ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಗಳಿಗೆ ಹೆಚ್ಚುವರಿ ಆರೋಪ ಪಟ್ಟಿ ಪ್ರತಿ ಒದಗಿಸಲು ಸೂಚಿಸಿದ ನ್ಯಾಯಾಲಯ

ದರ್ಶನ್‌ ಮತ್ತು ಇತರೆ ಆರೋಪಿಗಳ ಪರ ವಕೀಲರು “ಈಚೆಗೆ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪ ಪಟ್ಟಿಯನ್ನು ಪ್ರಾಸಿಕ್ಯೂಷನ್‌ ಸಲ್ಲಿಸಿದೆ. ಆದರೆ, ಅದರ ಪ್ರತಿಯನ್ನು ತಮಗೆ ಒದಗಿಸಿಲ್ಲ” ಎಂದು ಪೀಠದ ಗಮನಸೆಳೆದರು.
Darshan Thoogudeepa and Pavithra Gowda
Darshan Thoogudeepa and Pavithra Gowda Image source: Instagram, Facebook
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೆಚ್ಚುವರಿ ಆರೋಪ ಪಟ್ಟಿಯನ್ನು ನಟ ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳ ಪರ ವಕೀಲರಿಗೆ ಒದಗಿಸುವಂತೆ ಪ್ರಾಸಿಕ್ಯೂಷನ್‌ಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಪ್ರಕರಣದ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್‌ ಅವರು ಇಂದು ನಡೆಸಿದರು.

ತನಿಖೆಯ ಸಂದರ್ಭದಲ್ಲಿ ಜಫ್ತಿ ಮಾಡಿರುವ ₹34 ಲಕ್ಷ ಬಿಡುಗಡೆ ಕೋರಿ ನಟ ದರ್ಶನ್‌ ಮತ್ತು ಇದಕ್ಕೆ ಆಕ್ಷೇಪಿಸಿ ಆದಾಯ ತೆರಿಗೆ ಇಲಾಖೆಯು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಜೂನ್‌ 3ಕ್ಕೆ ನಿಗದಿಪಡಿಸಿದೆ. ಅಲ್ಲದೇ, ಆರೋಪ ನಿಗದಿಗೂ ಮುನ್ನ ವಾದ ಆಲಿಸಲು ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಜುಲೈ 10ಕ್ಕೆ ಮುಂದೂಡಿದೆ.

ಪ್ರಕರಣದಲ್ಲಿನ ಮೂರನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್‌ ಕೆ ಪವನ್‌ ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳು ಇಂದು ನ್ಯಾಯಾಲಯದ ಮುಂದೆ ಹಾಜರಿದ್ದರು. ಮೊದಲನೇ ಆರೋಪಿ ಪವಿತ್ರಾ ಗೌಡ ಮೇ 24ರಿಂದ ಜೂನ್‌ 14ರವರೆಗೆ ಮುಂಬೈ, ಕಲ್ಕತ್ತಾ, ಚೆನ್ನೈ, ಸೂರತ್‌, ದೆಹಲಿ ಮತ್ತು ಗುಜರಾತ್‌ನ ವಿವಿಧ ಕಡೆ ಬೊಟೀಕ್ ಮತ್ತು ಉಡುಪುಗಳ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಜಾಮೀನು ಷರತ್ತಿನಲ್ಲಿ ಸಡಲಿಕೆ ಮಾಡಿ ನ್ಯಾಯಾಲಯ ಅನುಮತಿಸಿದೆ.

ಚಿತ್ರದುರ್ಗದ ನಿವಾಸಿಗಳಾದ 6ನೇ ಆರೋಪಿ ಜಗದೀಶ್‌ ಮತ್ತು 7ನೇ ಆರೋಪಿ ಅನುಕುಮಾರ್‌ಗೆ ತಮ್ಮ ಊರಿಗೆ ತೆರಳಲು ಅನುಮತಿಸಲಾಗಿದೆ. 10ನೇ ಆರೋಪಿ ವಿ ವಿನಯ್‌ ಉದ್ಯಮದ ಕೆಲಸಗಳಿಗಾಗಿ ಆರು ವಾರ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. 11ನೇ ಆರೋಪಿ ನಾಗರಾಜುಗೆ ಮೈಸೂರು, ಹೊಸಪೇಟೆ ಮತ್ತು ಕಲಬುರ್ಗಿಗೆ ಪ್ರಯಾಣಿಸಲು ಅನುಮತಿ ದೊರೆತಿದೆ. 14ನೇ ಆರೋಪಿ ಪ್ರದೋಷ್‌ ಆರ್.‌ ರಾವ್‌ಗೆ ಎಚ್‌ ಡಿ ಕೋಟೆಯ ತನ್ನ ಊರು, ಚಿಕ್ಕಮಗಳೂರು ಮತ್ತು ಬಳ್ಳಾರಿಗೆ ಹೋಗಲು ಅನುಮತಿಸಲಾಗಿದೆ.

Also Read
[ರೇಣುಕಾಸ್ವಾಮಿ ಕೊಲೆ ಪ್ರಕರಣ] ದರ್ಶನ್‌ ಗೈರಿಗೆ ನ್ಯಾಯಾಲಯ ಗರಂ; ₹34 ಲಕ್ಷ ಬಿಡುಗಡೆ ವಿಚಾರಣೆ ಏ.16ಕ್ಕೆ

ದರ್ಶನ್‌ ಮತ್ತು ಇತರೆ ಆರೋಪಿಗಳ ಪರ ವಕೀಲರು “ಈಚೆಗೆ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪ ಪಟ್ಟಿಯನ್ನು ಪ್ರಾಸಿಕ್ಯೂಷನ್‌ ಸಲ್ಲಿಸಿದೆ. ಆದರೆ, ಅದರ ಪ್ರತಿಯನ್ನು ತಮಗೆ ಒದಗಿಸಿಲ್ಲ” ಎಂದು ಪೀಠದ ಗಮನಸೆಳೆದರು. ಹೀಗಾಗಿ, ಅದರ ಪ್ರತಿ ಒದಗಿಸುವಂತೆ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿತು. 

Kannada Bar & Bench
kannada.barandbench.com