ಭಾರತದಲ್ಲಿ ನ್ಯಾಯಾಲಯಗಳು ಕಿಕ್ಕಿರಿದು ತುಂಬಿವೆ; ಸಾಮಾಜಿಕ ಬದಲಾವಣೆಗೆ ಮಧ್ಯಸ್ಥಿಕೆ ಸಾಧನ: ನ್ಯಾ. ಡಿ ವೈ ಚಂದ್ರಚೂಡ್

ನ್ಯಾಯಾಲಯಗಳ ಮೇಲಿನ ಗೌರವದ ಕಾರಣಕ್ಕೆ ಮಾತ್ರವೇ ಮಧ್ಯಸ್ಥಿಕೆಗೆ ಮುಂದಾಗುವ ಪಕ್ಷಕಾರರ ನಡೆಯ ಬಗ್ಗೆ ಅವರು ಎಚ್ಚರಿಸಿದರು.
Justice DY Chandrachud
Justice DY Chandrachud

ಭಾರತದಲ್ಲಿನ ನ್ಯಾಯಾಲಯಗಳು ಕಿಕ್ಕಿರಿದು ತುಂಬಿದ್ದು ಮಧ್ಯಸ್ಥಿಕೆಯು ವಿವಾದಗಳನ್ನು ಪ್ರತಿಕೂಲವಲ್ಲದ ರೀತಿಯಲ್ಲಿ ಬಗೆಹರಿಸುವ ಪ್ರಮುಖ ಸಾಧನವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶುಕ್ರವಾರ ಹೇಳಿದರು.

ನ್ಯಾ. ಚಂದ್ರಚೂಡ್ ಅವರು ಪುಣೆಯ ಐಎಲ್‌ಎಸ್ ಕಾನೂನು ಕಾಲೇಜಿನಲ್ಲಿ 'ಭಾರತದಲ್ಲಿ ಮಧ್ಯಸ್ಥಿಕೆಯ ಭವಿಷ್ಯ' ಕುರಿತು ತಮ್ಮ ತಂದೆ ಹಾಗೂ ನ್ಯಾಯಮೂರ್ತಿ ವೈ ವಿ ಚಂದ್ರಚೂಡ್ ಸ್ಮಾರಕ ಉಪನ್ಯಾಸ ನೀಡಿದರು. ಇದೇ ವೇಳೆ ಅವರು ಐಎಲ್ಎಸ್ ರಾಜಿ ಸಂಧಾನ ಮತ್ತು ಮಧ್ಯಸ್ಥಿಕೆ ಕೇಂದ್ರವನ್ನು ಉದ್ಘಾಟಿಸಿದರು.

ಮಧ್ಯಸ್ಥಿಕೆಯು ಸಾಮಾಜಿಕ ಬದಲಾವಣೆ ತರಬಹುದಾಗಿದ್ದು ಸಮಾಜದ ಅಂಚಿನಲ್ಲಿರುವ ಸಮುದಾಯಗಳು ಮತ್ತು ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಬಹುದು ಎಂದು ಅವರು ಹೇಳಿದರು.

"ಭಾರತದಲ್ಲಿ ನ್ಯಾಯಾಲಯಗಳು ಮತ್ತು ನ್ಯಾಯಾಲಯದ ಕೊಠಡಿಗಳು ಭೌತಿಕವಾಗಿ ಮತ್ತು ರೂಪಾತ್ಮಕವಾಗಿ ಕಿಕ್ಕಿರಿದಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಪ್ರಕರಣಗಳ ಬಾಕಿ ಇರುವಿಕೆ ದೃಷ್ಟಿಯಿಂದ, ಮಧ್ಯಸ್ಥಿಕೆಯಂತಹ ವ್ಯಾಜ್ಯ ಪರಿಹಾರ ಕಾರ್ಯವಿಧಾನಗಳು ಪ್ರತಿಕೂಲವಲ್ಲದ ರೀತಿಯಲ್ಲಿ ನಡೆಯುವ ಪ್ರಮುಖ ಸಾಧನವಾಗಿವೆ" ಎಂದರು.

