ಕಾನೂನಿಗೆ ಸಂಬಂಧಿಸಿದ ವಿಚಾರಗಳನ್ನು ನಿರ್ಧರಿಸುವಾಗ ಇಸ್ಲಾಂ ಧರ್ಮಗುರುಗಳ ಅಭಿಪ್ರಾಯಕ್ಕೆ ಶರಣಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಕಾನೂನಿನ ವಿಚಾರಕ್ಕೆ ಬಂದರೆ ತರಬೇತಿ ಪಡೆದ ಕಾನೂನು ತಜ್ಞರು ನ್ಯಾಯಾಲಯಗಳನ್ನು ನಿರ್ವಹಿಸುತ್ತಾರೆ. ನಂಬಿಕೆಗಳು ಮತ್ತು ಆಚರಣೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮಾತ್ರ ನ್ಯಾಯಾಲಯ ಧರ್ಮಗುರುಗಳ ಅಭಿಪ್ರಾಯ ಪರಿಗಣಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಷ್ತಾಕ್ ಮತ್ತು ಸಿ ಎಸ್ ಡಯಾಸ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ನ್ಯಾಯಾಲಯಗಳನ್ನು ತರಬೇತಿ ಪಡೆದ ಕಾನೂನು ತಜ್ಞರು ನಿರ್ವಹಿಸುತ್ತಾರೆ. ಕಾನೂನಿನ ವಿಚಾರದಲ್ಲಿ ಯಾವುದೇ ಕಾನೂನು ತರಬೇತಿ ಪಡೆದಿರದ ಮುಸ್ಲಿಂ ಧರ್ಮಗುರುಗಳ ಅಭಿಪ್ರಾಯಗಳಿಗೆ ನ್ಯಾಯಾಲಯ ಶರಣಾಗುವುದಿಲ್ಲ. ನಿಸ್ಸಂದೇಹವಾಗಿ, ನಂಬಿಕೆ ಮತ್ತು ಆಚರಣೆಗೆ ಸಂಬಂಧಿಸಿದ ವಿಷಯಗಳಲ್ಲಿ, ಧರ್ಮಗುರುಗಳ ಅಭಿಪ್ರಾಯಗಳು ನ್ಯಾಯಾಲಯಕ್ಕೆ ಮುಖ್ಯವಾಗಲಿದ್ದು ನ್ಯಾಯಾಲಯ ಅವರ ಅಭಿಪ್ರಾಯಗಳನ್ನು ಗೌರವಿಸುತ್ತದೆ ಎಂದು ಪೀಠ ತಿಳಿಸಿದೆ.
ನೈತಿಕ ಪ್ರತಿಬಂಧಕತ್ವ ಮತ್ತು ಕಾನೂನಾತ್ಮಕ ಹಕ್ಕನ್ನು ಸಂಯೋಗಿಸುವ ಬಿಂದುವು ನಮ್ಮ ನಂಬಿಕೆಗಳಿಗೆ ಅನುಗುಣವಾಗಿ ನಮ್ಮ ಜೀವನದಲ್ಲಿ ಭಗವಂತನೆಡೆಗಿರುವ ನಮ್ಮ ಹೊಣೆಗಾರಿಕೆಯನ್ನು ತೋರಿಸುತ್ತದೆ. ಆದರೆ, ಅದು ಜಾತ್ಯತೀತ ದೇಶವೊಂದರ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹಕ್ಕಿನ ಸಿಂಧುತ್ವವನ್ನು ನಿರ್ಧರಿಸಲಾಗದು ಎಂದು ಅದು ಹೇಳಿದೆ.
ಫಿಕ್ಹ್ ಎಂಬುದು ಇಸ್ಲಾಂ ಕಾನೂನಿನ ಮೂಲಗಳಲ್ಲಿ ಕಂಡುಬರುವ ಪುರಾವೆಗಳಿಂದ ಇಸ್ಲಾಂ ಕಾನೂನುಗಳನ್ನು ನಿರ್ಣಯಿಸುವ ವಿಜ್ಞಾನದ ಕುರಿತು ಹೇಳುತ್ತದೆ. ಯಾವುದೇ ಔಪಚಾರಿಕ ಕಾನೂನು ತರಬೇತಿ ಪಡೆದಿರದ ಸಾಮಾನ್ಯ ವಿದ್ವಾಂಸರು ಮತ್ತು ಇಸ್ಲಾಂ ಧರ್ಮಗುರುಗಳು ಇಸ್ಲಾಂ ಕಾನೂನನ್ನು ಅದರ ಮೂಲಗಳಿಂದ ಪ್ರತ್ಯೇಕಿಸಲು ಹರಸಾಹಸಪಡುತ್ತಾರೆ. ಫಿಕ್ಹ್ ಇಸ್ಲಾಂ ಕಾನೂನಿನ ನೈಜ ಉದ್ದೇಶ ಮತ್ತು ಗುರಿಗಳನ್ನು ಸೂಚಿಸುತ್ತದೆ. (ಧರ್ಮದ) ಮೂಲಗಳಿಂದ ಇಸ್ಲಾಂ ಕಾನೂನನ್ನು ಬೇರ್ಪಡಿಸಲು ಕಾನೂನು ತಜ್ಞರ ಅಗತ್ಯವಿದೆ ಎಂದು ಪೀಠ ವಿವರಿಸಿದೆ.
