ಕೇರಳದ ಜೈಲುಗಳಲ್ಲಿರುವ ಕೈದಿಗಳ ವೇತನ ಹೆಚ್ಚಳ ಮತ್ತು ಅವರ ಅನುಮತಿಸಬಹುದಾದ ದೂರವಾಣಿ ಕರೆಗಳಲ್ಲಿ ಹೆಚ್ಚಳ ಮಾಡುವಂತೆ ಕೋರಿ ಅಪರಾಧಿಯೊಬ್ಬ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ [ಅನೀಶ್ ಕುಮಾರ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]
ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾ. ಎನ್ ನಗರೇಶ್ ಅವರು ಮುಂದಿನ ವಿಚಾರಣೆ ನಡೆಯಲಿರುವ ಡಿಸೆಂಬರ್ 5ರೊಳಗೆ ಪ್ರತಿಕ್ರಿಯೆ ನೀಡುವಂತೆ ಪ್ರತಿವಾದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಣ್ಣೂರಿನ ಕೇಂದ್ರೀಯ ಕಾರಾಗೃಹ ಮತ್ತು ಸುಧಾರಣಾ ಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 63 ವರ್ಷದ ಅಪರಾಧಿ ಅನೀಶ್ ಕುಮಾರ್ ಮನವಿ ಸಲ್ಲಿಸಿದ್ದಾನೆ.
ತೀವ್ರ ನಿಗಾ ಇರುವ ಕಾರಾಗೃಹದಲ್ಲಿರುವ (ಮುಚ್ಚಿದ ಸೆರೆಮನೆ) ಕೈದಿಗಳಿಗೆ ಪ್ರತಿದಿನ ₹ 63 ರಿಂದ ₹ 127 ರವರೆಗೆ ವೇತನ ಇದ್ದರೆ, ತೆರೆದ ಕಾರಾಗೃಹದಲ್ಲಿರುವವರು ದಿನಕ್ಕೆ ₹ 170 ಮತ್ತು ಹೆಚ್ಚಿನ ಕೆಲಸಕ್ಕೆ ₹ 230 ವೇತನ ಪಡೆಯುತ್ತಿದ್ದಾರೆ. ಆದರೆ ಕೇರಳ ಮತ್ತು ಕರ್ನಾಟಕದ ನಡುವಿನ ವೇತನದಲ್ಲಿ ತಾರತಮ್ಯ ಇದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ, ಸೆರೆವಾಸ ಅನುಭವಿಸಿದ ಒಂದು ವರ್ಷದ ನಂತರ ಕೌಶಲ್ಯರಹಿತ ಕೈದಿಗಳು ದಿನಕ್ಕೆ ₹ 524ರವರೆಗೆ ಗಳಿಸಿದರೆ, ಕುಶಲ ಕೆಲಸ ಮಾಡುವ ಕೈದಿಗಳು ₹ 548 ರವರೆಗೆ ಗಳಿಸುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
" ಕೈದಿಗಳಿಗೆ ಪಾವತಿಸುವ ವೇತನ ನ್ಯಾಯಯುತ ಮತ್ತು ಸಮಾನವಾಗಿರಬೇಕು ಮತ್ತು ಕಾಲಕಾಲಕ್ಕೆ ಆಯಾ ರಾಜ್ಯ ಸರ್ಕಾರಗಳು ಸೂಚಿಸುವ ಕನಿಷ್ಠ ವೇತನ ಗಮನದಲ್ಲಿಟ್ಟುಕೊಂಡು ವೇತನ ಹೆಚ್ಚಿಸಬೇಕು " ಎಂದು ಮಾದರಿ ಜೈಲು ಕೈಪಿಡಿಯ ಅಂಶವನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಕೋರಲಾಗಿದೆ.
ಸೆರೆವಾಸ ಅನುಭವಿಸುತ್ತಿರುವವರ ಫೋನ್ ಕರೆಗಳಿಗೆ ನಿಮಿಷಕ್ಕೆ ₹1ರಂತೆ ದುಬಾರಿ ವೆಚ್ಚ ವಿಧಿಸುತ್ತಿರುವ ಕುರಿತಂತೆಯೂ ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈದಿಗಳು ಎದುರಿಸುತ್ತಿರುವ ಆರ್ಥಿಕ ಮಿತಿ ಹಿನ್ನೆಲೆಯಲ್ಲಿ ಇದು ದುಬಾರಿ ಮತ್ತು ಅನಿಯಂತ್ರಿತ ದರವಾಗಿದೆ ಎಂದು ಅವರು ಹೇಳಿದ್ದಾರೆ.
ಜೊತೆಗೆ ಕೈದಿಗಳಿಗೆ ಅನುಮತಿಸುವ ದೂರವಾಣಿ ಕರೆಗಳ ಸಂಖ್ಯೆಯಲ್ಲಿ ಇರುವ ನಿರ್ಬಂಧದಿಂದಾಗಿ ಅಂತಹ ಕೈದಿಗಳು ಸಾಮಾಜಿಕ ಸಂಬಂಧ ಕಾಪಾಡಿಕೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ಆ ಬಗೆಯ ಕರೆ ಸಂಖ್ಯೆಗಳನ್ನು ಹೆಚ್ಚಳ ಮಾಡಬೇಕು ಎಂದು ಕೋರಲಾಗಿದೆ. ಅರ್ಜಿದಾರನ ಪರ ವಕೀಲರಾದ ಪ್ರಸೂನ್ ಸನ್ನಿ, ರಾಜಿ ಎಸ್ ಮತ್ತು ರಿಟ್ಟಿ ಕೆ ರೆಜಿ ವಾದ ಮಂಡಿಸಿದರು.