

ಕ್ರೂರ ನಾಯಿ ತಳಿಗಳ ಆಮದು, ವ್ಯಾಪಾರ, ಮಾರಾಟ, ಸಂತಾನ ವೃದ್ಧಿ ಅಥವಾ ಸಾಕಣೆ ನಿಷೇಧಿಸುವ ಕುರಿತಂತೆ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಮತ್ತು ದೆಹಲಿ ಸರ್ಕಾರ, ಪೊಲೀಸ್ ಇಲಾಖೆ ಮತ್ತು ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ನೋಟಿಸ್ ಜಾರಿ ಮಾಡಿದೆ [ದಿನೇಶ್ ಕುಮಾರ್ ರಾಯ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
6 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಗಂಭೀರ ಗಾಯಗಳನ್ನುಂಟು ಮಾಡಿದ ಪಿಟ್‌ಬುಲ್ ತಳಿಯ ನಾಯಿಯ ಮಾಲೀಕರಿಗೂ ನ್ಯಾಯಮೂರ್ತಿ ಸಚಿನ್ ದತ್ತ ನೋಟಿಸ್ ಜಾರಿ ಮಾಡಿದರು.
ಮಗುವಿನ ತಂದೆ ₹25 ಲಕ್ಷ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು, ಕ್ರೂರ ನಾಯಿ ತಳಿಗಳನ್ನು ನಿಷೇಧಿಸುವಂತೆ ಮನವಿ ಮಾಡಿದ್ದಾರೆ.
ಎಂಸಿಡಿ ಪರ ಹಾಜರಾದ ವಕೀಲರು, ನಾಯಿಯನ್ನು ಮಾಲೀಕರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ಸಂಬಂಧ ದಾಖಲಾಗಿರುವ ಎಫ್‌ಐಆರ್ ಅನ್ನು ತ್ವರಿತವಾಗಿ ಪರಿಶೀಲಿಸುವಂತೆ ನ್ಯಾಯಮೂರ್ತಿಗಳು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುನ್ನೆಚ್ಚರಿಕೆ ವಹಿಸದೆ ನಾಯಿ ಬಿಡುಗಡೆ ಮಾಡದಂತೆ ನೋಡಿಕೊಳ್ಳುವಂತೆ ಹಾಗೂ 4 ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಎಂಸಿಡಿಗೆ ನಿರ್ದೇಶನ ನೀಡಿತು.
ಈ ಘಟನೆ ನವೆಂಬರ್ 23 ರಂದು ನಡೆದಿದ್ದು, ಮಗು ಹೊರಗೆ ಆಟವಾಡುತ್ತಿದ್ದಾಗ ನಾಯಿ ದಾಳಿ ಮಾಡಿತ್ತು. ಮಗುವಿನ ಸ್ಥಿತಿ ಗಂಭೀರವಾಗಿದ್ದು ಸರಿಪಡಿಸಲಾಗದಷ್ಟು ಹಾನಿ ಉಂಟಾಗಿದೆ. ನಾಯಿ ದಾಳಿ ಪ್ರಕರಣಗಳ ಬಗ್ಗೆ ಈ ಹಿಂದೆ ದೂರು ದಾಖಲಾಗಿತ್ತು ಆದರೆ ಪೊಲೀಸರು ಅಥವಾ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರ ಪರವಾಗಿ ವಕೀಲ ಅವಧ್ ಬಿಹಾರಿ ಕೌಶಿಕ್ ವಾದ ಮಂಡಿಸಿದರು.
ಮೇ 2024 ರಲ್ಲಿ, ಇಪ್ಪತ್ನಾಲ್ಕು ನಾಯಿ ತಳಿಗಳ ಆಮದು, ಸಂತಾನೋತ್ಪತ್ತಿ ಮತ್ತು ಮಾರಾಟವನ್ನು ನಿಷೇಧಿಸುವ ಬಗ್ಗೆ ಕೇಂದ್ರ ಸರ್ಕಾರ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು ಆದರೆ ಅದಾಗಿ ಹದಿನೆಂಟು ತಿಂಗಳು ಕಳೆದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಮಾಲೀಕರು ಮಾತ್ರವಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಅರ್ಜಿದಾರರು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್) ಸೇರಿದವರಾಗಿದ್ದು ವೈದ್ಯಕೀಯ ವೆಚ್ಚ ಭರಿಸುವ ಸ್ಥಿತಿಯಲ್ಲಿ ಇಲ್ಲ. ಮಗುವಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಆಸ್ಪತ್ರೆಗೆ ಸೂಚಿಸಬೇಕು ಎಂದು ಕೋರಿದರು.
ದೆಹಲಿ ಸರ್ಕಾರದ ಪರವಾಗಿ ಹಾಜರಾದ ವಕೀಲೆ ಹರ್ಷಿತಾ ನತ್ರಾನಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪರಾಧಿಗಳು ಪರಿಹಾರ ಪಾವತಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು. "ಈ ಅಪಾಯ ತಡೆಗಟ್ಟಲು ಪುರಸಭೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸುಧಾರಣಾ ಕ್ರಮ ತೆಗೆದುಕೊಳ್ಳಬೇಕು" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ . ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 3, 2026ರಂದು ನಡೆಯಲಿದೆ.