ತಡವಾಗಿ ಮಧ್ಯಸ್ಥಿಕೆ ತೀರ್ಪು ನೀಡಿದ ಬಳಿಕವೂ ಮಧ್ಯಸ್ಥಿಕೆ ನ್ಯಾಯಮಂಡಳಿಯ ಅವಧಿ ವಿಸ್ತರಿಸಬಹುದು: ಸುಪ್ರೀಂ

ಕಾನೂನಿನಲ್ಲಿ ನಿಗದಿಯಾದ 18 ತಿಂಗಳ ಅವಧಿ ಮೀರಿ ತೀರ್ಪು ನೀಡಿದ ಬಳಿಕವೂ ಮಧ್ಯಸ್ಥಿಕೆ ನ್ಯಾಯಮಂಡಳಿ ಅಧಿಕಾರಾವಧಿ ವಿಸ್ತರಿಸಬಹುದೇ ಎಂಬುದೇ ಪ್ರಕರಣದ ಮುಖ್ಯ ಪ್ರಶ್ನೆಯಾಗಿತ್ತು.
Arbitration and Conciliation
Arbitration and Conciliation
Published on

ಶಾಸನಬದ್ಧ ಅವಧಿ ಮೀರಿ ತೀರ್ಪು ನೀಡಿದ್ದರೂ 1996 ರ ಮಧ್ಯಸ್ಥಿಕೆ ಮತ್ತು ರಾಜಿ ಸಂಧಾನ ಕಾಯಿದೆಯ ಸೆಕ್ಷನ್ 29 ಎ ಅಡಿಯಲ್ಲಿ ನ್ಯಾಯಾಲಯಗಳು ಮಧ್ಯಸ್ಥಿಕೆ ನ್ಯಾಯಮಂಡಳಿಯ ಅಧಿಕಾರಾವಧಿ ವಿಸ್ತರಿಸಬಹುದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ [ಸಿ ವೇಲುಸಾಮಿ ಮತ್ತು ಕೆ ಇಂದಿರಾ ನಡುವಣ ಪ್ರಕರಣ].

ಮದ್ರಾಸ್ ಹೈಕೋರ್ಟ್ ತೆಗೆದುಕೊಂಡಿದ್ದ ವ್ಯತಿರಿಕ್ತ ನಿಲುವನ್ನು ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದುರ್‌ಕರ್‌ ಅವರಿದ್ದ ಪೀಠ ಈ ತೀರ್ಪು ನೀಡಿದೆ.

Also Read
ಕಂಪೆನಿಗಳು ಹಣ ಹೂಡಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರಗಳು ಕೈಗಾರಿಕಾ ಪ್ರೋತ್ಸಾಹ ಹಿಂಪಡೆಯುವಂತಿಲ್ಲ: ಸುಪ್ರೀಂ ಕೋರ್ಟ್

“ಸಂಕ್ಷಿಪ್ತವಾಗಿ ಹೇಳುವುದಾದರೆ, ಸೆಕ್ಷನ್ 29A(1) ಮತ್ತು (3) ಅಡಿಯಲ್ಲಿ ನಿಗದಿಪಡಿಸಿದ ಅವಧಿ ಮುಗಿದ ನಂತರವೂ, ಹಾಗೆಯೇ ಆ ಅವಧಿಯಲ್ಲಿ ತೀರ್ಪು ನೀಡಲಾಗಿದ್ದರೂ ಸಹ, ಮಧ್ಯಸ್ಥಿಕೆಗಾರರ ಅವಧಿಯನ್ನು ವಿಸ್ತರಿಸುವಂತೆ ಸೆಕ್ಷನ್ 29A(5) ಅಡಿಯಲ್ಲಿ ಸಲ್ಲಿಸುವ ಅರ್ಜಿ ಪುರಸ್ಕಾರಕ್ಕೆ ಅರ್ಹವಾಗಿದೆ. ಇಂತಹ ತೀರ್ಪು ಪರಿಣಾಮಕಾರಿಯಲ್ಲ ಮತ್ತು ಜಾರಿಗೆ ಬರುವುದಿಲ್ಲವಾದರೂ ಮಧ್ಯಸ್ಥಿಕೆಗಾರರ ಈ ರೀತಿಯ ಅಜಾಗರೂಕತೆಯಿಂದ ನ್ಯಾಯಾಲಯದ ಅವಧಿ ವಿಸ್ತರಣೆ ಪರಿಗಣಿಸುವ ಅಧಿಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.

