ಭ್ರಷ್ಟಾಚಾರ ಪ್ರಕರಣ: ಸಚಿವ ಸೋಮಶೇಖರ್‌, ಐಎಎಸ್‌ ಅಧಿಕಾರಿ ಪ್ರಕಾಶ್‌, ಉದ್ಯಮಿ ರವಿ ಅರ್ಜಿ ವಜಾ ಮಾಡಿದ ಸುಪ್ರೀಂ

ಸಿಆರ್‌ಪಿಸಿ ಸೆಕ್ಷನ್‌ 156(3) ಅಡಿ ತನಿಖೆಗೆ ಆದೇಶಿಸಲು ನಿರ್ಧರಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಸೆ.7ರಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
Minister S T Somashekhar and Supreme Court
Minister S T Somashekhar and Supreme CourtFacebook

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌, ಐಎಎಸ್‌ ಅಧಿಕಾರಿ ಜಿ ಸಿ ಪ್ರಕಾಶ್‌ ಮತ್ತು ಕ್ರೆಸೆಂಟ್‌ ಹೋಟೆಲ್‌ ಮಾಲೀಕ ಕೆ ರವಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ.

ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ವಿಶೇಷ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿ ವಿಚಾರಣೆ ನಡೆಸಲು ಪೀಠ ನಿರಾಕರಿಸಿತು. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರ ಕೋರಿಕೆಯಂತೆ ಮನವಿ ಹಿಂಪಡೆಯಲು ನ್ಯಾಯಾಲಯವು ಅನುಮತಿಸಿತು.

ಸಿಆರ್‌ಪಿಸಿ ಸೆಕ್ಷನ್‌ 156(3) ಅಡಿ ತನಿಖೆಗೆ ಆದೇಶಿಸಲು ನಿರ್ಧರಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಸೆಪ್ಟೆಂಬರ್‌ 7ರಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್‌ ಕಂಪೆನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್‌ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಬಿ ಎಸ್‌ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸೇರಿದಂತೆ ಒಟ್ಟು ಒಂಬತ್ತು ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅಂದಿನ ಬಿಡಿಎ ಅಧ್ಯಕ್ಷ ಹಾಗೂ ಹಾಲಿ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಆರನೇ ಆರೋಪಿಯಾಗಿದ್ದು, ಐಎಎಸ್‌ ಅಧಿಕಾರಿ ಡಾ. ಜಿ ಸಿ ಪ್ರಕಾಶ್‌ ಅವರು ಏಳನೇ ಮತ್ತು ಕೆ ರವಿ ಅವರು ಎಂಟನೇ ಆರೋಪಿಯಾಗಿದ್ದಾರೆ.

Also Read
ಭ್ರಷ್ಟಾಚಾರ ಪ್ರಕರಣ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್‌

ಎಲ್ಲಾ ಆರೋಪಿಗಳ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 7, 8, 9, 10 ಮತ್ತು 13, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 383, 384, 415, 418, 420, 34 ಮತ್ತು 120ಬಿ ಅಡಿಯ ಅಪರಾಧಗಳಿಗೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ತನಿಖೆ ನಡೆಸಲು ಬೆಂಗಳೂರಿನ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ವಿಚಾರಣಾಧೀನ ನ್ಯಾಯಾಲಯವು ಆದೇಶಿಸಿತ್ತು. ಇದರ ಅನ್ವಯ ಆರೋಪಿಗಳ ವಿರುದ್ಧ ತನಿಖೆ ಆರಂಭವಾಗಿದೆ.

ಈಚೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. ಪ್ರತಿವಾದಿಯಾದ ಟಿ ಜೆ ಅಬ್ರಹಾಂ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.

Related Stories

No stories found.
Kannada Bar & Bench
kannada.barandbench.com