ಹೇಬಿಯಸ್‌ ಕಾರ್ಪಸ್‌ ಪ್ರಕರಣಗಳನ್ನು ನಡೆಸುವಾಗ ನ್ಯಾಯಾಲಯಗಳು ಉದಾರವಾಗಿರಬೇಕು: ನಿವೃತ್ತ ನ್ಯಾ. ಮದನ್‌ ಲೋಕೂರ್‌

ದೆಹಲಿ ಹೈಕೋರ್ಟ್‌ನ ಮಹಿಳಾ ವಕೀಲರ ಒಕ್ಕೂಟ ಮತ್ತು ಡಬ್ಲುಸಿಎಲ್‌ಎ “ಸ್ವಾತಂತ್ರ್ಯದ ರಕ್ಷಣೆ” ವಿಷಯದ ಕುರಿತು ಆಯೋಜಿಸಿದ್ದ ವರ್ಚುವಲ್‌ ಸಂವಾದದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ ಲೋಕೂರ್‌ ಮಾತನಾಡಿದರು.
Justice(retd.) Madan Lokur
Justice(retd.) Madan LokurFile Photo

ಹೇಬಿಯಸ್‌ ಕಾರ್ಪಸ್‌ ರಿಟ್‌ ಮನವಿಗಳು, ಅದರಲ್ಲೂ ವಿಶೇಷವಾಗಿ ಮುನ್ನೆಚ್ಚರಿಕೆಯ ಬಂಧನಕ್ಕೆ ಸಂಬಂಧಿಸಿದ ಪ್ರಕರಣಗಳ ಕುರಿತ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಗಳು ಉದಾರವಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್‌ ಲೋಕೂರ್‌ ಹೇಳಿದ್ದಾರೆ.

ದೆಹಲಿ ಹೈಕೋರ್ಟ್‌ನ ಮಹಿಳಾ ವಕೀಲರ ಒಕ್ಕೂಟ ಮತ್ತು ಡಬ್ಲುಸಿಎಲ್‌ಎ ಶುಕ್ರವಾರ ಆಯೋಜಿಸಿದ್ದ “ಸ್ವಾತಂತ್ರ್ಯದ ರಕ್ಷಣೆ” ವಿಷಯದ ಕುರಿತ ವರ್ಚುವಲ್‌ ಸಂವಾದದಲ್ಲಿ ಅವರು ಮೇಲಿನಂತೆ ಹೇಳಿದರು.

“ನ್ಯಾಯಾಲಯಗಳು ಅದನ್ನು (ಹೇಬಿಯಸ್‌ ಕಾರ್ಪಸ್) ಉದಾರವಾಗಿ ಬಳಸಬೇಕು. ಏಕೆಂದರೆ ಮುನ್ನೆಚ್ಚರಿಕೆಯ ಬಂಧನದ ಬಗ್ಗೆ ಮಾತನಾಡುವಾಗ ವಿಚಾರಣೆ ಇಲ್ಲದೇ ವ್ಯಕ್ತಿಯನ್ನು ಬಂಧನದಲ್ಲಿಡುವ ಕುರಿತು ನೀವು ಮಾತನಾಡುತ್ತಿರುತ್ತೀರಿ” ಎಂದು ಹೇಳಿದರು.

