ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಪರಿಶೀಲನೆ ನಂತರ ಡಿಜಿಟಲ್ ದಾಖಲೆ ನೀಡುವುದಾಗಿ ತಿಳಿಸಿದ ವಿಶೇಷ ನ್ಯಾಯಾಲಯ
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ದಾಖಲೆಗಳನ್ನು ಅಕ್ಟೋಬರ್ 25ರಂದು ನೀಡುವುದಾಗಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅರ್ಜಿದಾರರಿಗೆ ಸೋಮವಾರ ತಿಳಿಸಿದೆ.
ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಸಲ್ಲಿಸಿರುವ ʼಬಿʼ ರಿಪೋರ್ಟ್ ಜೊತೆಗಿನ ದಾಖಲೆಗಳನ್ನು ಹಂಚಿಕೊಳ್ಳುವಂತೆ ಕೋರಿ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಸಲ್ಲಿಸಿರುವ ಮೆಮೊ ವಿಚಾರಣೆಯನ್ನು 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹಾಗೂ ಮಾಜಿ-ಹಾಲಿ ಶಾಸಕ/ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಜೆ ಪ್ರೀತ್ ಅವರು ನಡೆಸಿದರು.
ಡಿಜಿಟಲ್ ದಾಖಲೆಗಳು ಆಡಿಯೊ ಮತ್ತು ವಿಡಿಯೊ ರೂಪದಲ್ಲಿ ಅಪಾರ ಪ್ರಮಾಣದಲ್ಲಿವೆ. ಅದನ್ನು ಪರಿಶೀಲಿಸಿ ನೀಡಲಾಗುವುದು ಎಂದು ಪೀಠವು ಹೇಳಿದ್ದು, ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿದೆ.
ನ್ಯಾಯಾಲಯದ ನಿರ್ದೇಶನದಂತೆ ತನಿಖಾಧಿಕಾರಿಯು ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ದಾಖಲೆಗಳನ್ನು ಸೆಪ್ಟೆಂಬರ್ 18ರಂದು ಪೀಠಕ್ಕೆ ಸಲ್ಲಿಸಿದ್ದರು. ಇವುಗಳನ್ನು ಪಡೆಯಲು ಅರ್ಜಿದಾರರು ಹಾರ್ಡ್ ಡಿಸ್ಕ್ ಮತ್ತು ಪೆನ್‌ಡ್ರೈವ್ ನೀಡಬೇಕು ಎಂದು ಪೀಠವು ಸೆಪ್ಟೆಂಬರ್ 27ರ ವಿಚಾರಣೆಯಲ್ಲಿ ಹೇಳಿತ್ತು. ಈಗ ಸಾಕಷ್ಟು ಪ್ರಮಾಣದ ಆಡಿಯೊ ಮತ್ತು ವಿಡಿಯೊ ಡಿಜಿಟಲ್ ದಾಖಲೆಗಳು ಇರುವುದರಿಂದ ಅವುಗಳನ್ನು ಪರಿಶೀಲಿಸಿ, ಅರ್ಜಿದಾರರ ಕೋರಿಕೆಯಂತೆ ದಾಖಲೆಗಳನ್ನು ಪೂರೈಸಲಾಗುವುದು ಎಂದಿರುವ ನ್ಯಾಯಾಲಯವು ವಿಚಾರಣೆ ಮುಂದೂಡಿದೆ.