ʼಕಾನೂನಿನ ಸಾರ್ವಭೌಮತ್ವ ಎಂದರೆ ಏನೆಂದುಕೊಂಡಿದ್ದೀರಿ?' ಕೆಜಿಎಫ್‌ ತಹಶೀಲ್ದಾರ್‌ ವಿರುದ್ಧ ಹೈಕೋರ್ಟ್‌ ಕೆಂಡಾಮಂಡಲ

ಕರ್ನಾಟಕದಲ್ಲಿ ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಹಿಂದೆಯೂ ನಾವು ಕೆಲವು ಐಎಎಸ್‌ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದೆವು. ಇದು ಅಧಿಕಾರಿಯನ್ನು ಜೈಲಿಗೆ ಕಳುಹಿಸಲು ಸೂಕ್ತ ಪ್ರಕರಣ ಎಂದು ಕಟುವಾಗಿ ನುಡಿದ ಪೀಠ.
Karnataka High Court and Chief Justice Ritu Raj Awasthi
Karnataka High Court and Chief Justice Ritu Raj Awasthi

“ಕೆಜಿಎಫ್‌ ತಹಶೀಲ್ದಾರ್‌ ಸುಜಾತಾ ರಾಮ್‌ ಅವರು ನ್ಯಾಯಾಲಯದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಇದಕ್ಕಿಂತ ನಿರ್ಲಜ್ಜ ಉದಾಸೀನತೆ ಮತ್ತೊಂದು ಇರಲಾರದು. ಇದರ ನಡುವೆ ನೀವು ಇದು (ದಾಖಲೆ ತಿದ್ದುಪಡಿ) ಕಂಪ್ಯೂಟರ್‌ ಸೃಷ್ಟಿತ (ಜನರೇಟೆಡ್‌) ಎಂದು ಭಂಡತನದಿಂದ ಹೇಳುತ್ತಿದ್ದೀರಿ," ಹೀಗೆ ಹೈಕೋರ್ಟ್‌ ಕೆಂಡಾಮಂಡಲವಾಗಿ ಕೆಜಿಎಫ್‌ ತಹಶೀಲ್ದಾರ್‌ ಸುಜಾತಾ ರಾಮ್‌ ಅವರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿತು.

ತಡೆಯಾಜ್ಞೆಯ ಹೊರತಾಗಿಯೂ ಕಂದಾಯ ದಾಖಲೆಗಳಲ್ಲಿ ಅರ್ಜಿದಾರ ಎಂ ಸಣ್ಣೇಗೌಡ ಹೆಸರು ಬದಲಿಸಿ, ಎರಡನೇ ಪ್ರತಿವಾದಿ ರಾಮಶೇಖರ ರೆಡ್ಡಿ ಜಿ ಎಸ್ ಹೆಸರು ಸೇರಿಸುವ ಮೂಲಕ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ಕೆಜಿಎಫ್ ತಹಿಶೀಲ್ದಾರ್ ಸುಜಾತಾ ರಾಮ್‌ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

"ಆಕೆಯನ್ನು (ತಹಶೀಲ್ದಾರ್‌) ನಾವು ಅಪರಾಧಿ ಎಂದು ಪರಿಗಣಿಸುತ್ತೇವೆ. ಅವರು ಜೈಲಿಗೆ ಹೋಗಲಿ. ನಿಮ್ಮ ತಪ್ಪನ್ನು ಮನಗಂಡು ಸರಿಪಡಿಸಿಕೊಂಡು ನ್ಯಾಯಾಲಯಕ್ಕೆ ಬಂದಿದ್ದರೆ ನಮಗೆ ಅರ್ಥವಾಗುತ್ತಿತ್ತು. ಈಗ ಏನನ್ನೂ ಮಾಡಲಾಗದು” ಎಂದು ಪೀಠ ಅಧಿಕಾರಿಯ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

