ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ಕಚೇರಿ ಆಕ್ಷೇಪಣೆ ಪೂರೈಸಲು ವಿಳಂಬ ನೀತಿ ಅನುಸರಿಸಿದ್ದ ಅರ್ಜಿದಾರೊಬ್ಬರಿಗೆ ಕರ್ನಾಟಕ ಹೈಕೋರ್ಟ್, ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರ ‘ವಕೀಲರೊಬ್ಬರ ವಗೈರೆಗಳು‘ ಪುಸ್ತಕವನ್ನು ಕರ್ನಾಟಕ ನ್ಯಾಯಾಂಗ ಅಕಾಡೆಮಿಗೆ ನೀಡುವಂತೆ ಆದೇಶ ಮಾಡಿದೆ.
ತುಮಕೂರಿನ ಭಾಗ್ಯ ನಗರದ ಮಹಾಲಕ್ಷ್ಮಮ್ಮ ಮತ್ತು ಜಿ ಮಂಗಳಾ ಎಂಬುವರು ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರ್ಜಿ ದಾಖಲಿಸಿದ್ದರು. ಅರ್ಜಿಯು ಕಚೇರಿ ಆಕ್ಷೇಪಣೆ ಸರಿಪಡಿಸಲು ವಿಳಂಬವಾದ ಕಾರಣ ಅದು ಮಾನ್ಯತೆ ಕಳೆದುಕೊಂಡಿತ್ತು.
ಅರ್ಜಿಯನ್ನು ಪುನರ್‌ಸ್ಥಾಪಿಸಲು ಕೋರಲಾದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ಪುರಸ್ಕರಿಸಲಾಗುತ್ತಿದೆ. ಆದರೆ, ನಿಮ್ಮ ನಿರ್ಲಕ್ಷ್ಯಕ್ಕೆ ದಂಡ ರೂಪದಲ್ಲಿ, ಕ್ರಿಮಿನಲ್ ವಕೀಲ ಸಿ ಎಚ್ ಹನುಮಂತರಾಯ ಅವರು ರಚಿಸಿರುವ ʼವಕೀಲರೊಬ್ಬರ ವಗೈರೆಗಳುʼ ಪುಸ್ತಕವನ್ನು ಅಕಾಡೆಮಿಗೆ ನೀಡಿ ಮತ್ತು ಒಂದು ವಾರದೊಳಗೆ ಕಚೇರಿ ಆಕ್ಷೇಪಣೆ ಪ್ರಕ್ರಿಯೆಯನ್ನು ಪೂರೈಸಿ ಎಂದು ಆದೇಶಿಸಿದೆ.