ಕಣ್ವ ಬಹುಕೋಟಿ ವಂಚನೆ ಹಗರಣ: ಸಂಸ್ಥೆಯ ಸಂಸ್ಥಾಪಕ ನಂಜುಂಡಯ್ಯಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

“ಆರ್ಥಿಕ ಅಪರಾಧಗಳು ಮತ್ತು ಸಾರ್ವಜನಿಕರ ಅಪಾರ ಹಣದ ವಿಚಾರ ಇರುವುದರಿಂದ ಪ್ರಕರಣದ ಅರ್ಹತೆಯ ಆಧಾರದಲ್ಲಿ ಆರೋಪಿಗೆ ಜಾಮೀನು ನೀಡಲಾಗುತ್ತಿಲ್ಲ. ಆರೋಗ್ಯದ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ನ್ಯಾಯಾಲಯ ಪರಿಗಣಿಸಿದೆ” ಎಂದ ಪೀಠ.
Kanva MD Nanjundaiah and Karnataka HC
Kanva MD Nanjundaiah and Karnataka HC

ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಣ್ವ ಸೌಹಾರ್ದ ಸಹಕಾರ ಕ್ರೆಡಿಟ್‌ ಲಿಮಿಟೆಡ್‌ನ ಸಂಸ್ಥಾಪಕ ನಂಜುಂಡಯ್ಯ ಅವರಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಕರ್ನಾಟಕ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದೆ.

ವಕೀಲ ಕಿರಣ್‌ ಜವಳಿ ಮೂಲಕ ಸಲ್ಲಿಸಿದ್ದ ಜಾಮೀನು ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್‌ ಅವರಿದ್ದ ಏಕಸದಸ್ಯ ಪೀಠವು ಆರೋಪಿ ನಂಜುಂಡಯ್ಯ ಅವರಿಗೆ ತಲಾ ರೂ. 10 ಲಕ್ಷ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ಎರಡು ಪ್ರಕರಣಗಳಲ್ಲೂ ಜಾಮೀನು ಮಂಜೂರು ಮಾಡಿದೆ.

“ಆರ್ಥಿಕ ಅಪರಾಧಗಳು ಮತ್ತು ಸಾರ್ವಜನಿಕರ ಅಪಾರ ಹಣದ ವಿಚಾರ ಇರುವುದರಿಂದ ಪ್ರಕರಣದ ಅರ್ಹತೆಯ ಆಧಾರದಲ್ಲಿ ಆರೋಪಿಗೆ ಜಾಮೀನು ನೀಡಲಾಗುತ್ತಿಲ್ಲ. ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ನ್ಯಾಯಾಲಯ ಪರಿಗಣಿಸಿದೆ” ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಜಾರಿ ನಿರ್ದೇಶನಾಲಯವು ಕಾನೂನುಬಾಹಿರ ಹಣ ವರ್ಗಾವಣೆ ನಿಯಂತ್ರಣ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್‌ 4ರ ಅಡಿ, ಬೆಂಗಳೂರಿನ ಹೊಸಕೋಟೆ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಾದ 409 ಮತ್ತು 420ರ ಅಡಿ ಹಾಗೂ ಕರ್ನಾಟಕ ಠೇವಣಿದಾರರ ಹಿತರಕ್ಷಣಾ (ಕೆಪಿಐಡಿ) ಕಾಯಿದೆಯ ಸೆಕ್ಷನ್‌ 9ರ ಅಡಿ ದಾಖಲಿಸಿರುವ ಕ್ರಿಮಿನಲ್‌ ಅಪರಾಧಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಸದರಿ ಪ್ರಕರಣಗಳು 32ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಸಿಬಿಐ ಮತ್ತು ಪಿಎಂಎಲ್‌ ಪ್ರಕರಣಗಳ ವಿಶೇಷ ನ್ಯಾಯಾಲಯ ಮತ್ತು ಬೆಂಗಳೂರು ಗ್ರಾಮೀಣ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬಾಕಿ ಇವೆ.

