ಸಂತೋಷ್‌ ಪ್ರಕರಣ: ಈಶ್ವರಪ್ಪ, ಪುತ್ರ ಕಾಂತೇಶ್‌ ಕರೆ ದಾಖಲೆ, ಸಿಸಿಟಿವಿ ತುಣುಕು ಸಲ್ಲಿಸಲು ಪೊಲೀಸರಿಗೆ ನ್ಯಾಯಾಲಯ ಆದೇಶ

ವಿಸ್ತೃತ ಆಕ್ಷೇಪ ದಾಖಲಿಸುವ ಉದ್ದೇಶ ಹೊಂದಿದ್ದು, ಪ್ರತಿರೋಧ ಅರ್ಜಿ ಸಲ್ಲಿಸಲು ಡಿಜಿಟಲ್‌ ಸಾಕ್ಷ್ಯವನ್ನು ಪರಿಶೀಲಿಸುವುದು ಅತ್ಯಗತ್ಯ. ಡಿಜಿಟಲ್‌ ಸಾಕ್ಷ್ಯವನ್ನು ತನಿಖಾಧಿಕಾರಿ ನೀಡದಿದ್ದರೆ ಆಕ್ಷೇಪ ಸಲ್ಲಿಸಲಾಗದು ಎಂದಿರುವ ಅರ್ಜಿದಾರರು.
Former minister K S Eshwarappa, Santosh Patil (deceased contractor) and K E Kantesh
Former minister K S Eshwarappa, Santosh Patil (deceased contractor) and K E Kantesh

ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಏಪ್ರಿಲ್‌ 11 ಮತ್ತು 12ರಂದು ಉಡುಪಿ ಪೊಲೀಸರು ಸಂಗ್ರಹಿಸಿರುವ ಸಿಸಿಟಿವಿ ತುಣುಕು, ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ, ಅವರ ಪುತ್ರ ಕೆ ಇ ಕಾಂತೇಶ್‌ ಸೇರಿದಂತೆ ಹಲವರ ಕರೆ ದಾಖಲೆ ಒಳಗೊಂಡು ಇನ್ನಿತರ ಮಾಹಿತಿ ಸಲ್ಲಿಸಲು ಬೆಂಗಳೂರಿನ ವಿಶೇಷ ನ್ಯಾಯಾಲಯವು ಉಡುಪಿ ಪೊಲೀಸರಿಗೆ ಬುಧವಾರ ಆದೇಶಿಸಿದೆ.

ಸಂತೋಷ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಸಲ್ಲಿಸಿರುವ ʼಬಿʼ ರಿಪೋರ್ಟ್‌ ಜೊತೆಗಿನ ದಾಖಲೆಗಳನ್ನು ಹಂಚಿಕೊಳ್ಳುವಂತೆ ಕೋರಿ ಸಂತೋಷ್‌ ಸಹೋದರ ಪ್ರಶಾಂತ್‌ ಪಾಟೀಲ್‌ ಸಲ್ಲಿಸಿರುವ ಮೆಮೊ ವಿಚಾರಣೆಯನ್ನು 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಮಾಜಿ-ಹಾಲಿ ಶಾಸಕ/ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಜೆ ಪ್ರೀತ್‌ ಅವರು ನಡೆಸಿದರು. ಅರ್ಜಿದಾರರ ಕೋರಿಕೆಗೆ ಸಮ್ಮತಿಸಿದ ಪೀಠವು ಸಂಬಂಧಿತ ದಾಖಲೆಯನ್ನು ಸಲಿಸುವಂತೆ ಉಡುಪಿ ಪೊಲೀಸರಿಗೆ ಆದೇಶಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 17ಕ್ಕೆ ಮುಂದೂಡಿತು.

ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದು, ತನಿಖಾಧಿಕಾರಿಯು ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ಡಿಜಿಟಲ್‌ ದಾಖಲೆಯನ್ನು ನೀಡಿಲ್ಲ ಎಂದು ದೂರುದಾರರು/ಅರ್ಜಿದಾರರು ಆಕ್ಷೇಪಿಸಿದ್ದಾರೆ.

ವಿಸ್ತೃತ ಆಕ್ಷೇಪ ದಾಖಲಿಸುವ ಉದ್ದೇಶ ಹೊಂದಿದ್ದು, ಪ್ರತಿರೋಧ ಅರ್ಜಿ ಸಲ್ಲಿಸಲು ಡಿಜಿಟಲ್‌ ಸಾಕ್ಷ್ಯವನ್ನು ಪರಿಶೀಲಿಸುವುದು ಅತ್ಯಗತ್ಯ. ಡಿಜಿಟಲ್‌ ಸಾಕ್ಷ್ಯವನ್ನು ತನಿಖಾಧಿಕಾರಿ ನೀಡದಿದ್ದರೆ ಆಕ್ಷೇಪ ಸಲ್ಲಿಸಲಾಗದು. ಹೀಗಾಗಿ, ನ್ಯಾಯಾಲಯವು ಮಧ್ಯಪ್ರವೇಶಿಸಿ ಕೆಳಗಿನ ದಾಖಲೆಗಳನ್ನು ಕೊಡಿಸಲು ತನಿಖಾಧಿಕಾರಿಗೆ ಪೀಠವು ನಿರ್ದೇಶಿಸಬೇಕು ಎಂದು ಮೆಮೊದಲ್ಲಿ ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರನ್ನು ವಕೀಲ ಕೆ ಬಿ ಕೆ ಸ್ವಾಮಿ ಅವರು ಪ್ರತಿನಿಧಿಸಿದ್ದಾರೆ.

