ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ ಮಾರ್ಪಡಿಸಲಾದ ಅಪರಾಧಿಯು ಕ್ಷಮೆಗೂ ಅರ್ಹ: ಪಟ್ನಾ ಹೈಕೋರ್ಟ್‌

ಮರಣದಂಡನೆಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಟು ಮಾಡಲಾದ ಅಪರಾಧಿಯ ಮನವಿಯನ್ನು ಪರಿಗಣಿಸಲು ಪಟ್ನಾ ಹೈಕೋರ್ಟ್‌ ಕ್ಷಮಾದಾನ ಮಂಡಳಿಗೆ ನಿರ್ದೇಶಿಸಿತು.
Man walking out of prison and Patna High Court

Man walking out of prison and Patna High Court

ಅಪರಾಧಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಕಡಿತ ಮಾಡಿದರೆ ಆತ ಕ್ಷಮೆಗೂ ಅರ್ಹ ಎಂದು ಪಟ್ನಾ ಹೈಕೋರ್ಟ್‌ ಈಚೆಗೆ ಪುನರುಚ್ಚರಿಸಿದೆ.

ಸಿಆರ್‌ಪಿಸಿ ಸೆಕ್ಷನ್‌ 433 ಮತ್ತು 433ಎ ಅನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ರಂಜನ್‌ ಪ್ರಸಾದ್‌ ನೇತೃತ್ವದ ಏಕಸದಸ್ಯ ಪೀಠವು ಮರಣದಂಡನೆಗೆ ಗುರಿಯಾಗಿದ್ದ ವ್ಯಕ್ತಿಯ ಶಿಕ್ಷೆಯನ್ನು ಜೀವಾವಧಿಗೆ ಕಡಿತಗೊಳಿಸಿದರೆ, ಆತ ಹದಿನಾಲ್ಕು ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದರೆ ಅಂಥವರನ್ನು ಬಿಡುಗಡೆ ಮಾಡಬಹುದು ಎಂದು ಹೇಳಿದೆ.

ಕಳೆದ ವರ್ಷದ ಜನವರಿ 27ರಂದು ಅವಧಿಪೂರ್ಣವಾಗಿ ಅಪರಾಧಿಯನ್ನು ಬಿಡುಗಡೆ ಮಾಡಲಾಗದು ಎಂದಿದ್ದ ಕ್ಷಮಾದಾನ ಮಂಡಳಿಯ ನಿಲುವು ಸಂಪೂರ್ಣವಾಗಿ ಸ್ವೇಚ್ಛೆಯಿಂದ ಕೂಡಿದ್ದು, ಕಾನೂನುಬಾಹಿರವಾಗಿದೆ. ಹೀಗಾಗಿ ಅದನ್ನು ಬದಿಗೆ ಸರಿಸಬೇಕಿದೆ ಎಂದು ಪೀಠವು ಹೇಳಿದ್ದು, ಅಪರಾಧಿಯ ಕೋರಿಕೆಯನ್ನು ಪರಿಗಣಿಸುವಂತೆ ಬಿಹಾರ ರಾಜ್ಯ ಕ್ಷಮಾದಾನ ಮಂಡಳಿಗೆ ನಿರ್ದೇಶಿಸಿದೆ.

ಈಗಾಗಲೇ ಜೈಲಿನಲ್ಲಿ 20 ವರ್ಷ ಕಳೆದಿರುವ ಅಪರಾಧಿಯ ಮನವಿಯನ್ನು ಹೊಸದಾಗಿ ಪರಿಗಣಿಸುವಂತೆ ಕ್ಷಮಾದಾನ ಮಂಡಳಿಗೆ ನ್ಯಾಯಾಲಯ ಆದೇಶಿಸಿದೆ. “ಅರ್ಜಿದಾರರನ್ನು ಅವಧಿಪೂರ್ಣವಾಗಿ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಕ್ಷಮಾದಾನ ಮಂಡಳಿಯು ಪರಿಗಣಿಸಬೇಕು. ಈ ಆದೇಶದ ಹಿನ್ನೆಲೆಯಲ್ಲಿ ಬಹುಶಃ ನಡೆಯಬಹುದಾದ ಮುಂದಿನ ಸಭೆಯಲ್ಲಿ ಇದನ್ನು ಪರಿಗಣಿಸಬೇಕು. ಈ ಆದೇಶ ಸಿಕ್ಕ ಎರಡು ತಿಂಗಳ ಒಳಗೆ ನಿರ್ಧಾರವಾಗಬೇಕು” ಎಂದು ಡಿಸೆಂಬರ್‌ 13ರ ಆದೇಶದಲ್ಲಿ ಪೀಠವು ಹೇಳಿದೆ.

Also Read
ಎನ್‌ಎಲ್‌ಎಸ್‌ಐಯು ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ ಮರಣದಂಡನೆ ಶಿಕ್ಷೆಗೆ ಶಿಫಾರಸು ಮಾಡಿದ ಹೈಕೋರ್ಟ್

ಸಿಆರ್‌ಪಿಸಿ ಸೆಕ್ಷನ್‌ 433 ಮತ್ತು 433ಎ, ಬಿಹಾರ ಕಾರಾಗೃಹ ಕೈಪಿಡಿ ನಿಬಂಧನೆಯ ಜೊತೆಗೆ ಪಟ್ನಾ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ರೂಪಿಸಿರುವ ತತ್ವಗಳ ಅಡಿ ಅರ್ಜಿದಾರರನ್ನು ಅವಧಿಪೂರ್ಣವಾಗಿ ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ಮನವಿದಾರರ ಪರ ವಕೀಲರು ಕೋರಿದ್ದರು.

2002ರಲ್ಲಿ 14 ವಯೋಮಾನದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದಕ್ಕೆ ಸಂಬಂಧಿಸಿದಂತೆ 2005ರಲ್ಲಿ ವಿಚಾರಣಾಧೀನ ನ್ಯಾಯಾಲಯವು ಅರ್ಜಿದಾರಿಗೆ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಪಟ್ನಾ ಹೈಕೋರ್ಟ್‌ನ ವಿಭಾಗೀಯ ಪೀಠವು ಅಪಹರಣ ಮತ್ತು ಕ್ರಿಮಿನಲ್‌ ಪಿತೂರಿ ಆರೋಪಗಳನ್ನು ಕೈಬಿಟ್ಟು, ಕೊಲೆ ಆರೋಪವನ್ನು ಎತ್ತಿ ಹಿಡಿದಿತ್ತು. ಅಲ್ಲದೇ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.

Related Stories

No stories found.
Kannada Bar & Bench
kannada.barandbench.com