ನಂಜುಂಡಯ್ಯ ಪರ ವಾದಿಸಿದ ವಕೀಲ ಕಿರಣ್‌ ಜವಳಿ ಅವರು “ಠೇವಣಿದಾರರಿಗೆ ವಂಚಿಸುವ ಯಾವುದೇ ಉದ್ದೇಶ ನಂಜುಂಡಯ್ಯ ಅವರಿಗೆ ಇಲ್ಲ. ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಹಣ ತೊಡಗಿಸಿದ್ದು, ಈ ಆಸ್ತಿಗಳು ಮತ್ತು ಬ್ಯಾಂಕ್‌ ಖಾತೆಗಳನ್ನು ರಾಜ್ಯ ಸರ್ಕಾರವು ಕೆಪಿಐಡಿ ಕಾಯಿದೆ ಮತ್ತು ಜಾರಿ ನಿರ್ದೇಶನಾಯ ವಶಕ್ಕೆ ಪಡೆದಿವೆ. ಆಸ್ತಿಗಳನ್ನು ಮಾರಾಟ ಮಾಡಿ ಠೇವಣಿದಾರರಿಗೆ ಮರುಪಾವತಿಸಲು ಅವರು ಸಿದ್ಧರಿದ್ದಾರೆ. ಇದಕ್ಕಾಗಿ ಅವರು ಜಾಮೀನಿನ ಮೇಲೆ ಹೊರಬರಬೇಕಿದೆ. ವಿಧಿವಿಜ್ಞಾನ ಆಡಿಟ್‌ ನಡೆಸಲು ಯಾವುದೇ ಆಕ್ಷೇಪಣೆ ಹೊಂದಿಲ್ಲ. ಹೀಗೆ ಮಾಡಿದರೆ ಅರ್ಜಿದಾರರು ಮುಗ್ಧರು ಎಂದು ಸಾಬೀತುಪಡಿಸಲು ನೆರವಾಗುತ್ತದೆ. ಕಳೆದ ವರ್ಷದ ಆಗಸ್ಟ್‌ನಿಂದ ನಂಜುಂಡಯ್ಯ ಜೈಲಿನಲ್ಲಿದ್ದಾರೆ. ಸೆಷನ್ಸ್‌ ನ್ಯಾಯಾಲಯ ಮತ್ತು ಹೈಕೋರ್ಟ್‌ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜುಂಡಯ್ಯ ಅವರಿಗೆ ಜಾಮೀನು ಮಂಜೂರು ಮಾಡಿವೆ. ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಕ್ರಿಮಿನಲ್‌ ಮನವಿ ಸಲ್ಲಿಸಿ ಅವರು ಅದನ್ನೂ ಹಿಂಪಡೆದಿದ್ದಾರೆ. ಹೈಕೋರ್ಟ್‌ ನೇಮಿಸಿರುವ ಆಡಳಿತಗಾರರು ಮತ್ತು ಸರ್ಕಾರವು ಕೆಪಿಐಡಿ ಕಾಯಿದೆ ಅಡಿ ನೇಮಿಸಿರುವ ಸಮರ್ಥ ಪ್ರಾಧಿಕಾರಕ್ಕೆ ಎಲ್ಲಾ ರೀತಿಯಲ್ಲೂ ನೆರವು ನೀಡಲು ನ್ಯಾಯಾಲಯದ ವಿಧಿಸುವ ಎಲ್ಲಾ ಷರತ್ತುಗಳನ್ನು ಪಾಲಿಸಲು ನನ್ನ ಕಕ್ಷಿದಾರರು ಸಿದ್ಧವಿದ್ದಾರೆ. ಇದಲ್ಲದೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ನಂಜುಂಡಯ್ಯ ಬಳಲುತ್ತಿದ್ದಾರೆ. ಇದಕ್ಕೆ ಚಿಕಿತ್ಸೆ ಪಡೆಯಲು ಜಾಮೀನು ನೀಡಬೇಕು” ಎಂದು ಕೋರಿದರು.