K B K Swamy, Advocate
K B K Swamy, Advocate

ಅರ್ಜಿದಾರರ ಕೋರಿಕೆಗಳು ಏನೇನು?

Also Read
ಸಂತೋಷ್‌ ಆತ್ಮಹತ್ಯೆ ಪ್ರಕರಣ: ತನಿಖಾಧಿಕಾರಿ ಸಲ್ಲಿಸಿರುವ 'ಬಿ' ರಿಪೋರ್ಟ್‌ ಜೊತೆಗಿನ ದಾಖಲೆ ಕೋರಿ ಮೆಮೊ ಸಲ್ಲಿಕೆ
  • ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ 2022ರ ಏಪ್ರಿಲ್‌ 11-13ರ ನಡುವೆ ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೊ ತುಣುಕು.

  • ಸ್ಯಾನ್‌ ಡಿಸ್ಕ್‌ ಕ್ರೂಜರ್‌ ಬ್ಲೇಡ್‌ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಲಾಗಿರುವ ಸಿಸಿಟಿವಿ ತುಣುಕು.

  • ಸಂತೋಷ್‌ ಪಾಟೀಲ್‌ ಫೋನ್‌ನಿಂದ ಸಂಗ್ರಹಿಸಲಾಗಿರುವ, ಸ್ಯಾನ್‌ ಡಿಸ್ಕ್‌ ಪೆನ್‌ಡ್ರೈವ್‌ನಲ್ಲಿ ಹಾಕಲಾಗಿರುವ ದತ್ತಾಂಶ.

  • ಉಡುಪಿಯ ಶಾಂತಿ ಸಾಗರ್‌ ಹೋಟೆಲ್‌ ಮತ್ತು ಸಿದ್ಧಾರ್ಥ್‌ ಲಾಡ್ಜ್‌ನಲ್ಲಿನ ಏಪ್ರಿಲ್‌ 11-15ರ ನಡುವಿನ ಸಿಸಿಟಿವಿ ತುಣಕು.

  • ಉಡುಪಿಯ ಆಶಾ ಬಾರ್‌ನಲ್ಲಿನ ಏಪ್ರಿಲ್‌ 15ರ ಸಿಸಿಟಿವಿ ತುಣಕು.

  • ಚಿಕ್ಕಮಗಳೂರಿನ ಕಲ್ಲೇದೇವರಪುರದ ಅರಳಗುಪ್ಪೆಯ ಭಾಗೀರಥಿ ಎಸ್ಟೇಟ್‌ನಲ್ಲಿರುವ ಬೋನ್‌ ಎಎಫ್‌ ಬೆರಿ ಹೋಮ್‌ ಸ್ಟೇನಲ್ಲಿನ ಏಪ್ರಿಲ್‌ 17ರ ಸಿಸಿಟಿವಿ ತುಣಕು.

  • 2022ರ ಏಪ್ರಿಲ್‌ 27ರಂದು ಯೂಟ್ಯೂಬ್‌ನಲ್ಲಿ ಡೌನ್‌ಲೋಡ್‌ ಮಾಡಿರುವ ಮಾಹಿತಿ ಒಳಗೊಂಡ ಡಿವಿಡಿ.

  • 2022ರ ಜುಲೈ 11ರಂದು ನ್ಯೂಸ್‌ ಫಸ್ಟ್‌ ಕನ್ನಡ ಸುದ್ದಿ ಮಾಧ್ಯಮದಿಂದ ವಶಪಡಿಸಿಕೊಳ್ಳಲಾದ ಮಾಹಿತಿ ಒಳಗೊಂಡ ಡಿವಿಡಿ.

  • ಸಂತೋಷ್‌ ಪಾಟೀಲ್‌, ಮೊದಲ ಆರೋಪಿ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ, ಈಶ್ವರಪ್ಪ ಪುತ್ರ ಕೆ ಇ ಕಾಂತೇಶ್‌ ಎರಡನೇ ಆರೋಪಿ ಬಸವರಾಜ ಕುರಿ, ಮೂರನೇ ಆರೋಪಿ ರಮೇಶ್‌, ಪ್ರಶಾಂತ್‌ ಶೆಟ್ಟಿ, ಸಂತೋಷ್‌ ಅಲಿಯಾಸ್‌ ಮಾದಪ್ಪ, ವಿಕಾಸ್‌ ವೈ ಎಸ್‌., ನವೀನ್‌ ಎಂ. ತೋರಗಲ್‌, ಎನ್‌ ಎಸ್‌ ಪಾಟೀಲ್‌, ಅಮುಲ್‌ ಜಯವಂತ್‌ ದಂಡಾಗಲ್ಕರ್‌, ಶ್ರೀನಿವಾಸ್‌ ಮರನಾಗಪ್ಪನ್ನವರ್‌ ಹಾಗೂ ಸಂತೋಷ್‌ ಸಾವನ್ನಪ್ಪುವುದಕ್ಕೂ ಮುನ್ನ ಅಂದರೆ ಏಪ್ರಿಲ್‌ 11ಕ್ಕೂ ಮುನ್ನಾದಿನ ಕರೆ ಮಾಡಿದ್ದ 26 ಮೊಬೈಲ್‌ ಸಂಖ್ಯೆಗಳನ್ನು ಕೊಡಿಸಲು ಅರ್ಜಿದಾರರು ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com