ಷೇರು ಬೆಲೆ ಅಕ್ರಮವಾಗಿ ಹೆಚ್ಚಿಸಿದ ಟೆಲಿಗ್ರಾಮ್ ಗುಂಪಿನ ಮೇಲೆ ಸೆಬಿ ಚಾಟಿ: ಕೃತ್ಯ ಎಸಗಿದ್ದು ಹೇಗೆ ಗೊತ್ತೆ?

₹ 2.8 ಕೋಟಿ ಸಂಚಿತ ಲಾಭ ಗಳಿಸಿದ್ದಾರೆಂದು ತಿಳಿದುಬಂದಿರುವ ಟೆಲಿಗ್ರಾಮ್ ಗುಂಪನ್ನು ನಿರ್ವಹಿಸುತ್ತಿದ್ದ ಆರು ವ್ಯಕ್ತಿಗಳು ಮುಂದಿನ ಆದೇಶದವರೆಗೆ ಷೇರು ವ್ಯವಹಾರ ಮಾಡುವುದನ್ನು ಸೆಬಿ ನಿರ್ಬಂಧಿಸಿದೆ.
SEBI

SEBI

ಷೇರು ಬೆಲೆ ಅಕ್ರಮವಾಗಿ ಹೆಚ್ಚಿಸಿ ಆ ಮೂಲಕ ಲಾಭ ಮಾಡಿಕೊಂಡ ಟೆಲಿಗ್ರಾಮ್, ವಾಟ್ಸಾಪ್ ಗುಂಪುಗಳ ನಿರ್ವಾಹಕರುಗಳ ವಿರುದ್ಧ ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ (ಸೆಬಿ) ಕಠಿಣ ಕ್ರಮಕ್ಕೆ ಮುಂದಾಗಿದೆ.

ತಾಂತ್ರಿಕ ಆವಿಷ್ಕಾರದ ಮೂಲಕ ಅಪರಾಧಿಗಳು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಅಪಾಯ ಒಡ್ಡುವಾಗ ಹೂಡಿಕೆದಾರರ ಹಿತಕಾಯುವ ಜವಾಬ್ದಾರಿ ಹೊತ್ತಿರುವ ತಾನು ಮೂಕ ಪ್ರೇಕ್ಷಕನಾಗಿ ಕೂರಲು ಸಾಧ್ಯವಿಲ್ಲ. ಅಂತಹ ಅಪರಾಧ ಎಸಗುವವರನ್ನು ಷೇರು ಮಾರುಕಟ್ಟೆಯ ಅಂಗಳದಿಂದ ಹೊರಗಿಡಬೇಕಾಗುತ್ತದೆ ಎಂದು ಅದು ಎಚ್ಚರಿಸಿದೆ.

ಆ ಮೂಲಕ ₹ 2.8 ಕೋಟಿ ಸಂಚಿತ ಲಾಭ ಗಳಿಸಿದ್ದಾರೆಂದು ಕಂಡುಬಂದಿರುವ ಟೆಲಿಗ್ರಾಮ್ ಗುಂಪನ್ನು ನಿರ್ವಹಿಸುತ್ತಿದ್ದ ಆರು ವ್ಯಕ್ತಿಗಳು ಮುಂದಿನ ಆದೇಶದವರೆಗೆ ಷೇರು ವ್ಯವಹಾರ ಮಾಡುವುದನ್ನು ಸೆಬಿ ನಿರ್ಬಂಧಿಸಿದೆ.

