ಸಂಗಾತಿಯನ್ನು ಕೆಲಸದಿಂದ ತೆಗೆದು ಹಾಕುವಂತೆ ನಿರಂತರ ದೂರು ನೀಡುವುದು ಕ್ರೌರ್ಯ: ವಿಚ್ಛೇದನಕ್ಕೆ ಸುಪ್ರೀಂ ಅಸ್ತು

ಒಟ್ಟಿಗೆ ಬದುಕುವುದು ಕಡ್ಡಾಯ ಪ್ರಕ್ರಿಯೆಯಲ್ಲ. ಆದರೆ ಮದುವೆಯು ಎರಡು ಪಕ್ಷಗಳ ನಡುವಿನ ಸಂಬಂಧವಾಗಿದೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿದೆ.
Justices Sanjay Kishan Kaul and Hrishikesh Roy
Justices Sanjay Kishan Kaul and Hrishikesh Roy

ಸಂಗಾತಿಯ ವಿರುದ್ಧ ನಿರಂತರವಾಗಿ ದೂರು ನೀಡುವುದು ಮತ್ತು ದಾವೆ ಹೂಡುವುದು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13 (1) (i-a) ಅಡಿ ಕ್ರೌರ್ಯವಾಗಿದ್ದು ವಿಚ್ಚೇದನಕ್ಕೆ ನೆಲೆ ಕಲ್ಪಿಸುತ್ತದೆ ಎಂದು ಸುಪ್ರೀಂಕೋರ್ಟ್‌ ಸೋಮವಾರ ತೀರ್ಪು ನೀಡಿದೆ. (ಸಿವಸಂಕರನ್ ಮತ್ತು ಸಾಂತಿಮೀನಲ್ ನಡುವಣ ಪ್ರಕರಣ).

ಅಲ್ಲದೆ ತನ್ನ ಸಂಗಾತಿಯನ್ನು ಉದ್ಯೋಗದಿಂದ ತೆಗೆದುಹಾಕುವಂತೆ ದೂರುಗಳನ್ನು ಸಲ್ಲಿಸುವುದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ಪತಿಯ ವಿಚ್ಛೇದನ ಕೋರಿಕೆಯನ್ನು ಮನ್ನಿಸಿತು.

ಸಮ್ಮತಿ ನೀಡುವ ಪಕ್ಷಗಳ ನಡುವಿನ ಮದುವೆಯನ್ನು ರದ್ದುಪಡಿಸಲು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಅಧಿಕಾರ ಚಲಾಯಿಸುವ ಕುರಿತಂತೆ ಇರುವ ವಿಸ್ತೃತ ಸಂಗತಿಯನ್ನು ಸಾಂವಿಧಾನಿಕ ಪೀಠ ಪರಿಶೀಲಿಸುತ್ತಿದೆ ಎಂದು ನ್ಯಾಯಾಲಯ ಇದೇ ವೇಳೆ ಒಪ್ಪಿತು. ಆದರೂ, ವಿವಿಧ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ವಿಚ್ಛೇದನ ನೀಡಲು ಈ ಅಧಿಕಾರವನ್ನು ಚಲಾಯಿಸಿದೆ ಎಂದು ಕೂಡ ಅದು ತಿಳಿಸಿದೆ.

ಸಂವಿಧಾನ ಪೀಠದ ಮುಂದೆ ಕಳೆದ ಐದು ವರ್ಷಗಳಿಂದ ಈ ವಿಚಾರ ಬಾಕಿ ಇದ್ದು ಆದ್ದರಿಂದ ವೈವಾಹಿಕ ಸಂಬಂಧ ಕೆಲಸ ಮಾಡದಿದ್ದರೆ ಪ್ರಕರಣವನ್ನು ಮುಂದೂಡುವುದರಿಂದ ಯಾವುದೇ ಉದ್ದೇಶ ಪೂರೈಸಿದಂತಾಗುವುದಿಲ್ಲ ಎಂದು ವಿಭಾಗೀಯ ಪೀಠ ಈ ಸಂದರ್ಭದಲ್ಲಿ ಹೇಳಿತು.

"ಒಟ್ಟಿಗೆ ಬದುಕುವುದು ಕಡ್ಡಾಯ ಪ್ರಕ್ರಿಯೆಯಲ್ಲ. ಆದರೆ ಮದುವೆಯು ಎರಡು ಪಕ್ಷಗಳ ನಡುವಿನ ಸಂಬಂಧವಾಗಿದೆ. ಈ ಬೆಸುಗೆ ಯಾವುದೇ ಸಂದರ್ಭದಲ್ಲಿ ಕೆಲಸ ಮಾಡದಿದ್ದರೆ, ಕೇವಲ ಪ್ರಕರಣ ಬಾಕಿ ಇರುವ ಕಾರಣಕ್ಕೆ ವಿಚ್ಛೇದನ ನೀಡುವುದನ್ನು ಮುಂದೂಡುವುದರಿಂದ ಯಾವುದೇ ಉದ್ದೇಶ ಈಡೇರುವಂತೆ ನಮಗೆ ಕಾಣುವುದಿಲ್ಲ"ಎಂದು ತೀರ್ಪು ಹೇಳಿದೆ.

ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಕಳೆದ 20 ವರ್ಷಗಳಿಂದ ವಿವಿಧ ನ್ಯಾಯಾಲಯಗಳ ಮೆಟ್ಟಿಲೇರಿದ್ದ ವ್ಯಕ್ತಿಯೊಬ್ಬರ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು. ಮದುವೆಯಾದ ರಾತ್ರಿಯೇ ಹೆಂಡತಿ ಮದುವೆ ಮಂಟಪದಿಂದ ಹೊರಟು ಹೋಗಿದ್ದು ವಿವಾಹ ಎಂದಿಗೂ ನೆರವೇರಿಲಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ “ಟೇಕಾಫ್‌ ಹಂತದಲ್ಲಿಯೇ ವಿವಾಹ ಕ್ರ್ಯಾಶ್‌ ಲ್ಯಾಂಡ್‌ ಆಗಿರುವಂತಿದೆ” ಎಂದು ಅಭಿಪ್ರಾಯಪಟ್ಟಿತು.

ವಿಚ್ಛೇದನ ಪ್ರಕರಣ ಹಲವು ಸುತ್ತಿನ ವ್ಯಾಜ್ಯಗಳನ್ನು ದಾಟಿ ಬಂದಿದೆ. ಸರಿಪಡಿಸಲಾರದಷ್ಟು ಮದುವೆ ಮುರಿದ್ದಿದ್ದರ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ವಿಚ್ಛೇದನ ನೀಡಿತ್ತು. ಮೇಲ್ಮನವಿ ನ್ಯಾಯಾಲಯ ಈ ಆದೇಶವನ್ನು ಬದಿಗೆ ಸರಿಸಿತ್ತು. ಎರಡನೇ ಮನವಿ ವೇಳೆ ವಿಚ್ಛೇದನ ತೀರ್ಪನ್ನು ಮತ್ತೆ ಅಂಗೀಕರಿಸಲಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ ಪತ್ನಿ ವಿಚ್ಛೇದನ ತೀರ್ಪು ನೀಡಲು ಹೈಕೋರ್ಟ್‌ಗೆ ನ್ಯಾಯವ್ಯಾಪ್ತಿ ಇಲ್ಲ ಎಂದು ವಾದಿಸಿದ್ದರು. ಪರಿಣಾಮ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

ಗಂಡ- ಹೆಂಡತಿ ಸುಮಾರು ಎರಡು ದಶಕಗಳಿಂದ ಪ್ರತ್ಯೇಕ ಜೀವನ ನಡೆಸುತ್ತಿದ್ದರೂ ಪ್ರತಿವಾದಿ (ಪತ್ನಿ) ಆದೇಶ ಸ್ವೀಕರಿಸಲು ಸಿದ್ಧರಿಲ್ಲ. ಆಕೆ ಗಂಡನ ಎರಡನೇ ವಿವಾಹದಿಂದ ವಿಚಲಿತರಾಗಲಿಲ್ಲ ಬದಲಿಗೆ ಅರ್ಜಿದಾರರೊಂದಿಗಿನ ತನ್ನ ವಿವಾಹ ಕೊನೆಗೊಂಡಿದ್ದನ್ನು ಒಪ್ಪಲು ಇಷ್ಟವಿರಲಿಲ್ಲ ಎಂದು ವಾದಿಸಲಾಗಿತ್ತು.

ಮದುವೆ ಚಾಲ್ತಿಯಲ್ಲಿ ಇಲ್ಲದೇ ಇರುವುದನ್ನು ಪರಸ್ಪರ ಸಮ್ಮತಿಯ ಕೊರತೆಯನ್ನು ಹಾಗೂ ಮೊದಲಿನಿಂದಲೂ ವಿವಾಹಕ್ಕೆ ಒಂದು ಕಡೆಯಿಂದ ಒಪ್ಪಿಗೆ ಇಲ್ಲದಿರುವುದನ್ನು ಗಮನಿಸಿದ ನ್ಯಾಯಾಲಯ ಸರಿಪಡಿಸಲಾಗಷ್ಟು ಮದುವೆ ಹಾನಿಗೀಡಾಗಿರುವುದಕ್ಕೆ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಮಾತ್ರವಲ್ಲದೆ ಸೆಕ್ಷನ್ 13 (1) (i-a) ಅಡಿಯಲ್ಲಿ ಕ್ರೌರ್ಯ ಎಸಗಿದ ಕಾರಣಕ್ಕೂ ವಿವಾಹ ರದ್ದುಪಡಿಸಿತು.

Related Stories

No stories found.
Kannada Bar & Bench
kannada.barandbench.com