 ಕಾನೂನಿನಲ್ಲಿ ನಿಗದಿಯಾದ 18 ತಿಂಗಳ ಅವಧಿ ಮೀರಿ ತೀರ್ಪು ನೀಡಿದ ಬಳಿಕವೂ ಮಧ್ಯಸ್ಥಿಕೆ ನ್ಯಾಯಮಂಡಳಿ ಅಧಿಕಾರಾವಧಿ ವಿಸ್ತರಿಸಬಹುದೇ ಎಂಬುದೇ ಪ್ರಕರಣದ ಮುಖ್ಯ ಪ್ರಶ್ನೆಯಾಗಿತ್ತು.

ನ್ಯಾಯಾಲಯದ ಮುಂದೆ ಇರುವ ಪ್ರಮುಖ ಪ್ರಶ್ನೆಯೆಂದರೆ, ಕಾನೂನಿನಲ್ಲಿ ನಿಗದಿಪಡಿಸಿದ 18 ತಿಂಗಳ ಅವಧಿಯನ್ನು ಮೀರಿಸಿ ಮಧ್ಯಸ್ಥಿಕೆಗಾರರು ಈಗಾಗಲೇ ತೀರ್ಪು ನೀಡಿರುವ ಸಂದರ್ಭದಲ್ಲಿ, ಮಧ್ಯಸ್ಥಿಕೆಗಾರರ ಅವಧಿಯನ್ನು ವಿಸ್ತರಿಸುವಂತೆ ಮಧ್ಯಸ್ಥಿಕೆ ಮತ್ತು ಸಮ್ಮಿಲನ ಕಾಯ್ದೆ, 1996ರ ಸೆಕ್ಷನ್ 29A(5) ಅಡಿಯಲ್ಲಿ ಸಲ್ಲಿಸುವ ಅರ್ಜಿ ಮಾನ್ಯವಾಗುತ್ತದೆಯೇ ಎಂಬುದಾಗಿತ್ತು.

ಈ ಪ್ರಶ್ನೆಗೆ ಹೌದು ಎಂಬ ಉತ್ತರ ನೀಡಿದ ನ್ಯಾಯಾಲಯ, ತಡವಾಗಿ ತೀರ್ಪು ನೀಡಿರುವ ಮಧ್ಯಸ್ಥಿಕೆಗಾರರ ಕ್ರಮದಿಂದ ನ್ಯಾಯಾಲಯದ ಅವಧಿ ವಿಸ್ತರಿಸುವ ಅಧಿಕಾರಕ್ಕೆ ಧಕ್ಕೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದಲ್ಲಿ ಕಕ್ಷಿದಾರರ ನಡುವಿನ ಮೂರು ಮಾರಾಟ ಒಪ್ಪಂದ ವ್ಯಾಜ್ಯಕ್ಕೆ ನಾಂದಿ ಹಾಡಿತ್ತು. ಮದ್ರಾಸ್ ಹೈಕೋರ್ಟ್ ಏಪ್ರಿಲ್ 2022ರಲ್ಲಿ ಏಕೈಕ ಮಧ್ಯಸ್ಥಿಕೆಗಾರರನ್ನು ನೇಮಿಸಿತು. ಪರಸ್ಪರ ಒಪ್ಪಿಗೆಯಿಂದ ಅವಧಿಯನ್ನು ಫೆಬ್ರವರಿ 20, 2024ರವರೆಗೆ ವಿಸ್ತರಿಸಲಾಗಿತ್ತು. ಆದರೆ ವಿಳಂಬಿತ ಮಾತುಕತೆಗಳಿಂದಾಗಿ ಮಧ್ಯಸ್ಥಿಕೆ ಪ್‌ರಕ್ರಿಯೆ ವಿಳಂಬಗೊಂಡು ಮಧ್ಯಸ್ಥಿಕೆಗಾರರು ಅವಧಿ ಮುಗಿದ ಸುಮಾರು ಮೂರು ತಿಂಗಳ ನಂತರ, ಮೇ 11, 2024ರಂದು ತೀರ್ಪು ನೀಡಿದರು.