ಜುಲೈ ಮತ್ತು ಅಕ್ಟೋಬರ್‌ 2021ರಲ್ಲಿ ಸ್ವೀಕರಿಸಿದ ಎರಡು ದೂರುಗಳ ಮೂಲಕ ಸೆಬಿಗೆ ಈ ಅಕ್ರಮದ ಮಾಹಿತಿ ದೊರೆತಿತ್ತು. ಅಕ್ರಮ ಲಾಭಗಳಿಸುವ ಉದ್ದೇಶದಿಂದ ಷೇರು ಬೆಲೆ ಮೇಲೆ ಪ್ರಭಾವ ಬೀರಲು ಸೆಬಿಯಲ್ಲಿ ನೋಂದಣಿ ಮಾಡಿಕೊಳ್ಳದ ಕೆಲವರು ದಲ್ಲಾಳಿಗಳಾಗಿ ಕಾರ್ಯ ನಿರ್ವಹಿಸಲು ಟೆಲಿಗ್ರಾಮ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ಆ ದೂರುಗಳಲ್ಲಿ ಆರೋಪಿಸಲಾಗಿತ್ತು. ದೂರು ಆಧರಿಸಿ ಸೆಬಿ ಜನವರಿ 1, 2021 ಮತ್ತು ನವೆಂಬರ್ 12, 2021ರ ನಡುವಿನ ಅವಧಿಗೆ ತನಿಖೆ ನಡೆಸಿತ್ತು.

Also Read
ಸ್ವಾಧೀನ ನಿಯಮ ಉಲ್ಲಂಘನೆ: ಅಂಬಾನಿ ಕುಟುಂಬಸ್ಥರಿಗೆ ರೂ 25 ಕೋಟಿ ದಂಡ ವಿಧಿಸಿದ ಸೆಬಿ

ಟೆಲಿಗ್ರಾಂ ಗುಂಪು ಹೇಗೆ ಕಾರ್ಯ ನಿರ್ವಹಿಸುತ್ತಿತ್ತು?

ದೂರು ಆಧರಿಸಿ, ಡಿಸೆಂಬರ್ 14, 2021ಕ್ಕೆ 51,980 ಸದಸ್ಯರಿದ್ದ ಬುಲ್‌ ರನ್‌ 2017/ ಬುಲ್‌ ರನ್‌ ಇನ್ವೆಸ್ಟ್‌ಮೆಂಟ್‌ ಎಜುಕೇಷನಲ್‌ ಚಾನೆಲ್‌ ಮೇಲೆ ಸೆಬಿ ಕಣ್ಣಿಟ್ಟಿತು. 40 ವರ್ಷಗಳಷ್ಟು ಸಂಚಿತ ಅನುಭವ ಹೊಂದಿರುವ; ಸೆಬಿಯಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿರುವ ಸಂಶೋಧನಾ ವಿಶ್ಲೇಷಕರ ತಂಡ ಟೆಲಿಗ್ರಾಂ ಗುಂಪನ್ನು ನಡೆಸುತ್ತಿದೆ ಎಂದು ಬಿಂಬಿಸಿಕೊಳ್ಳಲಾಗಿತ್ತು.

ನಗದು ಮತ್ತು ವ್ಯುತ್ಪನ್ನ (ಡಿರೈವೆಟಿವ್) ಎರಡೂ ವಿಭಾಗಗಳಲ್ಲಿ ವಹಿವಾಟು ನಡೆಸಲು ಗುಂಪಿನ ಸದಸ್ಯರಿಗೆ ಶಿಫಾರಸು ಮಾಡುತ್ತಿದ್ದ ಅವರು ನಗದು ವಿಭಾಗಕ್ಕೆ ಸಂಬಂಧಿಸಿದಂತೆ ಕಡಿಮೆ ಬಂಡವಾಳದ ಷೇರುಗಳನ್ನು ಕೇಂದ್ರೀಕರಿಸಿ ಸಲಹೆ ನೀಡುತ್ತಿದ್ದರು.

