ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಹಕ್ಕು ಅಪರಾಧಿಗಳಿಗೆ ಇದೆ: ಕೇರಳ ಹೈಕೋರ್ಟ್

ತನ್ನ ಮಗ ಪಿಯು ಶಿಕ್ಷಣ ಪಡೆಯಲು ಸಹಾಯವಾಗುವಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬರಿಗೆ ನ್ಯಾಯಾಲಯ ಒಂದು ವಾರದ ಅವಧಿಯ ತುರ್ತು ರಜೆ ಮಂಜೂರು ಮಾಡಿತು.
Classroom (for representation only)
Classroom (for representation only)
Published on

ತನ್ನ ಮಗ ಪಿಯು ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸಹಾಯವಾಗುವಂತೆ ಮಲಪ್ಪುರಂನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಕೇರಳ ಹೈಕೋರ್ಟ್‌ ಒಂದು ವಾರ ತುರ್ತು ರಜೆ ನೀಡಿದೆ [ಶಫೀನಾ ಪಿಎಚ್‌ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅಪರಾಧಿಗಳು ಸಾಮಾನ್ಯವಾಗಿ ನಾಗರಿಕರಿಗೆ ಲಭ್ಯ ಇರುವ ಕೆಲ ಹಕ್ಕುಗಳನ್ನು ಕಳೆದುಕೊಳ್ಳುತ್ತಾರಾದರೂ ಪೋಷಕರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವ ಹಕ್ಕು ಅವರಿಗೆ ಇರುತ್ತದೆ ಎಂದು ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್ ಅಭಿಪ್ರಾಯಪಟ್ಟರು.

Also Read
ಮತಾಂತರದ ನಂತರ ಶಾಲಾ ದಾಖಲೆಗಳಲ್ಲಿ ಅದನ್ನು ಸೇರ್ಪಡಿಸುವ ಹಕ್ಕು ಮತಾಂತರಗೊಂಡ ವ್ಯಕ್ತಿಗಿದೆ: ಕೇರಳ ಹೈಕೋರ್ಟ್‌

ತಂದೆಯಾಗಿ ತನ್ನ ಮಗುವಿಗೆ ಉತ್ತಮ ಶಿಕ್ಷಣ ಕೊಡಿಸುವ ಹಕ್ಕು ಅಪರಾಧಿಯ ಮೂಲಭೂತ ಹಕ್ಕುಗಳಲ್ಲಿ ಸೇರಿದೆ. ಮಗುವಿನ ಉನ್ನತ ಶಿಕ್ಷಣ ಯಾನದಲ್ಲಿ ತಂದೆಯ ಉಪಸ್ಥಿತಿ ಭಾವನಾತ್ಮಕ ಬೆಂಬಲ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ. ಅಪರಾಧಿ ಜೈಲಿನಲ್ಲಿದ್ದಾಗ, ಆತ ತನ್ನ ಕೆಲವು ಹಕ್ಕುಗಳನ್ನು ಕಳೆದುಕೊಳ್ಳುತ್ತಾನೆ ಎಂಬುದು ನಿಜ. ಆದರೆ, ಅಪರಾಧಿಯ ಮಗು ಯಶಸ್ವಿ ಶೈಕ್ಷಣಿಕ ವರ್ಷಕ್ಕಾಗಿ ಕೆಲವು ದಿನಗಳವರೆಗೆ ತನ್ನ ತಂದೆಯ ಉಪಸ್ಥಿತಿಯನ್ನು ಪಡೆಯಬೇಕು" ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಯ ಪತ್ನಿ ತುರ್ತು ಪೆರೋಲ್ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ತನ್ನ ಮಗ ಉತ್ತಮ ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೇರ್ಗಡೆಯಾಗಿದ್ದು ತನ್ನ ಮಗ ಪಿಯು ಕೋರ್ಸ್‌ಗೆ ಪ್ರವೇಶ ಪಡೆಯಲು ಜೀವಾವಧಿ ಶಿಕ್ಷೆಗೆ ಒಳಗಾದ ತಂದೆಯ ನೆರವು ಅಗತ್ಯವಿದೆ ಎಂದು ಆಕೆ ಕೋರಿದ್ದರು. ಆದರೆ ಈ ಮನವಿಯನ್ನು ಜೈಲು ಅಧಿಕಾರಿಗಳು ನಿರಾಕರಿಸಿದ್ದರಿಂದ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Also Read
ಬಿಲ್ಡರ್‌ಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಮನೆ ಖರೀದಿದಾರರಿಗೆ ಇದೆ: ಸುಪ್ರೀಂ ಕೋರ್ಟ್

ಮಗನ ವಿದ್ಯಾರ್ಹತೆ ಮತ್ತು ರಜೆ ಕೋರಿರುವ ಉದ್ದೇಶ ಗಮನಿಸಿದ ನ್ಯಾಯಾಲಯ ಪ್ರತಿಭಾವಂತ ವಿದ್ಯಾರ್ಥಿಯ ಪ್ರವೇಶ ಪ್ರಕ್ರಿಯೆಗೆ ತನ್ನ ತಂದೆಯ ಬೆಂಬಲ ಬೇಕೆಂದಾಗ ಅದನ್ನು ನಿರ್ಲಕ್ಷಿಸಲಾಗದು ಎಂದಿದೆ.

“ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ಜಾಣ ಮಗ ತನ್ನ ತಂದೆಯೊಂದಿಗೆ ಕೆಲ ದಿನಗಳನ್ನು ಕಳೆಯಲಿ. ಆತ ತನ್ನ ಹೆತ್ತವರ ಮುಖದಲ್ಲಿ ನಗೆಯೊಂದಿಗೆ ಆಶೀರ್ವಾದ ಪಡೆದು ಆತ ಪಿಯು ತರಗತಿಗೆ ಹೋಗಲಿ. ಸರ್ವಶಕ್ತ ಭಗವಂತ ಆ ಮಗನಿಗೆ ಉಜ್ವಲ ಭವಿಷ್ಯ ಹರಸಲಿ” ಎಂದು ನ್ಯಾಯಾಲಯ ಹೇಳಿದೆ.

[ತೀರ್ಪಿನ ಪ್ರತಿ]

Attachment
PDF
Shafeena_PH_v__State_of_Kerala___Ors_
Preview
Kannada Bar & Bench
kannada.barandbench.com