“ಸುಪ್ರೀಂ ಕೋರ್ಟ್‌ 1950ರ ನಂತರ ನ್ಯಾಯಿಕ ಪರಿಹಾರ ನೀಡುವ ವಿಚಾರದಲ್ಲಿ ಉದಾರವಾಗಿ ನಡೆದುಕೊಂಡಿದೆ. ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಹೇಬಿಯಸ್‌ ಕಾರ್ಪಸ್‌ ರಿಟ್‌ನಲ್ಲಿ ಪರಿಹಾರ ದೊರೆತಿಲ್ಲ. ಒಂದೊಮ್ಮೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಜಾಗೊಂಡರೆ ಇದೇ ಆಧಾರದಲ್ಲಿ ಅಥವಾ ಮತ್ತಿತರ ಕಾರಣಗಳನ್ನು ಉಲ್ಲೇಖಿಸಿ ಮತ್ತೊಂದು ರಿಟ್‌ ಅರ್ಜಿಯನ್ನು ದಾಖಲಿಸಬಹುದು… ಅದನ್ನು ವಿಚಾರಣೆ ನಡೆಸಬಹುದು ಎಂದು ನ್ಯಾಯಾಲಯಗಳು ಹೇಳಿವೆ. ಒಮ್ಮೆ ರಿಟ್‌ ಅರ್ಜಿ ವಜಾಗೊಂಡರೆ ಅದೇ ಅಂತಿಮ ಎಂದಲ್ಲ. ಇದಕ್ಕೆ ಸಂಬಂಧಿಸಿದಂತೆ ಹಿಂದೆಯೂ ಹಾಗೂ ಈಗಲೂ ಸುಪ್ರೀಂ ಕೋರ್ಟ್‌ ಉದಾರವಾದ ಪ್ರತಿಕ್ರಿಯೆ ನೀಡಿದೆ. ನೀವು ಮನವಿ ಸಲ್ಲಿಸುವುದು ಬೇಡ, ನೀವು ಅಂಚೆ ಕಾಗದ ಕಳುಹಿಸಿದರೂ ಸಾಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ… ಬಂಧಿತರೇ ಅದನ್ನು ಮಾಡಬೇಕಿಲ್ಲ. ಅವರ ಸ್ನೇಹಿತರು ಅಥವಾ ಸಂಬಂಧಿಕರು ಅದನ್ನು ಸಲ್ಲಿಸಬಹುದು. ಹೇಬಿಯಸ್‌ ಕಾರ್ಪಸ್‌ ರಿಟ್‌ ಮೂಲಕ ನ್ಯಾಯಾಲಯದ ವ್ಯಾಪ್ತಿಯಲ್ಲಿ ವಿವಿಧ ರೀತಿಯಲ್ಲಿ ಮನವಿ ಸಲ್ಲಿಸಬಹುದಾಗಿದೆ” ಎಂದು ಹೇಳಿದರು.

ಅಕ್ರಮವಾಗಿ ಸಾಗಿಸಿದ ಮಕ್ಕಳನ್ನು ಬಂಧನದಲ್ಲಿಟ್ಟಿರುವ ವಿಚಾರವನ್ನು ಪಾದ್ರಿಯೊಬ್ಬರು ಎಸ್‌ಎಂಎಸ್‌ ಮೂಲಕ ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮದನ್‌ ಲೋಕೂರ್‌ ಅವರ ಗಮನಕ್ಕೆ ತಂದ ತಕ್ಷಣ ಅದನ್ನು ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನಾಗಿ ದಾಖಲಿಸಿಕೊಂಡಿದ್ದರ ಕುರಿತು ಅವರು ನೆನಪಿಸಿಕೊಂಡರು. “ನಾನು ಅದಕ್ಕೆ ವಿಶಾಲ ಮತ್ತು ವಿಸ್ತೃತವಾದ ವ್ಯಾಖ್ಯಾನ ನೀಡುತ್ತಿದ್ದೆ” ಎಂದಿದ್ದಾರೆ.

32ನೇ ವಿಧಿಯ ವ್ಯಾಪ್ತಿಯನ್ನು ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳಿಗೇ ಮಿತಿಗೊಳಿಸಬಾರದು