“ತಹಶೀಲ್ದಾರ್‌ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಪೊಲೀಸರನ್ನು ಕರೆಯಿರಿ. ಅವರನ್ನು ಜೈಲಿಗೆ ಕಳುಹಿಸೋಣ. ಕೆಲವು ಅಧಿಕಾರಿಗಳು ಜೈಲಿಗೆ ಹೋಗಬೇಕು. ಆಗ ನಿಮಗೆ ನ್ಯಾಯಾಂಗ ನಿಂದನೆ ಎಂದರೆ ಏನು ಎಂಬುದು ಅರ್ಥವಾಗುತ್ತದೆ. ಕಾನೂನಿನ ಸಾರ್ವಭೌಮತ್ವ ಎಂದರೆ ಏನೆಂದುಕೊಂಡಿದ್ದೀರಿ (ಮೆಜೆಸ್ಟಿ ಆಫ್‌ ಲಾ). ನ್ಯಾಯಾಂಗ ನಿಂದನೆ ಎಂದರೆ ಏನು ಎಂಬುದನ್ನು ನಾವು ನಿಮಗೆ ಅರ್ಥ ಮಾಡಿಸುತ್ತೇವೆ. ತಹಶೀಲ್ದಾರ್‌ ವಿರುದ್ಧ ಆರೋಪ ನಿಗದಿ ಮಾಡಿ, ಅವರನ್ನು ಜೈಲಿಗೆ ಕಳುಹಿಸುತ್ತೇವೆ. ಬೇರೆ ಮಾತಿಲ್ಲ. ಇದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ," ಎಂದು ಪೀಠವು ಅಧಿಕಾರಿಯ ಕರ್ತವ್ಯಲೋಪದ ಬಗ್ಗೆ ಕಿಡಿಕಿಡಿಯಾಯಿತು.

"ಇಲ್ಲಿಯವರೆಗೆ ಏತಕ್ಕಾಗಿ ನೀವು ಕಾಯುತ್ತಿದ್ದಿರಿ. ಜೈಲಿನಲ್ಲಿ ಹೋಗಿ ಕುಳಿತಕೊಂಡಾಗ ತಾಂತ್ರಿಕ ಸಮಸ್ಯೆ ಏನು, ನೀವು ಏನು ಮಾಡಬೇಕಿತ್ತು ಎಂಬುದನ್ನು ಅರ್ಥೈಸಿಕೊಳ್ಳುತ್ತೀರಿ. ಇದಕ್ಕಾಗಿ, ನಾವು ಆಕೆಗೆ ತಮ್ಮ ತಪ್ಪನ್ನು ಅರ್ಥಮಾಡಿಸುವ ಸಲುವಾಗಿ ಅವರನ್ನು ಜೈಲಿಗೆ ಕಳುಹಿಸಲಿದ್ದೇವೆ. ಹೈಕೋರ್ಟ್‌, ಕಾನೂನಿನ ಸಾರ್ವಭೌಮತ್ವ ಅರ್ಥ ಮಾಡಿಸಲು ಜೈಲಿಗೆ ಕಳುಹಿಸುತ್ತೇವೆ. ನಿಮಗೆ ಅರ್ಥ ಮಾಡಿಸುವಷ್ಟು ಅಧಿಕಾರ ನಮಗಿದೆ. ಕರ್ನಾಟಕದಲ್ಲಿ ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಹಿಂದೆಯೂ ನಾವು ಕೆಲವು ಐಎಎಸ್‌ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದೆವು. ಇದು ಅಧಿಕಾರಿಯನ್ನು ಜೈಲಿಗೆ ಕಳುಹಿಸಲು ಸೂಕ್ತವಾದ ಪ್ರಕರಣ” ಎಂದು ಕಟುವಾಗಿ ನುಡಿಯಿತು.

“ನಾಳೆ ಎಲ್ಲವನ್ನೂ ಸರಿಪಡಿಸಿ ತನ್ನಿ. ನಿಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ. ಇದಕ್ಕಾಗಿ ನಿಮಗೆ 24 ತಾಸು ಸಮಯ ನೀಡುತ್ತೇವೆ” ಎಂದು ಪೀಠವು ಮತ್ತೊಂದು ಅವಕಾಶವನ್ನು ಅಧಿಕಾರಿಗೆ ನೀಡಿತು.

