ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ಉಡುಪಿ ಪೊಲೀಸರು ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ದಾಖಲೆ ಸೇರಿದಂತೆ ವಿವಿಧ ಮಾಹಿತಿಯನ್ನು ಶನಿವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಸಲ್ಲಿಸಿರುವ ʼಬಿʼ ರಿಪೋರ್ಟ್ ಜೊತೆಗಿನ ದಾಖಲೆಗಳನ್ನು ಹಂಚಿಕೊಳ್ಳುವಂತೆ ಕೋರಿ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಸಲ್ಲಿಸಿರುವ ಮೆಮೊ ವಿಚಾರಣೆಯನ್ನು 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹಾಗೂ ಮಾಜಿ-ಹಾಲಿ ಶಾಸಕ/ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಜೆ ಪ್ರೀತ್ ಅವರು ನಡೆಸಿದರು.
ಪೀಠದ ಮುಂದೆ ಹಾಜರಾದ ಉಡುಪಿ ಪೊಲೀಸರು ನ್ಯಾಯಾಲಯದ ನಿರ್ದೇಶನದಂತೆ ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ಪೀಠವು ಕಳೆದ ವಿಚಾರಣೆಯಲ್ಲಿನ ನಿರ್ದೇಶನದಂತೆ ತನಿಖಾಧಿಕಾರಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಲಾಗುವುದು ಎಂದು ಹೇಳಿ, ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿತು.
ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಅವರ ಪುತ್ರ ಕೆ ಇ ಕಾಂತೇಶ್ ಸೇರಿದಂತೆ ಹಲವರ ಕರೆ ದಾಖಲೆ ಒಳಗೊಂಡು ಇನ್ನಿತರ ಮಾಹಿತಿ ಸಲ್ಲಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗೆ ಅರ್ಜಿದಾರರ ಕೋರಿಕೆಯಂತೆ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಲು ನ್ಯಾಯಾಲಯ ಆದೇಶ ಮಾಡಿತ್ತು.