ಸಿವಿಲ್‌ ಪ್ರಕ್ರಿಯಾ ಸಂಹಿತೆ, ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕ ಸೇರಿ ಐದು ಮಸೂದೆಗಳಿಗೆ ಪರಿಷತ್‌ನಲ್ಲಿ ಅನುಮೋದನೆ

ಈ ಮಸೂದೆಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿತ್ತು. ಎರಡೂ ಸದನಗಳಲ್ಲಿ ಒಪ್ಪಿಗೆಯಾಗಿರುವುದರಿಂದ ರಾಜ್ಯಪಾಲರು ಅಂಕಿತ ಹಾಕಿ, ರಾಜ್ಯ ಪತ್ರದಲ್ಲಿ ಪ್ರಕಟಣೆಯಾದಂದಿನಿಂದ ಇವುಗಳು ಜಾರಿಗೆ ಬರಲಿವೆ.
Vidhana Soudha
Vidhana Soudha
Published on

ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಆರ್ಥಿಕ ದುರ್ಬಲವಾದ ವರ್ಗದವರಿಗೆ ನೆರವಾಗುವ ನಿಟ್ಟಿನಲ್ಲಿ ತರಲಾಗಿರುವ ಸಿವಿಲ್‌ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) ವಿಧೇಯಕ ಮತ್ತು ರಾಜ್ಯದಲ್ಲಿನ ನ್ಯಾಯಾಲಯಗಳು ಮತ್ತು ಶಾಸನಬದ್ಧ ನ್ಯಾಯ ಮಂಡಳಿಯ ಮುಂದೆ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಷಯದಲ್ಲಿ ದಕ್ಷತೆ ಮತ್ತು ಜವಾಬ್ದಾರಿಯುತ ನಿರ್ವಹಣೆಯನ್ನು ಖಚಿತಪಡಿಸುವ ಉದ್ದೇಶದಿಂದ ತರಲಾಗಿರುವ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕ 2023, ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ವಿಧೇಯಕ, ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಸಹಕಾರ ಸಂಘಗಳ ವಿಧೇಯಕಗಳಿಗೆ ವಿಧಾನ ಪರಿಷತ್‌ನಲ್ಲಿ ಗುರುವಾರ ಅನುಮೋದನೆ ದೊರೆತಿದೆ.

ವಿಧಾನಸಭೆಯಿಂದ ಹತ್ತು ಬಿಜೆಪಿ ಶಾಸಕರನ್ನು ಈ ಸದನದ ಅವಧಿಗೆ ಉಚ್ಚಾಟನೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನಾ ನಿರತರಾಗಿದ್ದ ವಿಪಕ್ಷಗಳ ಸದಸ್ಯರ ಗೈರು ಹಾಜರಿಯ ನಡುವೆಯೇ ವಿಧಾನಪರಿಷತ್‌ನಲ್ಲಿ ಗುರುವಾರ ಈ ವಿಧೇಯಕಗಳಿಗೆ ಅನುಮೋದನೆ ದೊರೆಯಿತು. ಇದಾಗಲೇ ಈ ವಿಧೇಯಕಗಳು ಕೆಳಮನೆಯಲ್ಲಿ ಅಂಗೀಕೃತಗೊಂಡಿವೆ.

ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆಗಳನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುವುದು. ಒಮ್ಮೆ ರಾಜ್ಯಪಾಲರ ಅಂಕಿತವಾಗಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ಬಳಿಕ ಇವುಗಳು ಕಾನೂನಾಗಿ ಜಾರಿಗೆ ಬರಲಿವೆ.