ಮುಸ್ಲಿಂ ಪತ್ನಿಯೊಂದಿಗಿನ ವಿವಾಹ ಒಪ್ಪಂದ ಅಂತ್ಯಗೊಳಿಸುವ ಹಕ್ಕನ್ನು ಪವಿತ್ರ ಕುರಾನ್ ಆಕೆಗೆ ನೀಡಿರುವ ಸಂಪೂರ್ಣ ಹಕ್ಕಾಗಿದ್ದು ಗಂಡನ ಇಚ್ಛೆ ಅಥವಾ ಅಂಗೀಕಾರಕ್ಕೆ ಒಳಪಟ್ಟ ಹಕ್ಕು ಅದಲ್ಲ ಎಂದು ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಪತಿ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯಲ್ಲಿ “ಖುಲಾವನ್ನು ಆಹ್ವಾನಿಸಲು ಮುಸ್ಲಿಂ ಹೆಂಡತಿಗೆ ನೀಡಲಾದ ಅಧಿಕಾರವನ್ನು ತಾನು ಪ್ರಶ್ನಿಸುತ್ತಿಲ್ಲ, ಆದರೆ ಮುಸ್ಲಿಂ ಹೆಂಡತಿ ಖುಲಾ ಪರಿಹಾರ ಕೇಳಲು ನ್ಯಾಯಾಲಯ ಸಮ್ಮತಿಸಿದ ಕಾರ್ಯವಿಧಾನವನ್ನು ಪ್ರಶ್ನಿಸುತ್ತಿರುವುದಾಗಿ ಹೇಳಿದ್ದರು.
ಅದಕ್ಕೆ ನ್ಯಾಯಾಲಯ “ಇದು ಮುಸ್ಲಿಂ ಮಹಿಳೆಯರು ತಮ್ಮ ಪುರುಷ ಸಹವರ್ತಿಯ ಇಚ್ಛೆಗೆ ಅಧೀನರು ಎಂಬುದನ್ನು ಚಿತ್ರಿಸುವ ವಿಚಿತ್ರ ವಿಮರ್ಶೆಯಾಗಿದೆ. ಈ ಅವಲೋಕನ ಮೇಲ್ಮನವಿದಾರರ ವಿಚಾರದಲ್ಲಿ ಮುಗ್ಧವಾಗಿ ತೋರುತ್ತಿಲ್ಲ, ಬದಲಿಗೆ ಇದು ಖುಲಾದ ನ್ಯಾಯಾಂಗೇತರ ವಿಚ್ಛೇದನವನ್ನು ಏಕಪಕ್ಷೀಯವಾಗಿ ಆಶ್ರಯಿಸುವ ಮುಸ್ಲಿಂ ಮಹಿಳೆಯರ ಹಕ್ಕನ್ನು ಅರಗಿಸಿಕೊಳ್ಳಲಾಗದ ಧರ್ಮಗುರುಗಳು ಮತ್ತು ಮುಸ್ಲಿಂ ಸಮುದಾಯದ ಪುರುಷ ಪ್ರಾಬಲ್ಯದಿಂದ ರೂಪಿತ ಮತ್ತು ಬೆಂಬಲಿತವಾಗಿರುವಂತೆ ತೋರುತ್ತದೆ” ಎಂದಿತು.
ಎಲ್ಲಾ ಕಕ್ಷಿದಾರರ ವಾದ ಆಲಿಸಿದ ನ್ಯಾಯಾಲಯ ತನ್ನ ತೀರ್ಪನ್ನು ಪರಿಶೀಲಿಸಲು ಯಾವುದೇ ಕಾರಣ ಕಂಡುಬರುತ್ತಿಲ್ಲ ಎಂದು ತಿಳಿಸಿ ಮನವಿಯನ್ನು ವಜಾಗೊಳಿಸಿತು.