ವಿವಾಹಿತ ದಂಪತಿ ತಮ್ಮ ಖಾಸಗಿ ಸಂಬಂಧದಲ್ಲಿ ನಡೆದುಕೊಳ್ಳುವ ರೀತಿ ಆಧರಿಸಿ ನ್ಯಾಯಾಲಯಗಳು ತೀರ್ಪು ನೀಡುವುದಿಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಪತಿ ಹೂಡಿದ್ದ ವಿಚ್ಛೇದನ ಪ್ರಕರಣ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸೌಮಿತ್ರಾ ದಯಾಳ್ ಸಿಂಗ್ ಮತ್ತು ನ್ಯಾಯಮೂರ್ತಿ ಡೋನಡಿ ರಮೇಶ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಖಾಸಗಿ ಕ್ಷಣಗಳಲ್ಲಿ ಪತ್ನಿ ಬಯಸುವುದಕ್ಕಿಂತ ಗಂಡನಿಗೆ ಬೇರೆಯ ಆದ್ಯತೆ ಇದ್ದರೆ ಅದನ್ನು ನ್ಯಾಯಾಲಯದ ಹಸ್ತಕ್ಷೇಪ ಇಲ್ಲದೆ ದಂಪತಿಯೇ ಪರಿಹರಿಸಿಕೊಳ್ಳುವುದು ಒಳಿತು ಎಂದು ಪೀಠ ಒತ್ತಿ ಹೇಳಿತು.
ತನ್ನ ವೈಯಕ್ತಿಕ ಇಚ್ಛೆ, ಆದ್ಯತೆ, ಅಭ್ಯಾಸ, ಕ್ರಿಯೆಗಳಲ್ಲಿ ತನ್ನ ಸಂಗಾತಿಯೂ ತೊಡಗಲಿ ಎಂಬುದು ಪಕ್ಷಕಾರರ ಬಯಕೆ ಇರಬಹುದು. ಕ್ರೌರ್ಯ ಅಥವಾ ನೀಚತನವನ್ನು ಒಳಗೊಳ್ಳದ ವಿನಾ ಆ ನಿಕಟ ಕ್ಷಣಗಳನ್ನು ನ್ಯಾಯಾಲಯ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಪೀಠ ವಿವರಿಸಿದೆ.
ತನ್ನ ವಿರುದ್ಧ ಕ್ರೌರ್ಯ ಎಸಗಿರುವುದರಿಂದ ವಿಚ್ಛೇದನ ನೀಡುವಂತೆ ಪತಿ ಕೋರಿದ್ದರು. ಮದುವೆಯಾದ 11 ತಿಂಗಳ ನಂತರ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ಪತಿ ಪರವಾಗಿ ತೀರ್ಪು ನೀಡಿತ್ತು. ವಿಚ್ಛೇದನ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮದುವೆಯಾದ ಒಂದು ವರ್ಷದೊಳಗೆ ವಿವಾಹ ವಿಸರ್ಜಿಸಬೇಕು ಎಂಬ ಪತಿಯ ಮನವಿ ನಿರ್ವಹಣಾಯೋಗ್ಯವಲ್ಲ ಎಂದು ವಾದಿಸಿದರು.
ಕ್ರೌರ್ಯತೆ ಇಲ್ಲವೇ ನೀಚತನದಿಂದ ವರ್ತಿಸದೇ ಇದ್ದರೆ ಹಿಂದೂ ವಿವಾಹ ಕಾಯಿದೆಯಡಿ ಮದುವೆಯಾದ ಒಂದು ವರ್ಷದೊಳಗೆ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಲಾಗದು ಎಂಬ ವಾದವನ್ನು ಹೈಕೋರ್ಟ್ ಒಪ್ಪಿಕೊಂಡಿದೆ.
ಆಗಲೂ ಕೂಡ ಮದುವೆಯಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ನಿರ್ದಿಷ್ಟ ಮನವಿ ಸಲ್ಲಿಸಿರಬೇಕು ಎಂದು ಅದು ಹೇಳಿದೆ.