ಇಂದು ವಿಧಾನಪರಿಷತ್‌ನಲ್ಲಿ ಅನುಮೋದನೆಗೊಂಡ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕ, ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ವಿಧೇಯಕ, ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಸಹಕಾರ ಸಂಘಗಳ ವಿಧೇಯಕಗಳ ಹಿಂದಿನ ಉದ್ದೇಶದ ಕುರಿತಾದ ಮಾಹಿತಿ ಇಲ್ಲಿದೆ:

ಸಿವಿಲ್‌ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) ವಿಧೇಯಕ

ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿ ಇರುವಂತಹ ಪ್ರಕರಣಗಳು ಹಾಗೂ ಮೊಕದ್ದಮೆಗಳನ್ನು ಮುನ್ನಡೆಸಲು ಸಾಮರ್ಥ್ಯವಿಲ್ಲದ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಉಪಬಂಧ ಕಲ್ಪಿಸುವುದು ಈ ವಿಧೇಯಕದ ಉದ್ದೇಶ. ಇದರೊಟ್ಟಿಗೆ, ಸಣ್ಣ ಮತ್ತು ದುರ್ಬಲ ರೈತರಾಗಿರುವ ಕಾರಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿರುವ ವ್ಯಕ್ತಿಗಳು (ವಾರ್ಷಿಕ ಆದಾಯ 50 ಸಾವಿರ ರೂಪಾಯಿ ಮೀರದವರು) ಇಂತಹ ವ್ಯಾಜ್ಯಗಳನ್ನು ನಡೆಸಲು ಸಮರ್ಥರಾಗಿರುವುದಿಲ್ಲ. ಅಂಥವರಿಗೆ ಭದ್ರತೆ ಒದಗಿಸಲು ಸಿವಿಲ್‌ ಪ್ರಕ್ರಿಯಾ ಸಂಹಿತೆ 1908 (1908ರ ಕೇಂದ್ರದ ಅಧಿನಿಯಮ 5) ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅಗತ್ಯವಾಗಿದೆ. ಇಂಥ ಪ್ರಕರಣಗಳನ್ನು ಆರು ತಿಂಗಳ ಒಳಗೆ ಸಾಧ್ಯವಾದಷ್ಟು ಬೇಗನೆ ವಿಲೇವಾರಿ ಮಾಡಲು ಉದ್ದೇಶಿಸಿ, ಈ ವಿಧೇಯಕ ತರಲಾಗಿದೆ.

ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕದ ಉದ್ದೇಶ

ರಾಜ್ಯದ ನ್ಯಾಯಾಲಯಗಳು ಮತ್ತು ನ್ಯಾಯ ಮಂಡಳಿಗಳ ಮುಂದೆ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಷಯದಲ್ಲಿ ದಕ್ಷತೆ ಮತ್ತು ಜವಾಬ್ದಾರಿಯುತ ನಿರ್ವಹಣೆ ಖಚಿತಪಡಿಸಲು ಈ ವಿಧೇಯಕ ತರಲಾಗಿದೆ.

ರಾಜ್ಯದ ನ್ಯಾಯಾಲಯ ಮತ್ತು ಶಾಸನಬದ್ಧ ನ್ಯಾಯ ಮಂಡಳಿಗಳ ಮುಂದೆ ಸರ್ಕಾರಿ ವ್ಯಾಜ್ಯಗಳ ನಡೆಸುವ ಕುರಿತಂತೆ ನಿಯಮ, ಆದೇಶ, ಅಧಿಸೂಚನೆ, ಸುತ್ತೋಲೆ ಮುಂತಾದವುಗಳು ಇವೆ. ರಾಜ್ಯದಲ್ಲಿ ಪರಿಣಾಮಕಾರಿ ವ್ಯಾಜ್ಯ ನಿರ್ವಹಣಾ ಕಾರ್ಯ ವ್ಯವಸ್ಥೆ ಇಲ್ಲದಿರುವುದರಿಂದಾಗಿ ರಾಜ್ಯವು ಅನೇಕ ಮಹತ್ವದ ದಾವೆಗಳಲ್ಲಿ ವಿಫಲಗೊಂಡಿರುವುದನ್ನು ಗಮನಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ವ್ಯಾಜ್ಯ ನಿರ್ವಹಣೆಯ ವಿಷಯದಲ್ಲಿ ದಕ್ಷತೆ ಮತ್ತು ಜವಾಬ್ದಾರಿಯುತ ನಿರ್ವಹಣೆ ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕಾನೂನನ್ನು ಅಧಿನಿಯಮಿತಗೊಳಿಸುವುದು ಅಗತ್ಯವೆಂದು ಈ ವಿಧೇಯಕ ಜಾರಿಗೊಳಿಸಲಾಗಿದೆ.

