ಕೋವಿಡ್‌ ಔಷಧ ಸಂಶೋಧಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಲಾಗದು: ಕರ್ನಾಟಕ ಹೈಕೋರ್ಟ್‌

ನಿರ್ದಿಷ್ಟ ಔಷಧಿಯು ಕೋವಿಡ್‌ ನಿವಾರಿಸುವ ಅಂಶಗಳನ್ನು ಹೊಂದಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಮನವಿಯನ್ನು ನ್ಯಾಯಾಲಯವು ವಜಾ ಮಾಡಿದೆ.
Karnataka HC, COVID-19
Karnataka HC, COVID-19
Published on

ನಿರ್ದಿಷ್ಟ ಔಷಧಿಯು ಕೋವಿಡ್‌ ನಿವಾರಿಸುವ ಅಂಶಗಳನ್ನು ಹೊಂದಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಸುವ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಮನವಿಯೊಂದನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ.

ಸದರಿ ಕೋರಿಕೆಯು ನ್ಯಾಯಾಲಯದ ವ್ಯಾಪ್ತಿಯ ಹೊರಗಿದ್ದು, ಈ ಕುರಿತು ತಜ್ಞರು ನಿರ್ಧರಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.

“ನಿರ್ದಿಷ್ಟ ಔಷಧಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವಂತೆ ರಾಜ್ಯ ಸರ್ಕಾರ ಮತ್ತು ಇತರರಿಗೆ ನ್ಯಾಯಾಲಯ ನಿರ್ದೇಶನ ನೀಡಲಾಗದು. ಈ ಮನವಿಗೆ ಯಾವುದೇ ಪರಿಹಾರ ಕಲ್ಪಿಸಲಾಗದು. ಹೀಗಾಗಿ, ಇದನ್ನು ವಜಾ ಮಾಡುತ್ತಿದ್ದೇವೆ” ಎಂದು ಪೀಠ ಹೇಳಿದೆ.

ಕೋವಿಡ್‌ಗೆ ಯಾವ ತೆರನಾದ ಚಿಕಿತ್ಸೆ ನೀಡಬೇಕು ಎಂಬುದನ್ನು ನಿರ್ಧರಿಸುವ ವಿಚಾರವು ತಜ್ಞರಿಗೆ ಬಿಟ್ಟದ್ದಾಗಿದೆ ಎಂದಿರುವ ನ್ಯಾಯಾಲಯವು ಅರ್ಜಿದಾರರಾದ ಕೋಲಾದಿಯಾ ಕಿರೀಟ್‌ ಅವರ ವಿಶ್ವಾಸಾರ್ಹತೆಯ ಬಗ್ಗೆ ಹುಬ್ಬೇರಿಸಿದೆ.

“ಅರ್ಜಿದಾರರು ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸಂಶೋಧನೆಗೆ ಸಂಬಂಧಿಸಿದಂತೆ ತಮ್ಮ ಸಾಧನೆ ಬಿಂಬಿಸುವ ಯಾವುದೇ ವಿಚಾರವನ್ನು ಅವರು ದಾಖಲೆಯಲ್ಲಿ ಸಲ್ಲಿಸಿಲ್ಲ” ಎಂದು ಪೀಠ ಹೇಳಿದೆ.

Also Read
ಕೇಂದ್ರವು ಕೋವಿಡ್‌ ಲಸಿಕಾ ನೀತಿ ಬದಲಾಯಿಸಲು ಸುಪ್ರೀಂ ಆದೇಶ ಪ್ರೇರೇಪಿಸಿದ್ದನ್ನು ವಿವರಿಸಿದ ನ್ಯಾ. ಚಂದ್ರಚೂಡ್‌

ಕೋವಿಡ್‌ಗೆ ನೀಡಲಾಗಿತ್ತಿರುವ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅವಧಿಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಈಚೆಗೆ ಕಲ್ಕತ್ತಾ ಹೈಕೋರ್ಟ್‌ ವಜಾ ಮಾಡಿತ್ತು. ತಾಂತ್ರಿಕ ವಿಚಾರಗಳನ್ನು ಪರಿಶೀಲಿಸುವಷ್ಟರ ಮಟ್ಟಿಗೆ ನ್ಯಾಯಾಲಯವು ಪರಿಣತ ಸಂಸ್ಥೆಯಾಗಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ನ್ಯಾಯಮೂರ್ತಿ ಅರಿಜಿತ್‌ ಬ್ಯಾನರ್ಜಿ ಅವರಿದ್ದ‌ ವಿಭಾಗೀಯ ಪೀಠ ಹೇಳಿತ್ತು.

“ಪ್ರತಿನಿತ್ಯ ತನ್ನ ರೂಪ ಬದಲಿಸುತ್ತಿರುವ ಕೋವಿಡ್‌ಗೆ ಸಂಬಂಧಿಸಿದಂತೆ ವೈದ್ಯಕೀಯ ಪರಿಭಾಷೆಯಲ್ಲಿರುವ ತಾಂತ್ರಿಕ ವಿಚಾರಗಳನ್ನು ವಿಶ್ಲೇಷಿಸುವ ಪರಿಣತ ಸಂಸ್ಥೆ ಈ ನ್ಯಾಯಾಲಯವಲ್ಲ” ಎಂದು ಕಲ್ಕತ್ತಾ ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿತ್ತು.

Kannada Bar & Bench
kannada.barandbench.com