ಮುಖ್ಯಮಂತ್ರಿಯಾಗಿದ್ದ ವೇಳೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್ ಕಂಪೆನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ. ಹೀಗಾಗಿ, ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಕ್ರಿಮಿನಲ್ ಮನವಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ಭಾಗಶಃ ಎತ್ತಿ ಹಿಡಿದಿದೆ.
ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದ ವಿಚಾರಣೆ ನಡೆಸಿ ಜೂನ್ 21ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕಟಿಸಿತು.
ರಾಜ್ಯಪಾಲರಿಂದ ಅಗತ್ಯ ಪೂರ್ವನುಮತಿ ಪಡೆದಿಲ್ಲ ಎಂದು ಯಡಿಯೂರಪ್ಪ ಮತ್ತು ಇತರರ ವಿರುದ್ದದ ಖಾಸಗಿ ದೂರನ್ನು ವಿಶೇಷ ನ್ಯಾಯಾಲಯ ವಜಾ ಮಾಡಿತ್ತು. ಈ ಆದೇಶವನ್ನು ಹೈಕೋರ್ಟ್ ಬದಿಗೆ ಸರಿಸಿದೆ. ಅಲ್ಲದೇ, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರನ್ನು ಮರುಪರಿಗಣಿಸಲು ನ್ಯಾಯಾಲಯವು ಆದೇಶಿಸಿದೆ.
ಬಿ ಎಸ್ ಯಡಿಯೂರಪ್ಪ, ಪುತ್ರ ಬಿ ವೈ ವಿಜಯೇಂದ್ರ, ಶಶಿಧರ ಮರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಅಳಿಯ ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ, ಅಂದಿನ ಬಿಡಿಎ ಅಧ್ಯಕ್ಷ ಹಾಗೂ ಹಾಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಐಎಎಸ್ ಅಧಿಕಾರಿ ಡಾ. ಜಿ ಸಿ ಪ್ರಕಾಶ್, ಕೆ ರವಿ, ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ ಅವರು ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದಾರೆ.
ರಾಜ್ಯಪಾಲರಿಂದ ಅಗತ್ಯ ಪೂರ್ವನುಮತಿ ಪಡೆದಿಲ್ಲ ಎಂದು ಯಡಿಯೂರಪ್ಪ ಮತ್ತು ಇತರರ ವಿರುದ್ದದ ಖಾಸಗಿ ದೂರನ್ನು ವಿಶೇಷ ನ್ಯಾಯಾಲಯ ವಜಾ ಮಾಡಿತ್ತು. ಈ ಆದೇಶವನ್ನು ಹೈಕೋರ್ಟ್ ಬದಿಗೆ ಸರಿಸಿದೆ. ಅಲ್ಲದೇ, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಅಥವಾ ತನಿಖೆಯ ವಿಚಾರವನ್ನು ವಿಶೇಷ ನ್ಯಾಯಾಲಯ ನಿರ್ಧರಿಸಲಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 7, 8, 9, 10 ಮತ್ತು 13, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 383, 384, 415, 418, 420, 34 ಮತ್ತು 120ಬಿ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್ 3 ಮತ್ತು 4ರ ಅಡಿ ಅಪರಾಧಗಳನ್ನು ಉಲ್ಲೇಖಿಸಿ ಅರ್ಜಿದಾರರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ 2020ರ ನವೆಂಬರ್ 11ರಂದು ದೂರು ಸಲ್ಲಿಸಿದ್ದರು. ಎಫ್‌ಐಆರ್ ದಾಖಲಿಸುವ ಬದಲಿಗೆ ನವೆಂಬರ್ 21ರಂದು ಎಸಿಬಿ ಅಧಿಕಾರಿಗಳು ದೂರಿನಲ್ಲಿನ ವಿಚಾರಗಳಿಗೆ ಸ್ಪಷ್ಟನೆ ಕೇಳಿ ದೂರುದಾರರಿಗೆ ನೋಟಿಸ್ ಜಾರಿ ಮಾಡಿದ್ದರು.
ಈ ಮಧ್ಯೆ, ಯಡಿಯೂರಪ್ಪ ಮತ್ತು ಸೋಮಶೇಖರ್ ವಿರುದ್ಧದ ತನಿಖೆಗೆ ಅನುಮತಿ ಕೋರಿ ಅಬ್ರಹಾಂ ಅವರು ರಾಜ್ಯಪಾಲರು ಮತ್ತು ವಿಧಾನಸಭೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದರು. 2021ರ ಜೂನ್ 24ರಂದು ರಾಜ್ಯಪಾಲರು ಅನುಮತಿ ನಿರಾಕರಿಸಿದ್ದರು. ಇದನ್ನು ಆಧರಿಸಿ, 2021ರ ಜುಲೈ 8ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರನ್ನು ವಜಾ ಮಾಡಿತ್ತು. ಹೀಗಾಗಿ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.