ಡೀಪ್‌ ಫೇಕ್‌: ಗಡಿಗಳಿಲ್ಲದ ಜಗದಲ್ಲಿ ಅಂತರ್ಜಾಲ ನಿಯಂತ್ರಣ ನ್ಯಾಯಾಲಯಕ್ಕೆ ಸಾಧ್ಯವಾಗದು ಎಂದ ದೆಹಲಿ ಹೈಕೋರ್ಟ್

ಕೃತಕ ಬುದ್ಧಿಮತ್ತೆಯ ಫಲವಾದ ʼಡೀಪ್ ಫೇಕ್ʼ ವಸ್ತುವಿಷಯ ಸೃಷ್ಟಿಸುವ ಜಾಲತಾಣ ನಿರ್ಬಂಧಿಸುವಂತೆ ಮತ್ತು ಅಂತಹ ತಂತ್ರಜ್ಞಾನದ ಅನುಮತಿಸಬಹುದಾದ ಬಳಕೆ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಪಿಐಎಲ್‌ ಕೋರಿತ್ತು.
ದೆಹಲಿ ಹೈಕೋರ್ಟ್, ದೀಪ್ಫೇಕ್
ದೆಹಲಿ ಹೈಕೋರ್ಟ್, ದೀಪ್ಫೇಕ್

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಫಲಶ್ರುತಿಯಾದ ʼಡೀಪ್ ಫೇಕ್' ವಸ್ತುವಿಷಯದ (ಕಂಟೆಂಟ್‌) ಬಳಕೆ ನಿಯಂತ್ರಿಸಲು ನಿರ್ದೇಶನ ನೀಡುವ ಕುರಿತಂತೆ ದೆಹಲಿ ಹೈಕೋರ್ಟ್ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.

ಡೀಪ್ ಫೇಕ್ ಕಂಟೆಂಟ್‌ ಉತ್ಪಾದಿಸುವ ಜಾಲತಾಣಗಳಿಗೆ ಅವಕಾಶ ನೀಡದಂತೆ ಚೈತನ್ಯ ರೋಹಿಲ್ಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.

ಡೀಪ್ ಫೇಕ್ ಮತ್ತು ಎಐನ ಅನುಮತಿಸಬಹುದಾದ ಬಳಕೆಯ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ಆದರೆ ಈ ವಿಚಾರ ತುಂಬಾ ಜಟಿಲವಾಗಿದ್ದು ಇದನ್ನು ಎದುರಿಸಲು ಹಾಗೂ ಸಮತೋಲಿತ ಪರಿಹಾರ ಕಂಡುಕೊಳ್ಳಲು ಸರ್ಕಾರ ಹೆಚ್ಚು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.

"ಈ ತಂತ್ರಜ್ಞಾನ ಈಗ ಗಡಿಗಳಿಲ್ಲದ ಜಗತ್ತಿನಲ್ಲಿದೆ. ನೀವು ಅಂತರ್ಜಾಲವನ್ನು ಹೇಗೆ ನಿಯಂತ್ರಿಸುತ್ತೀರಿ? ಅದನ್ನು ಅಷ್ಟರಮಟ್ಟಿಗೆ ನಿಗಾ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ (ಹಾಗೆ ಮಾಡುವುದು) ಅಂತರ್ಜಾಲದ ಸ್ವಾತಂತ್ರ್ಯ ಇಲ್ಲವಾಗಿಸುತ್ತದೆ. ಆದ್ದರಿಂದ ಇದರಲ್ಲಿ ಬಹಳ ಮುಖ್ಯವಾದ, ಸಮತೋಲನ ಮಾಡಬೇಕಾದ ಅಂಶಗಳಿವೆ. ಎಲ್ಲಾ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವಂತಹ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಎಲ್ಲಾ ಸಂಪನ್ಮೂಲಗಳನ್ನು ಹೊಂದಿರುವ ಸರ್ಕಾರ ಮಾತ್ರ ಅದನ್ನು ಮಾಡಬಹುದಾಗಿದೆ. ಸರ್ಕಾರದ ಬಳಿ ದತ್ತಾಂಶ ಇದೆ, ಅದು ವಿಶಾಲವಾದ ವ್ಯವಸ್ಥೆ ಹೊಂದಿದ್ದು, ಅದೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇದು ಬಹಳ ಸಂಕೀರ್ಣವಾದ ವಿಷಯ. ಇದು ಸರಳ ವಿಷಯವಲ್ಲ" ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅಭಿಪ್ರಾಯಪಟ್ಟರು.