Also Read
ವಿಪಕ್ಷಗಳ ವಿರೋಧದ ನಡುವೆ ಎಪಿಎಂಸಿ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ

ರಾಜ್ಯ ಸರ್ಕಾರದ ಮಾಸ್ಟರ್ ಪ್ಲಾನ್ ಅಸ್ತಿತ್ವದಲ್ಲಿರುವ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಭೂ ಬಳಕೆ ಪರಿವರ್ತನೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂಬ ಮಹತ್ವದ ಅಂಶವನ್ನು ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2023 ಹೊಂದಿದೆ.

ಈಗಾಗಲೇ ಹಲವು ಕಡೆ ರಾಜ್ಯ ಸರ್ಕಾರವು ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕೆ ತಂದಿದೆ. ಮಾಸ್ಟರ್ ಪ್ಲಾನ್‌ನಲ್ಲಿ ಯಾವಾವ ಭೂಮಿ ಕೈಗಾರಿಕೆಗೆ, ಶಾಲೆ, ಉದ್ದಿಮೆ, ವಸತಿ ಹೀಗೆ ಯಾವ್ಯಾವ ಬಳಕೆಗೆ ಬಳಸಬೇಕು ಎಂಬುದನ್ನು ವರ್ಗೀಕರಿಸಿದೆ. ಹಳದಿ ವಲಯದಲ್ಲಿ ಬರುವ ಜಾಗದಲ್ಲಿ ಮತ್ತೆ ವಸತಿ ಬಳಕೆಗೆ ಭೂ ಪರಿವರ್ತನೆ ಪಡೆಯುವ ಅಗತ್ಯವಿಲ್ಲ. ಈ ವಿಧೇಯಕದ ನಿಯಮದಿಂದಾಗಿ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಹೇಳಲಾಗಿದೆ.

ಈ ಹಿಂದೆ ಭೂ ಬಳಕೆ ಪರಿವರ್ತನೆಗೆ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಅನುಮತಿ ನೀಡದಿದ್ದರೆ ಡೀಮ್ಡ್ ಅನುಮತಿ ಎಂದು ಪರಿಗಣಿಸಲು ಹಿಂದಿನ ಸರ್ಕಾರ ಆದೇಶಿಸಿತ್ತು. ಆದರೂ ಕೆಲ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅರ್ಜಿಗಳನ್ನು ತಡೆ ಹಿಡಿಯುತ್ತಿದ್ದಾರೆ. ಹೀಗಾಗಿ, ಮಾಸ್ಟರ್ ಪ್ಲಾನ್ ಪ್ರದೇಶದಲ್ಲಿ ಭೂ ಪರಿವರ್ತನೆ ತೆಗೆದುಕೊಳ್ಳಬೇಕು ಎಂಬ ನಿಯಮವನ್ನೇ ತೆಗೆದು ಹಾಕಲಾಗಿದೆ. ತನ್ಮೂಲಕ ಉತ್ತಮ ಆಡಳಿತ ಪರವಾಗಿ ಹೆಜ್ಜೆ ಇಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯಲ್ಲಿ ಮಸೂದೆ ಮಂಡಿಸುವಾಗ ಹೇಳಿದ್ದರು.

ಜಿಲ್ಲಾ ನೋಂದಣಾಧಿಕಾರಿಗೆ ಆಸ್ತಿ ನೋಂದಣಿ ರದ್ದು ಅಧಿಕಾರ!

