ರಾಷ್ಟ್ರಪತಿ ಆಳ್ವಿಕೆ ಹೇರಲು 356ನೇ ವಿಧಿ ದುರ್ಬಳಕೆಯಾದಾಗ ನ್ಯಾಯಾಲಯಗಳು ಕೂಡಲೇ ಕಾರ್ಯಪ್ರವೃತ್ತವಾಗಬೇಕು: ಲೂಥ್ರಾ

ಸಂವಿಧಾನದ 356ನೇ ವಿಧಿಯ ದುರುಪಯೋಗ ಕಳೆದ 75 ವರ್ಷಗಳಲ್ಲಿ ಪುನರಾವರ್ತಿತ ಸಮಸ್ಯೆಯಾಗಿದ್ದು ಪ್ರತಿ ವರ್ಷವೂ ಈ ವಿಧಿಯ ದುರ್ಬಳಕೆ ನಡೆದಿದೆ ಎಂದು ಲೂಥ್ರಾ ಹೇಳಿದರು.
Sidharth Luthra
Sidharth Luthra
Published on

ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡುವ 356ನೇ ವಿಧಿಯ ದುರುಪಯೋಗ  ನಡೆಯುವಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುವ ಅಗತ್ಯವಿದೆ ಎಂದು ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಹೇಳಿದರು.

ಭಾರತೀಯ ಸಂವಿಧಾನ ಜಾರಿಗೆ ಬಂದ 75ನೇ ವರ್ಷಾಚರಣೆ ಅಂಗವಾಗಿ ಸೋನಿಪತ್‌ನ ಒ ಪಿ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Also Read
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂನಲ್ಲಿ ಮನವಿ

ಸಂವಿಧಾನದ 356ನೇ ವಿಧಿಯ ದುರುಪಯೋಗ ಕಳೆದ 75 ವರ್ಷಗಳಲ್ಲಿ ಪುನರಾವರ್ತಿತ ಸಮಸ್ಯೆಯಾಗಿದ್ದು ಪ್ರತಿ ವರ್ಷವೂ ಈ ವಿಧಿಯ ದುರುಪಯೋಗ ನಡೆದಿದೆ. ಇದನ್ನು ತಡೆಯಲು ನ್ಯಾಯಾಂಗ ಕ್ರಮ ಕೈಗೊಳ್ಳಬೇಕು. ಆ ಮೂಲಕ ವಿಧಿ ದುರುಪಯೋಗಪಡಿಸಿಕೊಳ್ಳದಂತೆ ಬಲವಾದ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಬೇಕು ಎಂದು ಅವರು ತಿಳಿಸಿದ್ದಾರೆ.

ಲೂಥ್ರಾ ಅವರ ಭಾಷಣದ ಪ್ರಮುಖ ಸಂಗತಿಗಳು

  • ಸಂವಿಧಾನದ 356ನೇ ವಿಧಿಯ ದುರ್ಬಳಕೆ ಎಂಬುದು ಅಧಿಕಾರದ ದುರುಪಯೋಗವಲ್ಲವೇ? ಇದರ ದುರುಪಯೋಗ ತಡೆಯುವ ಸಮಯ ಬಂದಿದೆ.

  • 356ನೇ ವಿಧಿಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ  ಕೇಂದ್ರ ಸರ್ಕಾರ ಅಥವಾ ಕಾರ್ಯಾಂಗಕ್ಕೆ ರವಾನೆಯಾಗಬೇಕು.

  •  356ನೇ ವಿಧಿಗೆ ಸ್ಪಷ್ಟವಾದ ವ್ಯಾಖ್ಯಾನದ ಅಗತ್ಯವಿದೆ . ಅದರಲ್ಲಿಯೂ ಸಾಂವಿಧಾನಿಕ ಯಂತ್ರಗಳ ವೈಫಲ್ಯ ಎಂಬ ಪದಗುಚ್ಛದ ವಿಶಾಲ ವ್ಯಾಪ್ತಿಯಿಂದಾಗಿ ಅದು ಬಹುತೇಕ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

  •  ರಾಜ್ಯಪಾಲರುಗಳು ಕೇಂದ್ರ ಸರ್ಕಾರದ ಏಜೆಂಟರುಗಳಂತೆ ವರ್ತಿಸಿ ರಾಜ್ಯ ಸರ್ಕಾರಗಳ ಕೆಲಸಗಳಲ್ಲಿ ಮೂಗು ತೂರಿಸಿದಾಗ 356 ನೇ ವಿಧಿಯ ದುರುಪಯೋಗ ಉಂಟಾಗುತ್ತದೆ.

  • ರಾಜ್ಯಪಾಲರುಗಳನ್ನು ನೇರವಾಗಿ ಚುನಾಯಿಸುವ ಅವಕಾಶ ದೊರೆತಾಗ ಇಂತಹ ಹಸ್ತಕ್ಷೇಪ ಕಡಿಮೆಯಾಗಲಿದೆ.

  • ರಾಜ್ಯಪಾಲರು ತಮ್ಮ ಎಲ್ಲೆ ಮೀರದಂತೆ ಮತ್ತು ರಾಜ್ಯ ಸರ್ಕಾರಗಳ ಕಾರ್ಯಚಟುವಟಿಕೆಗಳಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸದಂತೆ ಮಾಡುವ ನಿರ್ಬಂಧಕ ವ್ಯವಸ್ಥೆ ಜಾರಿಗೆ ಬರುವ ಅಗತ್ಯವಿದೆ.  

  • ನ್ಯಾಯಾಂಗ  ಪರಿಶೀಲನೆಯ ವ್ಯಾಪ್ತಿ ಸೀಮಿತವಾಗಿದ್ದರೂ, ತುರ್ತು ಪರಿಸ್ಥಿತಿಯ ಘೋಷಣೆಯನ್ನು ಪರಿಶೀಲಿಸಲು ನ್ಯಾಯಾಲಯಗಳಿಗೆ ಅಧಿಕಾರವಿದೆ. ಆದರೂ, ನ್ಯಾಯಾಲಯಗಳು ಮೇಲ್ನೋಟದ ಪರಿಶೀಲನೆ ಮೀರಿ ತುರ್ತು ಪರಿಸ್ಥಿತಿ ಘೋಷಣೆಯ ಹಿಂದಿನ ತಾರ್ಕಿಕತೆಯನ್ನು ಪರಿಶೀಲಿಸುವುದು ಮುಖ್ಯ.

  •  ರಾಷ್ಟ್ರಪತಿ ಆಳ್ವಿಕೆ ಜಾರಿ ಚರ್ಚಿಸುವಾಗ ನ್ಯಾಯಾಂಗ ಪ್ರಕ್ರಿಯೆಗಳ ವಿಳಂಬ ಕಳವಳಕಾರಿ. ಅಧಿಕಾರ ದುರುಪಯೋಗ ತಡೆಯುವುದಕ್ಕಾಗಿ ನಿರ್ಣಾಯಕ ಪಾತ್ರವನ್ನು ನ್ಯಾಯಾಲಯಗಳು ನಿರ್ವಹಿಸಬೇಕು.

Kannada Bar & Bench
kannada.barandbench.com