Also Read
ಬೆದರಿಕೆ, ದಬ್ಬಾಳಿಕೆ,ತಾರತಮ್ಯವನ್ನು ಶಾಶ್ವತಗೊಳಿಸುವ ಸಾಧನವಾಗಬಹುದು ಕೃತಕ ಬುದ್ಧಿಮತ್ತೆ: ಸಿಜೆಐ ಕಳವಳ

ಡೀಪ್ ಫೇಕ್ಸ್ ಮತ್ತು ಎಐ ಕೆಲವು ವಲಯಗಳಲ್ಲಿ ಪ್ರಯೋಜನಕ್ಕೆ ಬರುತ್ತವೆ ಎಂಬುದನ್ನು ಗಮನಿಸಿರುವ ನ್ಯಾಯಾಲಯ "ಚಲನಚಿತ್ರ ನಿರ್ಮಿಸುವಾಗ, ವಿಶೇಷವಾಗಿ ಸಮರಕ್ಕೆ ಸಂಬಂಧಿಸಿದ ಚಲನಚಿತ್ರಗಳನ್ನು ರೂಪಿಸುವಾಗ, ಡೀಪ್ ಫೇಕ್ ಬಹಳ ಮುಖ್ಯ. ಒಬ್ಬ ವ್ಯಕ್ತಿಯ 1000 ಪ್ರತಿಕೃತಿಗಳನ್ನು ಅವರು ತೋರಿಸಬಲ್ಲರು" ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ಹಾಜರಾದ ವಕೀಲ ಮನೋಹರ್ ಲಾಲ್, ಡೀಪ್ ಫೇಕ್ ಅಥವಾ ಎಐ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಖಾಸಗಿ ಪಕ್ಷಕಾರರನ್ನು ಹೊಣೆಗಾರರನ್ನಾಗಿ ಮಾಡಲು ನ್ಯಾಯಾಲಯವು ಕನಿಷ್ಠ ಕೆಲ ಮಾರ್ಗಸೂಚಿಗಳನ್ನು ಹೊರಡಿಸಬಹುದು. ಎಐ ಯಾವಾಗ ಆಕ್ಷೇಪಾರ್ಹ ಕಂಟೆಂಟ್‌ ರೂಪಿಸಿತು ಎಂಬುದನ್ನು ಬಹಿರಂಗಪಡಿಸುವಂತೆ ಜಾಲತಾಣಗಳಿಗೆ ಸೂಚಿಸುವ ಮೂಲಕ ಕಾನೂನುಬಾಹಿರ ಕಂಟೆಂಟ್‌ ತಯಾರಿಸುವುದನ್ನು ತಡೆಯಬಹುದು ಎಂದು ಹೇಳಿದರು.

ದತ್ತಾಂಶ ಗೌಪ್ಯತೆ (ಡಿಜಿಟಲ್ ಡೇಟಾ ಸಂರಕ್ಷಣಾ ಕಾಯಿದೆ) ಕುರಿತು ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಸುದೀರ್ಘ ಏಳು ವರ್ಷ ಹಿಡಿಯಿತು. ಎಐ ದುರುಪಯೋಗದ ವಿಚಾರವನ್ನು ಸಹ ಇಷ್ಟು ಸುದೀರ್ಘ ಕಾಲ ಅನಿಯಂತ್ರಿತವಾಗಿ ಉಳಿಯಲು ಬಿಡಬಾರದು ಎಂದು ಅವರು ವಾದಿಸಿದರು.

ನಿಯಂತ್ರಣ ರೂಪುಗೊಳ್ಳುವವರೆಗೆ ಎಐ ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಟಿಕ್‌ಟಾಕ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಐರೋಪ್ಯ ಒಕ್ಕೂಟ ಅಥವಾ ಅಮೆರಿಕಕ್ಕೆ ಹೋಲಿಸಿದರೆ ಭಾರತ ಬಹಳ ಮುಂದಿದೆ. ಡೀಪ್ ಫೇಕ್ ಗಳನ್ನು ನಿಯಂತ್ರಿಸುವಲ್ಲಿಯೂ ಭಾರತವು ಮುಂಚೂಣಿಯಲ್ಲಿರಬೇಕು ಎಂದು ಅವರು ವಾದಿಸಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸ್ಥಾಯಿ ವಕೀಲ ಅಪೂರ್ವ್ ಕುಮಾರ್, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಚರ್ಚಿಸುತ್ತಿದೆ. ಸರ್ಕಾರದಿಂದ ಸೂಚನೆಗಳನ್ನು ಪಡೆಯಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಮನವಿ ಪುರಸ್ಕರಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ನಿಗದಿಪಡಿಸಿತು.

Related Stories

No stories found.
Kannada Bar & Bench
kannada.barandbench.com