
ದೇಶ ವೈದ್ಯರ ತೀವ್ರ ಕೊರತೆ ಎದುರಿಸುತ್ತಿದೆ ಎಂದಿರುವ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪದವಿ ಕೋರ್ಸ್‌ಗಳಿಗೆ ಖಾಲಿ ಇರುವ ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡಲು ವಿಶೇಷ ಸುತ್ತಿನ ಕೌನ್ಸೆಲಿಂಗ್ ನಡೆಸುವಂತೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿಗೆ) ನಿರ್ದೇಶಿಸಿದೆ [ಎರಾ ಲಖನೌ ವೈದ್ಯಕೀಯ ಕಾಲೇಜು ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಐದನೇ ಸುತ್ತಿನ ಕೌನ್ಸೆಲಿಂಗ್ ನಂತರವೂ ಖಾಲಿ ಉಳಿದಿರುವ ಸೀಟುಗಳ ಭರ್ತಿಗಾಗಿ ವಿರಳ ಇಲ್ಲವೇ ವಿಶೇಷ ಕೌನ್ಸೆಲಿಂಗ್ ನಡೆಸಲು ಪ್ರವೇಶ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ವಿಶಿಷ್ಟವಾದ ಸಂದರ್ಭ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ ದೇಶ ವೈದ್ಯರ ತೀವ್ರ ಕೊರತೆ ಎದುರಿಸುತ್ತಿರುವಾಗ ಅಮೂಲ್ಯವಾದ ವೈದ್ಯಕೀಯ ಸೀಟುಗಳು ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಕೊನೆಯ ಅವಕಾಶವಾಗಿ ಅವಧಿ ವಿಸ್ತರಿಸಲು ಒಲವು ತೋರುತ್ತಿದ್ದೇವೆ. ಹೀಗಾಗಿ ಪ್ರವೇಶ ಅಧಿಕಾರಿಗಳು ಐದನೇ ಸುತ್ತಿನ ಕೌನ್ಸೆಲಿಂಗ್ ನಂತರವೂ ಖಾಲಿ ಉಳಿದಿರುವ ಸೀಟುಗಳ ಭರ್ತಿಗಾಗಿ ವಿಶೇಷ ಕೌನ್ಸೆಲಿಂಗ್ ನಡೆಸಿ ಡಿಸೆಂಬರ್ 30, 2024ರ ಮೊದಲು ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
ನೇರವಾಗಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಯಾವುದೇ ಕಾಲೇಜಿಗೆ ಅನುಮತಿ ಇಲ್ಲ ಮತ್ತು ರಾಜ್ಯ ಪ್ರವೇಶಾತಿ ಪ್ರಾಧಿಕಾರಗಳ ಮೂಲಕವೇ ಪ್ರವೇಶಾತಿ ನಡೆಸಬೇಕು ಎಂತಲೂ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ವಿಶೇಷ ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಈಗಾಗಲೇ ಅಂತಿಮಗೊಂಡಿರುವ ಪ್ರವೇಶಾತಿ ಪ್ರಕ್ರಿಯೆಗೆ ತೊಂದರೆಯಾಗಬಾರದು ಮತ್ತು ವೇಟಿಂಗ್ ಲಿಸ್ಟ್‌ನಲ್ಲಿರುವ ಅಭ್ಯರ್ಥಿಗಳಿಗೆ ಮಾತ್ರವೇ ಸೀಟು ಒದಗಿಸಬೇಕು ಎಂದು ಅದು ಸ್ಪಷ್ಟಪಡಿಸಿದೆ.
ಖಾಲಿ ಇರುವ ಎನ್‌ಆರ್‌ಐ ಸೀಟುಗಳನ್ನು ಸಾಮಾನ್ಯ ವರ್ಗದ ಕೋಟಾಕ್ಕೆ ಪರಿವರ್ತಿಸಿ ರಾಜ್ಯ ಪ್ರವೇಶಾತಿ ಪ್ರಾಧಿಕಾರಗಳ ಮೂಲಕ ಭರ್ತಿ ಮಾಡಬೇಕು ಎಂದು ಅದು ಸೂಚಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ದೇವಶಿಶ್ ಭರೂಕ, ಸಿದ್ಧಾರ್ಥ ದವೆ, ಅಭಿಷೇಕ್ ಮನು ಸಿಂಘ್ವಿ, ಗೌರವ್ ಶರ್ಮಾ ಪಿ ವಿಶ್ವನಾಥ ಶೆಟ್ಟಿ ಮತ್ತು ವಕೀಲರಾದ ವೈಭವ್ ಚೌಧರಿ, ತುಷಾರ್ ಜೈನ್, ಚಾರುಲತಾ ಚೌಧರಿ ಹಾಗೂ ಅನು ಬಿ ವಾದ ಮಂಡಿಸಿದ್ದರು.
ಪ್ರತಿವಾದಿಗಳನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್, ಐಶ್ವರ್ಯ ಭಾಟಿ ಮತ್ತು ವಿಕ್ರಮಜೀತ್ ಬ್ಯಾನರ್ಜಿ ಪ್ರತಿನಿಧಿಸಿದ್ದರು.