Also Read
ಇ-ಕೋರ್ಟ್‌ ಯೋಜನೆ ಮೂರನೇ ಹಂತದ ಸಿದ್ಧತೆ; ಸ್ವಂತ ಸರ್ವರ್‌ನಿಂದ ಸ್ಟ್ರೀಮಿಂಗ್‌, ರೆಕಾರ್ಡಿಂಗ್‌: ನ್ಯಾ. ಚಂದ್ರಚೂಡ್‌

ಆದರೆ ನ್ಯಾಯಾಲಯಗಳ ಮೇಲಿನ ಗೌರವದ ಕಾರಣಕ್ಕೆ ಮಾತ್ರವೇ ಮಧ್ಯಸ್ಥಿಕೆಗೆ ಮುಂದಾಗುವ ಪಕ್ಷಕಾರರ ನಡೆಯ ಬಗ್ಗೆ ಅವರು ಎಚ್ಚರಿಸಿದರು.

ದೇಶದಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರದ (ಎಡಿಆರ್) ರೂಪವಾಗಿ ಮಧ್ಯಸ್ಥಿಕೆಯನ್ನು ಸಮರ್ಥಿಸಿಕೊಂಡ ಅವರು, "ಭಾರತದಲ್ಲಿ ಮಧ್ಯಸ್ಥಿಕೆಯ ಭವಿಷ್ಯ ಎಂದರೆ ಅದಕ್ಕೆ ಸಾಮಾಜಿಕ ಬದಲಾವಣೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಇದೆ ಎನ್ನುವುದಾಗಿದೆ. ನನ್ನ ದೃಷ್ಟಿಯಲ್ಲಿ, ಮಧ್ಯಸ್ಥಿಕೆಯು ಸಾಮಾಜಿಕ ಬದಲಾವಣೆಯ ಸಾಧನವಾಗಿದ್ದು ಇದು ಸಾಂವಿಧಾನಿಕ ಮೌಲ್ಯಗಳು ಮತ್ತು ಮಾಹಿತಿಯ ಹರಿವಿನ ಮಿಶ್ರಣವಾಗಿದೆ” ಎಂದರು.

ತಮ್ಮ ತಂದೆ ನ್ಯಾ. ವೈ ವಿ ಚಂದ್ರಚೂಡ್ ಅವರು ಪುಣೆಯಲ್ಲಿ ಬೆಳಿಗ್ಗೆ ಹೊತ್ತು ಐಎಲ್‌ಎಸ್‌ ಅನ್ನು ಹೇಗೆ ತಲುಪುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾ, “"ಖಂಡಿತವಾಗಿಯೂ ಹವಾಮಾನ ಬದಲಾವಣೆ ನಮ್ಮನ್ನು ಹಿಂದಿಕ್ಕಿದೆ. ಎನ್‌ಜಿಟಿ [ರಾಷ್ಟ್ರೀಯ ಹಸಿರು ನ್ಯಾಯಮಂಡಳಿ] ನಮಗಾಗಿ ಏನಾದರೂ ಮಾಡದೆ ಇದ್ದರೆ ಇದು ಸುಧಾರಿಸದು. ಎನ್‌ಜಿಟಿ ಇಲ್ಲಿ ವರ್ಚುವಲ್‌ ವಿಧಾನದಲ್ಲಿ ಅಲ್ಲದೆ, ಖುದ್ದು ಹಾಜರಿರುವುದು ನನಗೆ ಸಂತಸ ತಂದಿದೆ” ಎಂಬುದಾಗಿ ಚಟಾಕಿ ಹಾರಿದರು.

Related Stories

No stories found.
Kannada Bar & Bench
kannada.barandbench.com