ಅರ್ಜಿದಾರರ ಪರ ವಕೀಲರು “2021ರ ಡಿಸೆಂಬರ್‌ 8ರಂದು ಜಿಲ್ಲಾಧಿಕಾರಿ ಮಾಡಿದ್ದ ಆದೇಶವನ್ನು 2022ರ ಫೆಬ್ರವರಿ 22ರಂದು ನ್ಯಾಯಾಲಯವು ತಡೆ ಹಿಡಿದಿತ್ತು. ಆದರೆ, ನಿರ್ಲಜ್ಜವಾಗಿ ತಹಶೀಲ್ದಾರ್‌ ಸುಜಾತಾ ರಾಮ್‌ ಅವರು 2022 ಮಾರ್ಚ್‌ 22ರ ಜಿಲ್ಲಾಧಿಕಾರಿ ಆದೇಶದ ಅನ್ವಯ ಸಣ್ಣೇಗೌಡರ ಹೆಸರು ತೆಗೆದು ರಾಮಶೇಖರ ರೆಡ್ಡಿ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ. ತಹಶೀಲ್ದಾರ್‌ ಅವರಿಗೆ ನ್ಯಾಯಾಲಯದ ಆದೇಶದ ಬಗ್ಗೆ ತಿಳಿದಿದ್ದರೂ ಉದ್ದೇಶಪೂರ್ವಾಗಿ ಎರಡನೇ ಪ್ರತಿವಾದಿಯ ಹೆಸರು ಸೇರ್ಪಡೆಗೊಳಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಇದು ಈ ನ್ಯಾಯಾಲಯದ ನಿಂದನೆಯಾಗಿದೆ” ಎಂದು ಹೇಳಿದರು.

ನ್ಯಾಯಾಲಯವು “ತಹಶೀಲ್ದಾರ್‌ ಸುಜಾತಾ ರಾಮ್‌ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಮೇಲ್ನೋಟಕ್ಕೆ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿರುವುದು ನಮ್ಮ ಅರಿವಿಗೆ ಬಂದಿದೆ. ತಹಶೀಲ್ದಾರ್‌ ಅವರು ಬೇಷರತ್‌ ಕ್ಷಮೆ ಕೋರಿದ್ದು, ತಪ್ಪನ್ನು ತಿದ್ದಿಕೊಳ್ಳಲು ಒಂದು ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ. 24 ತಾಸಿನಲ್ಲಿ ಕಂದಾಯ ದಾಖಲೆಯಲ್ಲಿ ಅಗತ್ಯ ತಿದ್ದುಪಡಿ ಮಾಡಲಾಗುವುದು. ಈ ಸಂಬಂಧ ಔಪಚಾರಿಕ ಆದೇಶ ಮಾಡಲಾಗುವುದು ಎಂದು ಹೇಳಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿತು.

Also Read
ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಯಾವ ಕಾನೂನಿನಡಿ ಶಾಶ್ವತ ಪರವಾನಗಿ ನೀಡಲಾಗಿದೆ ಎಂದು ಸರ್ಕಾರವನ್ನು ಕೇಳಿದ ಹೈಕೋರ್ಟ್‌

"ಅಲ್ಲದೇ, ಸರ್ಕಾರದ ವಕೀಲರ ಕೋರಿಕೆಯ ಹಿನ್ನೆಲೆಯಲ್ಲಿ ತಹಶೀಲಾರ್‌ ಸುಜಾತಾ ರಾಮ್‌ ಅವರಿಗೆ ಒಂದು ಅವಕಾಶ ನೀಡುತ್ತಿದ್ದು, ತಪ್ಪು ಸರಿಪಡಿಸಿ, ಕಂದಾಯ ದಾಖಲೆ ಸರಿಪಡಿಸಬೇಕು. ಸೋಮವಾರಕ್ಕೆ ಪ್ರಕರಣ ನಿಗದಿಪಡಿಸಲಾಗಿದ್ದು, ಅಂದು ತಹಶೀಲ್ದಾರ್‌ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಅಂದು ನ್ಯಾಯಾಲಯದ ಆದೇಶ ಉಲ್ಲಂಘಿಸಿದರೆ ಸುಜಾತಾ ರಾಮ್‌ ವಿರುದ್ಧ ಆರೋಪ ನಿಗದಿ ಮಾಡಲಾಗುವುದು” ಎಂದು ಆದೇಶ ಮಾಡಿತು.

Kannada Bar & Bench
kannada.barandbench.com