ಪ್ರತಿವಾದಿಗಳು ತೀರ್ಪು ಶೂನ್ಯ ಎಂದು ಸೆಕ್ಷನ್ 34 ಅಡಿಯಲ್ಲಿ ಪ್ರಶ್ನಿಸಿದರೆ, ಅಪೀಲುದಾರರು ಮಧ್ಯಸ್ಥಿಕೆಗಾರರ ಅವಧಿ ವಿಸ್ತರಣೆಗೆ ಸೆಕ್ಷನ್ 29A ಅಡಿಯಲ್ಲಿ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಅವಧಿ ವಿಸ್ತರಣೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್, ಸೆಕ್ಷನ್ 29 ಎತಡವಾಗಿ ತೀರ್ಪು ನೀಡಲಾಗಿದೆ ಎಂಬ ಕಾರಣಕ್ಕೆ ಮಾತ್ರ ಅವಧಿ ವಿಸ್ತರಣೆಯ ಅರ್ಜಿಯನ್ನು ಪರಿಗಣಿಸಲು ತಡೆ ವಿಧಿಸುವುದಿಲ್ಲ ಎಂದು ಹೇಳಿತು.

Also Read
ಅರಾವಳಿ ಕುರಿತ ತನ್ನದೇ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್

ನ್ಯಾಯಾಲಯ, ಅವಧಿ ಮೀರಿ ನೀಡಿದ ತೀರ್ಪು ಜಾರಿಗೆ ಬರುವುದಿಲ್ಲ ಎಂದು ತಿಳಿಸಿದರೂ, ಇಂತಹ ತೀರ್ಪು ನೀಡಿದ ಮಧ್ಯಸ್ಥಿಕೆದಾರರ ಅಜಾಗರೂಕತೆಯಿmದಾಗಿ ನ್ಯಾಯಾಲಯದ ಅಧಿಕಾರ ಕುಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಮಧ್ಯಸ್ಥಿಕೆ ಕಾರ್ಯವಿಧಾನಗಳು ತಮ್ಮ ತಾರ್ಕಿಕ ಅಂತ್ಯಕ್ಕೆ ತಲುಪುವಂತೆ ನೋಡಿಕೊಳ್ಳುವುದೇ ಸೆಕ್ಷನ್ 29ಎ ಹಿಂದಿರುವ ಶಾಸನಾತ್ಮಕ ಉದ್ದೇಶವೆಂದು ಪೀಠ ಒತ್ತಿ ಹೇಳಿತು.

ಅಂತೆಯೇ ಮೇಲ್ಮನವಿ ಅಂಗೀಕರಿಸಿದ ಸುಪ್ರೀಂ ಕೋರ್ಟ್‌ ಅವಧಿ ವಿಸ್ತರಣೆಗೆ ಸಲ್ಲಿಸಿದ ಸೆಕ್ಷನ್ 29 ಎ ಅರ್ಜಿಯನ್ನು ಕಾನೂನು ತತ್ವಗಳ ಬೆಳಕಿನಲ್ಲಿ ಮರುಪರಿಶೀಲನೆ ನಡೆಸುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಿತು.

Kannada Bar & Bench
kannada.barandbench.com