ವ್ಯಭಿಚಾರ ಅಪರಾಧವಲ್ಲ ಎನ್ನುವ ಸುಪ್ರೀಂ ತೀರ್ಪು 2018ರ ಹಿಂದಿನ ಬಾಕಿ ಪ್ರಕರಣಗಳಿಗೂ ಅನ್ವಯ: ಜಾರ್ಖಂಡ್ ಹೈಕೋರ್ಟ್

ಸಂವಿಧಾನದ 141ನೇ ವಿಧಿ ಪ್ರಕಾರ, ಸುಪ್ರೀಂಕೋರ್ಟ್ ನೀಡಿದ ತೀರ್ಪು ಎಲ್ಲಾ ಕೆಳ ನ್ಯಾಯಾಲಯಗಳಿಗೂ ಮತ್ತು ಬಾಕಿ ಇರುವ ಎಲ್ಲಾ ವಿಚಾರಣೆಗಳಿಗೂ ಅನ್ವಯವಾಗುತ್ತದೆ ಎಂದು ನ್ಯಾ. ಅನುಭಾ ರಾವತ್ ಚೌಧರಿ ಅವರಿದ್ದ ಪೀಠ ತಿಳಿಸಿದೆ.
Jharkhand High Court
Jharkhand High Court

ವ್ಯಭಿಚಾರವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 497 ಅನ್ನು ರದ್ದುಗೊಳಿಸಿದ್ದ 2018ರ ಸುಪ್ರೀಂಕೋರ್ಟ್‌ ತೀರ್ಪು ಅದಕ್ಕಿಂತಲೂ ಹಿಂದಿನ ಬಾಕಿ ಉಳಿದಿರುವ ಪ್ರಕರಣಗಳಿಗೂ ಪೂರ್ವಾನ್ವಯವಾಗುತ್ತದೆ ಎಂದು ಜಾರ್ಖಂಡ್‌ ಹೈಕೋರ್ಟ್‌ ತಿಳಿಸಿದೆ (ಆಗಸ್ಟ್ ಕುಮಾರ್ ಮೆಹ್ತಾ ಮತ್ತು ಜಾರ್ಖಂಡ್ ಸರ್ಕಾರದ ನಡುವಣ ಪ್ರಕರಣ).

ಸಂವಿಧಾನದ 141 ನೇ ವಿಧಿ ಪ್ರಕಾರ, ಸುಪ್ರೀಂಕೋರ್ಟ್‌ ನೀಡಿದ ತೀರ್ಪು ಎಲ್ಲಾ ಕೆಳ ನ್ಯಾಯಾಲಯಗಳಿಗೂ ಮತ್ತು ಬಾಕಿ ಇರುವ ಎಲ್ಲಾ ವಿಚಾರಣೆಗಳಿಗೂ ಅನ್ವಯವಾಗುತ್ತದೆ ಎಂದು ನ್ಯಾಯಮೂರ್ತಿ ಅನುಭಾ ರಾವತ್ ಚೌಧರಿ ಅವರಿದ್ದ ಪೀಠ ತಿಳಿಸಿದೆ.

2018 ರಲ್ಲಿ ಸುಪ್ರೀಂಕೋರ್ಟ್ ಸೆಕ್ಷನ್ 497 ಅನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿದ್ದರಿಂದ ವ್ಯಭಿಚಾರದ ಆರೋಪದಡಿ ವ್ಯಕ್ತಿಯೊಬ್ಬನಿಗೆ 2008 ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪು ಮತ್ತು ಸೆಷನ್ಸ್ ನ್ಯಾಯಾಲಯದ 2013ರ ತೀರ್ಪನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಪ್ರಕರಣದಲ್ಲಿ ಅರ್ಜಿದಾರನನ್ನು ವ್ಯಭಿಚಾರ ಆರೋಪದಡಿ ಶಿಕ್ಷೆಗೆ ಗುರಿಪಡಿಸಲಾಗಿತ್ತು. 2008 ರಲ್ಲಿ ವಿಚಾರಣಾ ನ್ಯಾಯಾಲಯವು ಎರಡು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಗೆ ಆದೇಶಿಸಿತ್ತು. 2013ರ ಅಕ್ಟೋಬರ್‌ನಲ್ಲಿ ಶಿಕ್ಷೆಯನ್ನು ಸೆಷನ್ಸ್‌ ನ್ಯಾಯಾಲಯ ದೃಢಪಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸಂವಿಧಾನದ 14,15 ಮತ್ತು 21 ನೇ ವಿಧಿಗಳನ್ನು ಉಲ್ಲಂಘನೆಯನ್ನು ಸೆಕ್ಷನ್‌ 497 ಮಾಡುವುದರಿಂದ ಸುಪ್ರೀಂ ಕೋರ್ಟ್ ಅದನ್ನು ಅಸಾಂವಿಧಾನಿಕ ಎಂದು ತಳ್ಳಿಹಾಕಿದೆ ಎಂಬುದಾಗಿ ನ್ಯಾ. ಅನುಭಾ ರಾವತ್ ಚೌಧರಿ ತಿಳಿಸಿದರು. ಮೇಜರ್‌ ಜನರಲ್‌ ಎ ಎಸ್‌ ಗೌರಯ ಮತ್ತಿತರರು ಹಾಗೂ ಎಸ್‌ ಎನ್‌ ಠಾಕೂರ್‌ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪು 2018ರ ಹಿಂದಿನ ಬಾಕಿ ಇರುವ ವಿಚಾರಣಾ ಪ್ರಕ್ರಿಯೆಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದ ಅಂಶವನ್ನು ಆಧರಿಸಿ ನ್ಯಾಯಾಲಯ ಈ ತೀರ್ಪು ನೀಡಿತು.

Also Read
ವ್ಯಭಿಚಾರ ನಿರಪರಾಧೀಕರಣವನ್ನು ಸೇನೆಗೆ ಅನ್ವಯಿಸಲಾಗದು ಎಂದ ಕೇಂದ್ರ; ಸಾಂವಿಧಾನಿಕ ಪೀಠಕ್ಕೆ ವಿಷಯದ ವರ್ಗಾವಣೆ

"ಪರಿಷ್ಕರಣೆ ಅರ್ಜಿ ಬಾಕಿ ಇರುವಾಗ, ಅರ್ಜಿದಾರನನ್ನು ಅಂತಿಮವಾಗಿ ಶಿಕ್ಷೆಗೊಳಪಡಿಸಿದ ಐಪಿಸಿ ಸೆಕ್ಷನ್ 497 ಅನ್ನು ಅಸಂವಿಧಾನಿಕ ಎಂದು ಘೋಷಿಸಲಾಗಿದೆ. ಈ ತೀರ್ಪು ಸಂವಿಧಾನದ 141ನೇ ವಿಧಿ ಅನ್ವಯ ಒಂದು ಪೂರ್ವನಿದರ್ಶನವಾಗಿದೆ" ಎಂದ ಪೀಠ ವಿಚಾರಣಾ ನ್ಯಾಯಾಲಯದ ಶಿಕ್ಷೆಯ ಆದೇಶವನ್ನು ತಳ್ಳಿಹಾಕಿತು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲ ಅಮಿತ್ ಕುಮಾರ್ ದಾಸ್ ಹಾಜರಿದ್ದರೆ, ಸರ್ಕಾರದ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ವಂದನಾ ಭಾರತಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com