
ಬಿಲ್ಡರ್‌ಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಮನೆ ಖರೀದಿದಾರರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ಮುಂಬೈನಲ್ಲಿ ಫ್ಲಾಟ್ ಖರೀದಿದಾರರ ವಿರುದ್ಧ ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮಾನನಷ್ಟ ಮೊಕದ್ದಮೆಯಲ್ಲಿ ಸಮನ್ಸ್ ಜಾರಿ ಮಾಡಿದ್ದನ್ನು ಫ್ಲಾಟ್ ಮಾಲೀಕರು ಪ್ರಶ್ನಿಸಿದ್ದರು.
"ಗ್ರಾಹಕರಾಗಿ ಮನೆಮಾಲೀಕರು ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಹೊಂದಿದ್ದಾರೆ. ಅದು ಗ್ರಾಹಕರ ಹಕ್ಕಾಗಿದ್ದು ಬಿಲ್ಡರ್‌ಗಳು ವಾಣಿಜ್ಯ ಭಾಷಣಕ್ಕೆ ಮುಕ್ತ ಹಕ್ಕನ್ನು ಹೊಂದಿದ್ದಾರೆ " ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯಲ್ಲಿ, ಮಾನನಷ್ಟ ಅಪರಾಧಕ್ಕೆ ವಿನಾಯಿತಿಗಳನ್ನು ನೀಡಲಾಗಿದೆಯೇ ಎಂದು ಹೈಕೋರ್ಟ್ ಪರಿಶೀಲಿಸಬಹುದು ಎಂದು ಕೂಡ ನ್ಯಾಯಾಲಯ ಹೇಳಿದೆ.
"ನಮ್ಮ ನ್ಯಾಯಾಲಯದ ತೀರ್ಪಿನ ನಂತರ, ಸಿಆರ್‌ಪಿಸಿ ಸೆಕ್ಷನ್ 482 ಹಂತದಲ್ಲಿಯೂ ಸಹ ಸೆಕ್ಷನ್ 499ಕ್ಕೆಗೆ ಯಾವುದೇ ವಿನಾಯಿತಿ ಅನ್ವಯವಾಗುತ್ತದೆಯೇ ಎಂದು ಈ ನ್ಯಾಯಾಲಯ ಪರಿಶೀಲಿಸಬಹುದು ಎಂದು ನಾವು ಹೇಳಿದ್ದೇವೆ " ಎಂದು ನ್ಯಾಯಾಧೀಶರು ಹೇಳಿದರು.
ಸುರ್ತಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕೆಲವು ಮನೆ ಖರೀದಿದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿತ್ತು. ಆರೋಪಿಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸಾರ್ವಜನಿಕರಿಗೆ ಗೋಚರಿಸುವಷ್ಟು ದೊಡ್ಡದಾಗಿ ಬ್ಯಾನರ್‌ಗಳು/ಫಲಕಗಳನ್ನು ನಿರ್ಮಿಸಿದ್ದಾರೆ, ಇದರಲ್ಲಿ ಬಿಲ್ಡರ್ ವಿರುದ್ಧ ಸುಳ್ಳು, ಕ್ಷುಲ್ಲಕ ಮತ್ತು ಮಾನನಷ್ಟಕರ ಹೇಳಿಕೆಗಳಿವೆ ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2016ರಲ್ಲಿ ನೀಡಿದ್ದ ತೀರ್ಪನ್ನು ಸೆಷನ್ಸ್ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದವು. ಹೀಗಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ವಾದ ಆಲಿಸಿದ ಸುಪ್ರೀಂ ಕೋರ್ಟ್ ಸಂತ್ರಸ್ತ ಫ್ಲಾಟ್ ಖರೀದಿದಾರರು ಹಾಕಿರುವ ಬ್ಯಾನರ್‌ಗಳಲ್ಲಿ ಅಸಭ್ಯ ಭಾಷೆ ಬಳಸಲಾಗಿಲ್ಲ. ಅಲ್ಲದೆ ಪ್ರತಿಭಟನೆ ಕೂಡ ಶಾಂತಿಯುತವಾಗಿ ನಡೆದಿದೆ. ಹೀಗಾಗಿ ಲಕ್ಷ್ಮಣ ರೇಖೆ ಉಲ್ಲಂಘನೆಯಾಗಿಲ್ಲ. ಪ್ರತಿಭಟನಾಕಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ನಡೆಸುವುದು ವಿಚಾರಣೆಯ ದುರುಪಯೋಗವಾಗುತ್ತದೆ. ಬಿಲ್ಡರ್‌ಗೆ ವಾಣಿಜ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವಂತೆ ಶಾಂತಿಯುತವಾಗಿ ಪ್ರತಿಭಟಿಸುವುದು ಗ್ರಾಹಕರ ಹಕ್ಕಾಗಿದೆ. ಹೀಗಾಗಿ, ಮನೆಮಾಲೀಕರ ವಿರುದ್ಧದ ದೂರನ್ನು ರದ್ದುಗೊಳಿಸಲಾಗಿದೆ " ಎಂದು ಅದು ಆದೇಶಿಸಿದೆ.