರೆ. ತನ್ನ ಸ್ವಂತ ಆಸ್ತಿಯಲ್ಲಿ ಗಿಡ ನೆಟ್ಟು, ಫಾರ್ಮ್‌ ಹೌಸ್‌ ನಿರ್ಮಾಣ ಮಾಡಲು ಹಾಗೂ ಮಳೆ ನೀರಿನ ಶೇಖರಣೆಗಾಗಿ ಇಂಗು ಗುಂಡಿ ನಿರ್ಮಿಸಲು 2016ರ ಜುಲೈ 1ರಿಂದಕೆಲಸ ಆರಂಭಿಸಿದ್ದು, ಈ ಸಂದರ್ಭದಲ್ಲಿ ಪ್ರತಿವಾದಿಗಳಾದ ಲಕ್ಕಿ ಅಲಿ, ಅಬ್ದುರ್‌ ರೆಹಮಾನ್‌ ಅಲಿಯಾಸ್‌ ಟೌಜ್‌ ಮತ್ತು ತಸ್ಮಿಯಾ ಅವರು ತಮ್ಮ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಸುಧೀರ್‌ ಅವರ ಆಸ್ತಿಗೆ ಹೊಂದಿಕೊಂಡಂತೆ ಪ್ರತಿವಾದಿಗಳ ಆಸ್ತಿಯಿದ್ದು, ಇಲ್ಲಿ ಯಾವುದೇ ತೆರನಾದ ಬದಲಾವಣೆ ಮಾಡಿದರೆ ತಮಗೆ ಸಮಸ್ಯೆಯಾಗುತ್ತದೆ ಎಂದು ಸಕಾರಣರಹಿತವಾಗಿ ಅಡ್ಡಿ ಮಾಡಿದ್ದಾರೆ. ಈ ಕುರಿತು ಲಕ್ಕಿ ಅಲಿ ಅವರಿಗೆ ಮನವಿ ಮಾಡಿದ್ದು, ಅವರು ಅನೈತಿಕ ಮತ್ತು ಕಾನೂನುಬಾಹಿರ ಬೇಡಿಕೆಗಳನ್ನು ಇಟ್ಟಿದ್ದಾರೆ. ಒಂದೊಮ್ಮೆ ಬೇಡಿಕೆಗಳನ್ನು ಈಡೇರಿಸದಿದ್ದರೆ ತೊಂದರೆ ನೀಡುವುದಾಗಿ ಮತ್ತು ಕೆಲಸ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ತನಗೆ ಆಸ್ತಿ ಮಾರಾಟ ಮಾಡಿದ ವ್ಯಕ್ತಿ ಹಾಗೂ ಲಕ್ಕಿ ಅಲಿ ಅವರು ಸಂಬಂಧಿಯಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಕೋರಿದ್ದೆ. ಆದರೆ, ಅವರಿಗೂ ಲಕ್ಕಿ ಅಲಿ ಅವರು ಬೆದರಿಕೆ ಹಾಕಿದ್ದಾರೆ. ಇತ್ತೀಚೆಗೆ ಲಕ್ಕಿ ಅಲಿ ಅವರು ದಾವೆಗಳನ್ನು ಹೂಡಿ, ಜನರಿಗೆ ಬೆದರಿಕೆ ಹಾಕಿ ಬದುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೂ ಮನವಿ ಮಾಡಲಾಗಿತ್ತು. ಆಸ್ತಿ ಪ್ರಕರಣವಾದ್ದರಿಂದ ಪೊಲೀಸರು ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಸೂಚಿಸಿದ್ದರಿಂದ ಪೀಠದ ಮುಂದೆ ಬಂದಿರುವುದಾಗಿ ಸುಧೀರ್‌ ರೆಡ್ಡಿ ಅರ್ಜಿಯಲ್ಲಿ ವಿವರಿಸಲಾಗಿದೆ.

ಆಸ್ತಿಯನ್ನು ಸ್ವಂತ ಬಲದಿಂದ ಖರೀದಿಸಿದ್ದು, ಪ್ರತಿವಾದಿಗಳಿಗೂ ಆಸ್ತಿಗೂ ಯಾವುದೇ ಸಂಬಂಧವಿಲ್ಲ. ಶಾಂತಿಯುತವಾಗಿ ಆಸ್ತಿ ಅನುಭವಿಸುವುದಕ್ಕೆ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು 2016ರ ಆಗಸ್ಟ್‌ 3ರಂದು ಮಧ್ಯಪ್ರವೇಶ ಮಾಡದಂತೆ ಪ್ರತಿವಾದಿಗಳಿಗೆ ನಿರ್ಬಂಧಿಸಿದೆ. ಇದನ್ನು ಪ್ರತಿವಾದಿಗಳೂ ತಿಳಿಸಲಾಗಿದೆ. ಈ ಮಧ್ಯೆ, 2022ರ ನವೆಂಬರ್‌ 28ರಂದು ಪ್ರತಿವಾದಿಯು ಸಂಬಂಧಿಕರು, ರೌಡಿಗಳು ಮತ್ತು ವಕೀಲರು ಎಂದುಕೊಂಡಂತಹ ಕೆಲವರನ್ನು ಕಳುಹಿಸಿ ಫಿರ್ಯಾದಿಯ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಭೌತಿಕವಾಗಿ ಬೆದರಿಕೆಯಾಕಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಪ್ರತಿವಾದಿಗಳು ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಫೋಟೊ ಮತ್ತು ವಿಡಿಯೊ ಲಗತ್ತಿಸಲಾಗಿದೆ ಎಂದೂ ಮನವಿಯಲ್ಲಿ ವಿವರಿಸಲಾಗಿದೆ. ಅರ್ಜಿದಾರರನ್ನು ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌ ಮತ್ತು ವಕೀಲೆ ಪಿ ಎಲ್‌ ವಂದನಾ ಪ್ರತಿನಿಧಿಸಿದ್ದಾರೆ.

ಕಳೆದ ಭಾನುವಾರ ಲಕ್ಕಿ ಅಲಿ ಅವರು ಪೊಲೀಸ್‌ ಮಹಾನಿರ್ದೇಶಕರನ್ನು ಟ್ಯಾಗ್‌ ಮಾಡಿ ಐಎಎಸ್‌ ಅಧಿಕಾರಿಯಾದ ರೋಹಿಣಿ ಸಿಂಧೂರಿ, ಆಕೆಯ ಪತಿ ಸುಧೀರ್‌ ರೆಡ್ಡಿ ಮತ್ತು ಇತರರು ಭೂ ಮಾಫಿಯಾದ ಭಾಗವಾಗಿದ್ದು, ಸರ್ಕಾರದ ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಂಡು ತಾವು ನಡೆಸುತ್ತಿರುವ ಮಕ್ಸೂದ್‌ ಮತ್ತು ಮಕ್ದೂಮ್‌ ಬೆನಿಫಿಟ್‌ ಟ್ರಸ್ಟ್‌ಗೆ ಸೇರಿದ ಆಸ್ತಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದ್ದಾರೆ ಎಂದು ಸರಣಿ ಟ್ವೀಟ್‌ ಮಾಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com