ಉದಾಹರಣೆಗೆ ಹೇಳುವುದಾದರೆ ಕಂಪೆನಿಯೊಂದನ್ನು ಹೆಸರಿಸಿ ಅದರಲ್ಲಿ ಬಂಡವಳ ಹೂಡಿದರೆ ಲಾಭ ಮಾಡಬಹುದು ಎಂದು ಸಲಹೆ ನೀಡಲಾಗುತ್ತಿತ್ತು. ಹಾಗೆ ಆ ಕಂಪೆನಿಯ ಷೇರುಗಳ ಮೇಲೆ ಹೂಡಿಕೆ ನಡೆದಾಗ ಅದರಲ್ಲಿ ಇದಾಗಲೇ ಷೇರುಗಳನ್ನು ಹೊಂದಿದ್ದ ನಿರ್ವಾಹಕರು ಲಾಭ ಮಾಡಿಕೊಳ್ಳುತ್ತಿದ್ದರು. ಟೋಟಲ್‌ ಟ್ರಾನ್ಸ್‌ಪೋರ್ಟ್‌ ಎನ್ನುವ ಸಂಸ್ಥೆಯೊಂದರ ಷೇರುಗಳ ಕುರಿತು ಹೀಗೆ ಸಲಹೆ ನೀಡುವ ಮೂಲಕ ರೂ 9 ಲಕ್ಷ ಲಾಭವನ್ನು ನೋಟೀಸುದಾರರು (ನಿರ್ವಾಹಕರು) ಮಾಡಿಕೊಂಡಿದ್ದರು. ಈ ಸಂಸ್ಥೆಯ ಷೇರುಗಳ ವಹಿವಾಟನ್ನು ಏಪ್ರಿಲ್ ಮತ್ತು ಜುಲೈ 2021ರ ನಡುವೆ ಬೇರೆ ಬೇರೆ ದಿನಗಳಲ್ಲಿ ಮಾಡಲು ಷೇರು ಹೂಡಿಕೆದಾರರನ್ನು ಈ ನಿರ್ವಾಹಕರು ಉತ್ತೇಜಿಸಿದ್ದರು.

ಸೆಬಿ ನಡೆಸಿದ ತನಿಖೆ ಪ್ರಕಾರ ನಿರ್ವಾಹಕರು ಗಳಿಸಿದ ಲಾಭ ಮೇಲ್ನೋಟಕ್ಕೆ ಅಕ್ರಮ ಅಥವಾ ತಪ್ಪಾದ ಲಾಭವಾಗಿದ್ದು ಮೇಲೆ ಹೇಳಿದ ಅಕ್ರಮ ರೀತಿಯಲ್ಲಿ ನಿರ್ವಾಹಕರು ವಹಿವಾಟು ನಡೆಸದೇ ಇದ್ದರೆ ಅದು ಅವರಿಗೆ ಸೇರುತ್ತಿರಲಿಲ್ಲ. ಹೀಗಾಗಿ ನಿರ್ವಾಹಕರ ಕ್ರಮಗಳು ಸೆಬಿ ನಿಯಮಾವಳಿ 2003ರ ಉಲ್ಲಂಘನೆ ಎಂದು ಸೆಬಿ ಪತ್ತೆ ಮಾಡಿದೆ.

ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ಈ ಸಾಮಾಜಿಕ ಮಾಧ್ಯಮಗಳ ಆರು ನಿರ್ವಾಹಕರಿಗೆ ನಿರ್ಬಂಧಿಸಿರುವುದಲ್ಲದೆ ಸೆಬಿ ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟಗೋಲು ಹಾಕಿಕೊಂಡಿದ್ದು 2,84,29,948 ರೂಪಾಯಿಗಳಷ್ಟು ಅಕ್ರಮ ಲಾಭ ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿದೆ. ಅಲ್ಲದೆ, ಯಾಕೆ ಈ ಹಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಾರದು ಮತ್ತು ನಿರ್ದಿಷ್ಟ ಅವಧಿಗೆ ಷೇರು ಮಾರುಕಟ್ಟೆಯಿಂದ ಈ ನಿರ್ವಾಹಕರಿಗೆ ಯಾಕೆ ನಿರ್ಬಂಧ ವಿಧಿಸಬಾರದು ಎಂಬ ಬಗ್ಗೆ ಕಾರಣ ನೀಡಿ (ಶೋ ಕಾಸ್‌) ಎಂದು ಕೂಡ ಅದು ಆರು ನಿರ್ವಾಹಕರನ್ನು ಕೇಳಿದೆ.

ಆದೇಶವನ್ನು ಇಲ್ಲಿ ಓದಿ:

Attachment
PDF
In_the_matter_of_Stock_Recommendations_using_Social_Media_Channel__Telegram_.pdf
Preview

Related Stories

No stories found.
Kannada Bar & Bench
kannada.barandbench.com