ಮೋಸದ ನೋಂದಣಿ ಹಾಗೂ ನಿಯಮ ಬಾಹಿರವಾಗಿ ನಡೆದಿರುವ ಆಸ್ತಿಗಳ ನೋಂದಣಿಯನ್ನು ರದ್ದು ಮಾಡುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗಳಿಗೆ ನೀಡುವುದಕ್ಕಾಗಿ ನೋಂದಣಿ ತಿದ್ದುಪಡಿ ವಿಧೇಯಕ ರೂಪಿಸಲಾಗಿದೆ. ರಾಜ್ಯದಲ್ಲಿ ನಕಲಿ ಹಾಗೂ ಮೋಸದ ಆಸ್ತಿ ನೋಂದಣಿ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಭಾವಿಗಳಿಗೂ ಸಹ ನಕಲಿ ದಾಖಲೆ ಸೃಷ್ಟಿ ಮಾಡಿ ಅವರ ಆಸ್ತಿಗಳನ್ನು ಅಕ್ರಮವಾಗಿ ನೋಂದಣಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದನ್ನು ತಿಳಿದು, ತಿಳಿಯದೆ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ. ಈ ರೀತಿ ಬೇರೊಬ್ಬರ ಆಸ್ತಿಯನ್ನು ಅನಧಿಕೃತ ಹೆಸರಿಗೆ ಮೋಸದ ನೋಂದಣಿ ಮಾಡಿದಾಗ ಅದನ್ನು ರದ್ದುಪಡಿಸಲು ನ್ಯಾಯಾಲಯಕ್ಕೆ ಹೋಗಬೇಕು. ಬಡವರು ನ್ಯಾಯಾಲಯಕ್ಕೆ ಹೋಗಿ ತಮ್ಮ ಆಸ್ತಿ ಮರಳಿ ಪಡೆಯಲು 10-20 ವರ್ಷ ಬೇಕಾಗುತ್ತದೆ.  ಇದನ್ನು ತಡೆಯಲು ಜಿಲ್ಲಾ ನೋಂದಣಾಧಿಕಾರಿಗೆ ಅಧಿಕಾರ ನೀಡಲು ನೋಂದಣಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಕೆಳಮನೆಯಲ್ಲಿ ವಿಧೇಯಕ ಮಂಡನೆಯ ವೇಳೆ ವಿವರಣೆ ನೀಡಿದ್ದರು.

ಕರ್ನಾಟಕ ಸಹಕಾರ ಸಂಘಗಳ ವಿಧೇಯಕ

ಸಹಕಾರ ಸಂಘಗಳ ಯಾವುದೇ ವರ್ಗದ ನೌಕರರ ಸಾಮಾನ್ಯ ವೃಂದವನ್ನು ರಚಿಸಲು ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ಕ್ಕೆ ತಿದ್ದುಪಡಿ ಮಾಡುವುದು ಅವಶ್ಯಕ ಎಂದು ವಿಧೇಯಕ ತರಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಹಣ ದುರುಪಯೋಗದ ಪ್ರಕರಣಗಳನ್ನು ಕಡಿಮೆ ಮಾಡಲು ಸಾಮಾನ್ಯ ವೃಂದದ ರಚನೆಯು ಅವಶ್ಯಕವಾಗಿದೆ. ಇದು ಆಡಳಿತ ನಿಕಾಯಗಳಿಂದ ಯಾವುದೇ ಒತ್ತಡವಿಲ್ಲದ ತಾರತಮ್ಯರಹಿತವಾಗಿ ರೈತರು ಮತ್ತು ಹಾಲು ಉತ್ಪಾದಕರಿಗೆ ಉನ್ನತ ಮಟ್ಟದ ಸೇವೆ ಒದಗಿಸಲು ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಕಾರ್ಯದರ್ಶಿಗೆ ಸಹಕಾರಿಯಾಗಲಿದೆ.

Kannada Bar & Bench
kannada.barandbench.com