"ಆ ಅರ್ಜಿಯನ್ನು ಸಲ್ಲಿಸಲಾಗದಿದ್ದರೆ, ಯಾವುದೇ ವ್ಯಾಜ್ಯ ಕಾರಣ ವಿಚಾರ ಉದ್ಭವಿಸದ ಕಾರಣ, ಅರ್ಜಿ ಸಮಯ ಕಳೆದಂತೆ ಸಮರ್ಥವಾಗುವುದಿಲ್ಲ ಏಕೆಂದರೆ ವ್ಯಾಜ್ಯ ಕಾರಣವು ಅರ್ಜಿಯ ಪ್ರಸ್ತುತಿಯ ದಿನಾಂಕವನ್ನು ಉಲ್ಲೇಖಿಸಿ ಮಾತ್ರ ಉದ್ಭವಿಸಬಹುದೇ ವಿನಾ ನಂತರವಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಈ ವಿಚಾರದ ಕುರಿತು ವಿಚಾರಣಾ ನ್ಯಾಯಾಲಯ ವ್ಯವಹರಿಸಬೇಕಾಗಿತ್ತು, ಕೌಟುಂಬಿಕ ನ್ಯಾಯಾಲಯ ಪತ್ನಿಯ ಆಕ್ಷೇಪಣೆ ವಿಚಾರವಾಗಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಪೀಠ ಹೇಳಿದೆ.
ಕ್ರೌರ್ಯದ ಕುರಿತಂತೆ ಪ್ರತಿಕ್ರಿಯಿಸಿದ ಪೀಠ, ಕೌಟುಂಬಿಕ ನ್ಯಾಯಾಲಯ ಪತಿ ವಿರುದ್ಧ ಪತ್ನಿ ದಾಖಲಿಸಿರುವ 3-4 ಪ್ರಕರಣಗಳ ಉಲ್ಲೇಖವನ್ನು ಕ್ರೌರ್ಯವೆಂದು ಪರಿಗಣಿಸಲು ಅವಲಂಬಿಸಿದೆ. ಆದರೆ ವಿಚ್ಛೇದನ ವಿರೋಧಿಸಿ ಮದುವೆಯನ್ನು ಉಳಿಸಲು ಹೋರಾಡಿರುವುದನ್ನು ಕ್ರೌರ್ಯವೆನ್ನಲಾಗದು ಎಂದು ಪೀಠ ವಿವರಿಸಿದೆ.
" ಇದು ಪ್ರತಿವಾದಿ (ಪತಿ) ಆರೋಪಿಸಿರುವ ಕ್ರೌರ್ಯವಲ್ಲ. ಇದು ವ್ಯಾಜ್ಯಕ್ಕೆ ಹೊರತಾದದ್ದು” ಎಂದು ಪೀಠ. ಹೇಳಿದೆ. ವಿಚ್ಛೇದನ ವಿರೋಧಿಸಲು ಹೆಂಡತಿ ಹೇಗೆ ಹೋರಾಡಿದಳು ಎಂಬುದನ್ನು ಎಂದಿಗೂ ಕ್ರೂರ ನಡವಳಿಕೆ ಎಂದು ಪರಿಗಣಿಸಲಾಗದು ಎಂದ ಪೀಠ ಹೀಗಾಗಿ ವಿಚ್ಛೇದನ ನೀಡಲು ಯಾವುದೇ ಆಧಾರವಿಲ್ಲ ಎಂಬುದಾಗಿ ತಿಳಿಸಿತು. ಹೆಂಡತಿಯನ್ನು ಅನಗತ್ಯವಾಗಿ ವ್ಯಾಜ್ಯಕ್ಕೆ ಎಳೆಯಲಾಗಿದೆ ಎಂದಿತು.
ಅಂತೆಯೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಅದು ಕೌಟುಂಬಿಕ ನ್ಯಾಯಾಲದ ತೀರ್ಪನ್ನು ಬದಿಗೆ ಸರಿಸಿ ಪತಿಗೆ ₹ 50 ಸಾವಿರ ದಂಡ ವಿಧಿಸಿತು.