ರೈತ ವಿರೋಧಿ ಟ್ವೀಟ್: ಇಂದು ನಟಿ ಕಂಗನಾ ಅರ್ಜಿಯ ವಿಚಾರಣೆ ನಡೆಸಲಿರುವ ಕರ್ನಾಟಕ ಹೈಕೋರ್ಟ್

ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಕಂಗನಾ ಅವರು ವಕೀಲೆ ಇರ್ಫಾನಾ ನಜೀರ್‌ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ರೈತ ವಿರೋಧಿ ಟ್ವೀಟ್: ಇಂದು ನಟಿ ಕಂಗನಾ ಅರ್ಜಿಯ ವಿಚಾರಣೆ ನಡೆಸಲಿರುವ ಕರ್ನಾಟಕ ಹೈಕೋರ್ಟ್
Published on

ರೈತರ ಪ್ರತಿಭಟನೆ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯಲಿದೆ.

ಕಳೆದ ಅಕ್ಟೋಬರ್‌ನಲ್ಲಿ ತುಮಕೂರಿನ ಜೆಎಂಎಫ್‌ಸಿ ನ್ಯಾಯಾಲಯ ನಟಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಕಂಗನಾ ಕರ್ನಾಟಕ ಹೈಕೋರ್ಟ್‌ಗೆ ವಕೀಲೆ ಇರ್ಫಾನಾ ನಜೀರ್‌ ಅವರ ಮೂಲಕ ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

Also Read
ನಟಿ ಕಂಗನಾ ಹೇಳಿದ್ದು ರೈತ ಸಮುದಾಯವನ್ನು ಘಾಸಿಗೊಳಿಸುವಂತಹ ಮಾತುಗಳು: ವಕೀಲ ರಮೇಶ್ ನಾಯಕ್

ಸೆಪ್ಟೆಂಬರ್‌ 21ರಂದು ಕಂಗನಾ “ಕೃಷಿ ಕಾಯಿದೆಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಜನರೇ ಈ ಹಿಂದೆ ಸಿಎಎ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದರು. ಇವರು ದೇಶದಲ್ಲಿ ಭಯದ ಸ್ಥಿತಿಯನ್ನು ಉಂಟು ಮಾಡುತ್ತಿದ್ದು ಭಯೋತ್ಪಾದಕರಾಗಿದ್ದಾರೆ” ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿ ತುಮಕೂರು ಮೂಲದ ವಕೀಲ ರಮೇಶ್‌ ನಾಯಕ್‌ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. “ಇಂತಹ ಟ್ವೀಟ್‌ಗಳಿಗೆ ಅನುಮತಿ ನೀಡಿದರೆ ದೇಶದ ರೈತರಿಗೆ ಅಪಾರವಾದ ಮತ್ತು ಸರಿಪಡಿಸಲು ಸಾಧ್ಯವಿಲ್ಲದಷ್ಟು ಹಾನಿ ಉಂಟಾಗುತ್ತದೆ” ಎಂದು ಅವರು ಹೇಳಿದ್ದರು.

Kannada Bar & Bench
kannada.barandbench.com