ಜಾರಿ ನಿರ್ದೇಶನಾಲಯದ ಪರ ವಕೀಲ ಪಿ ಪ್ರಸನ್ನಕುಮಾರ್‌ ಅವರು “13,000 ಠೇವಣಿದಾರರಿಗೆ ಸುಮಾರು 650 ಕೋಟಿ ರೂಪಾಯಿಯನ್ನು ವಂಚಿಸಲಾಗಿದೆ. ಠೇವಣಿದಾರರ ಹಣವನ್ನು ನಂಜುಡಯ್ಯ ತಮ್ಮ ಒಡೆತನದ ಕಣ್ವ ಸಮೂಹಕ್ಕೆ ಸಾಲದ ರೂಪದಲ್ಲಿ ಪಡೆದಿದ್ದಾರೆ. ಸ್ಥಿರಾಸ್ತಿಗಳನ್ನು ಒತ್ತೆಯಿಟ್ಟು ರೂ. 250 ಕೋಟಿ ಸಾಲ ಪಡೆದಿದ್ದಾರೆ. ಹಣವನ್ನು ದುರ್ಬಳಕೆ ಮಾಡಿ ಕ್ಲಬ್‌, ಗಾರ್ಮೆಂಟ್ಸ್‌, ರೆಸಾರ್ಟ್‌, ಆರೋಗ್ಯ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿದ್ದಾರೆ. ಈ ಸಂಬಂಧ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಗೆ ಬಾಕಿ ಇದೆ. ಹೈಕೋರ್ಟ್‌ ಆಡಳಿತಾಧಿಕಾರಿ ನೇಮಿಸಿದ್ದು, ಸರ್ಕಾರವು ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ ನೇತೃತ್ವದಲ್ಲಿ ಸಕ್ಷಮ ಪ್ರಾಧಿಕಾರ ರಚಿಸಿದೆ. ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನಂಜುಂಡಯ್ಯ ಅವರು ಪುತ್ರ ಮತ್ತು ಪತ್ನಿ ಹೆಸರಿನಲ್ಲಿದ್ದ ಆರು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಈಗ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ತಮ್ಮ ಕಂಪೆನಿ ಹೆಸರಿನಲ್ಲಿರುವ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಬಹುದು. ಹಾಗಾದರೆ ಕೆಪಿಐಡಿ ಕಾಯಿದೆ ಅಡಿ ಠೇವಣಿದಾರರ ಹಣ ಮರಳಿಸಲು ಜಾರಿ ನಿರ್ದೇಶನಾಯಲಯಕ್ಕೆ ಅದನ್ನು ವಶಕ್ಕೆ ಪಡೆಯಲಾಗದು. ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ನಂಜುಂಡಯ್ಯ ಹಿಂಪಡೆದಿದ್ದಾರೆ. ಆರೋಪಿಯ ಜಾಮೀನನ್ನು ಸೆಷನ್ಸ್‌ ನ್ಯಾಯಾಲಯ ರದ್ದು ಮಾಡಿದೆ. ಹಣ ವಂಚನೆ ಮತ್ತು ಅದೇ ಹಣವನ್ನು ಮತ್ತಿತರ ಉದ್ಯಮಿಗಳಿಗೆ ನಂಜುಂಡಯ್ಯ ತೊಡಗಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯಕ್ಕೆ ಸಾಕಷ್ಟು ದೂರುಗಳು ಬಂದಿವೆ. ಇದು ಪಿಎಂಎಲ್‌ ಕಾಯಿದೆಯ ಸೆಕ್ಷನ್‌ 4 ಮತ್ತು 5ರ ಅಡಿ ಅಪರಾಧವಾಗಿದೆ. ಜಾಮೀನಿನಲ್ಲಿ ಬಿಡುಗಡೆಯಾದರೆ ಅವರು ಹೈಕೋರ್ಟ್‌ ನೇಮಿಸಿರುವ ಆಡಳಿತಾಧಿಕಾರಿಗೆ ಸಹಕರಿಸದಿರಬಹುದು. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬಾರದು” ಎಂದು ವಾದಿಸಿದ್ದರು.

Also Read
ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ 72 ಮಾಧ್ಯಮ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ಬಂಧ

ಹೈಕೋರ್ಟ್‌ ಸರ್ಕಾರಿ ವಕೀಲರು ಜಾಮೀನಿಗೆ ವಿರೋಧಿಸಿದ್ದು, “ತನಿಖೆ ಪೂರ್ಣಗೊಂಡಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹೆಚ್ಚಿನ ಸಾಕ್ಷಿಗಳನ್ನು ಹಾಜರುಪಡಿಸಲು ತನಿಖಾಧಿಕಾರಿಯು ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಜಾಮೀನು ನೀಡಿದರೆ ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದ್ದು, ಕಂಪೆನಿಯ ಆಸ್ತಿಗಳನ್ನು ಮಾರಾಟ ಮಾಡುವುದನ್ನು ಅಲ್ಲಗಳೆಯಲಾಗದು. ಹೀಗಾಗಿ ಜಾಮೀನು ನೀಡಬಾರದು” ಎಂದು ವಾದಿಸಿದ್ದರು.

ಪ್ರಾಸಿಕ್ಯೂಷನ್‌ಗೆ ನೆರವಾಗಿರುವ ವಕೀಲ ಮಧುಕರ್‌ ದೇಶಪಾಂಡೆ ಅವರು “ವಿಭಾಗೀಯ ಪೀಠದ ಮುಂದೆ ದೂರುದಾರರು ರಿಟ್‌ ಮನವಿ ಸಲ್ಲಿಸಿದ್ದಾರೆ. ಆರೋಪಿಯ ಆಸ್ತಿಗಳ ಮೇಲೆ ವಿಭಾಗೀಯ ಪೀಠ ನಿಗಾ ಇಟ್ಟಿದೆ. ಸಾವಿರಾರು ಮಂದಿಗೆ ಆರೋಪಿ ವಂಚಿಸಿದ್ದಾರೆ. ಅರ್ಜಿದಾರ-ಕಂಪೆನಿ ನಿರ್ವಹಿಸಿರುವ ಲೆಕ್ಕದ ಪುಸ್ತಕಗಳನ್ನು ಪರಿಶೀಲಿಸಲು ವಿಧಿ ವಿಜ್ಞಾನ ಆಡಿಟ್‌ ನಡೆಸಲು ದೂರುದಾರರು ಕೋರಿದ್ದಾರೆ. ಹೀಗಾಗಿ, ಜಾಮೀನು ಮನವಿಯನ್ನು ತಿರಸ್ಕರಿಸಬೇಕು” ಎಂದು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com