ವೈಯಕ್ತಿಕ ಸ್ವಾತಂತ್ರ್ಯ ಅಥವಾ ಸಾರ್ವಜನಿಕ ಮಹತ್ವದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂವಿಧಾನದ 32ನೇ ವಿಧಿಯ ಅನ್ವಯ ಸುಪ್ರೀಂ ಕೋರ್ಟ್‌ ವ್ಯಾಪ್ತಿಯನ್ನು ನಿರ್ಬಂಧಿಸಬಾರದು ಎಂದು ಮದನ್‌ ಲೋಕೂರ್‌ ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್‌ನಲ್ಲಿ 32ನೇ ವಿಧಿಯ ಅರ್ಜಿಗಳನ್ನು ನಿರುತ್ತೇಜಿಸಬೇಕು ಎಂದು ಈಚೆಗೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮೌಖಿಕವಾಗಿ ಹೇಳಿದ್ದನ್ನು ಉಲ್ಲೇಖಿಸಿ ನಿಬಂಧನೆಗಳಿಗೆ ಸಂಬಂಧಿಸಿದಂತೆ ಲೋಕೂರ್‌ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಲೋಕೂರ್‌ ಅವರು 32ನೇ ವಿಧಿಯ ಅಡಿ ಅರ್ಜಿಗಳು ಹೆಚ್ಚಾಗಿ ಸಲ್ಲಿಕೆಯಾಗಿರಬಹುದು ಮತ್ತು ಆ ಪ್ರಕರಣಗಳು ನೇರವಾಗಿ ವೈಯಕ್ತಿಕ ಸ್ವಾತಂತ್ರ್ಯ ಅಥವಾ ದೇಶಕ್ಕೆ ಅನ್ವಯಿಸುವ ಸಾರ್ವಜನಿಕ ಪ್ರಾಮುಖ್ಯತೆ ಹೊಂದಿಲ್ಲದಿರಬಹುದು ಎಂದು ಹೇಳಿದ ಅವರು ಮುಂದುವರೆದು,

“ ಆದರೆ, ಅದರಲ್ಲಿ (32ನೇ ವಿಧಿ) ವಿವಿಧ ರೀತಿಯ ಪ್ರಕರಣಗಳಿವೆ. ಉದಾಹರಣೆಗೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳೂ ಬರುತ್ತವೆ. ಹಾಗಾಗಿ, ಒಂದೊಮ್ಮೆ ಅದು ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣವಾದರೂ ನಾನು 32ನೇ ವಿಧಿಯ ಪ್ರಕರಣಗಳನ್ನು ನಿರುತ್ತೇಜಿಸುತ್ತೇನೆ ಎನ್ನುವಂತಿಲ್ಲ…” ಎಂದು ಖಚಿತವಾಗಿ ನುಡಿದರು. ಆ ಮೂಲಕ 32ನೇ ವಿಧಿಯ ಅನ್ವಯ ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳನ್ನು ಆಲಿಸಬೇಕಾದ ಮಹತ್ವವನ್ನು ತಿಳಿಸಿದರು.

ಮಾಧ್ಯಮ ವಿಚಾರಣೆ: ಮೊದಲು ಬೆಂಕಿಯನ್ನು ನೀರಿನಿಂದ ನಂದಿಸಲು ಯತ್ನಿಸಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ವಿಚಾರಣೆ ನಡೆಯುತ್ತಿರುವಾಗ ವಕೀಲರು ಹೇಗೆ ಪ್ರತಿಕ್ರಿಯಿಸಬೇಕು ಎಂಬ ವಿಚಾರವೂ ವಿಸ್ತೃತವಾಗಿ ಚರ್ಚೆಗೆ ಒಳಪಟ್ಟಿತು. ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿನ ಮಾಧ್ಯಮ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ತೀರ್ಪಿಗೆ ಬಾಕಿ ಇರುವಾಗ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು, ವಾಟ್ಸ್‌ ಆಪ್‌ ಸಂವಾದಗಳನ್ನು ಟಿವಿಯಲ್ಲಿ ಹೇಗೆ ಬಹಿರಂಗಪಡಿಸಲಾಯಿತು ಎಂಬ ವಿಚಾರವೂ ಚರ್ಚೆಯಾಯಿತು. ಒಂದು ಬದಿಯವರು ಹಾಗೆ ಮಾಡಿದಾಗ ಮತ್ತೊಂದು ಬದಿಯವರೂ ಸಹ ಅದೇ ರೀತಿಯ ಮಾಧ್ಯಮಗಳನ್ನು ಬಳಸಿಕೊಳ್ಳಬೇಕೇ ಎನ್ನುವ ಪ್ರಶ್ನೆ ಈ ವೇಳೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೂರ್‌ ಅವರು ಮೊದಲಿಗೆ ಬೆಂಕಿಯನ್ನು ನೀರಿನಿಂದ ನಂದಿಸುವುದು ಆದ್ಯತೆಯಾಗಬೇಕು ಎಂದು ಹೇಳಿದರು. ಆದರೆ, ಹಾಗಾಗಾದ ಪಕ್ಷದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಹೀಗೆ ಅಭಿಪ್ರಾಯಪಟ್ಟರು:

Also Read
[ಬ್ರೇಕಿಂಗ್] ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

“ಏನಾಗುತ್ತಿದೆ ಎಂಬುದನ್ನು ಮೊದಲು ನ್ಯಾಯಾಲಯದ ಗಮನಕ್ಕೆ ತರುವ ವಿಧಾನವನ್ನು ನಾನು ಸಲಹೆ ಮಾಡುತ್ತೇನೆ. ಎಲ್ಲವನ್ನೂ ಬಹಿರಂಗಪಡಿಸುವ ಹೇಳಿಕೆಗಳು, ವಾಟ್ಸ್‌ ಆಪ್‌ ಸಂದೇಶಗಳನ್ನು ಏಕೆ ಕಳುಹಿಸಬೇಕು, ಅವೆಲ್ಲಾ ಹೇಗೆ ಸಾರ್ವಜನಿಕ ವೇದಿಕೆಗೆ ಬರುತ್ತವೆ? ಒಂದು ವೇಳೆ ನ್ಯಾಯಾಲಯ ಇದೆಲ್ಲವನ್ನೂ ಆಲಿಸಿದ ನಂತರವೂ ಏನೂ ಮಾಡದಿದ್ದರೆ, ಆಗ ಬೆಂಕಿಯ ವಿರುದ್ಧ ಬೆಂಕಿಯಿಂದಲೇ ಹೋರಾಟ ಮಾಡುವುದನ್ನು ಬಿಟ್ಟು ಬೇರೆ ಅವಕಾಶಗಳಿಲ್ಲ. ಇದರ ಬದಲು ಮೊದಲು ನ್ಯಾಯಾಲಯಕ್ಕೆ ವಿವರಿಸುವ ನಿಲುವು ಕೈಗೊಳ್ಳಬೇಕು. ಅಷ್ಟಕ್ಕೂ ಇದೆಲ್ಲಕ್ಕೂ ನ್ಯಾಯಾಲಯ ಜವಾಬ್ದಾರಿ. ನೀವಾಗಲಿ, ಮಾಧ್ಯಮಗಳಾಗಲಿ ಜವಾಬ್ದಾರರಲ್ಲ. ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣಕ್ಕೆ ಸಂಬಂಧಿಸಿದ ಸಂದೇಶಗಳು ಟಿವಿಗೆ ಎಲ್ಲಿಂದ ಬಂದವು? ಅವುಗಳು ಪ್ರಾಸಿಕ್ಯೂಷನ್‌ ಅಥವಾ ತನಿಖಾ ಸಂಸ್ಥೆಗಳಿಂದ ಬಂದಿರಬೇಕು. ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಗೆ ಅವಕಾಶ ನೀಡುವುದು ನ್ಯಾಯಾಲಯದ ಬಾಧ್ಯತೆಯಾಗಿದೆ. ಒಂದು ವೇಳೆ ನ್ಯಾಯಾಲಯವು ಇಲ್ಲ, ನಾನು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರೆ, ಆಗ ನೀವು ಬೆಂಕಿಯ ವಿರುದ್ಧ ಬೆಂಕಿಯಿಂದ ಸೆಣೆಸಲು ಅರ್ಹರು” ಎಂದು ಹೇಳಿದರು.

Related Stories

No stories found.
Kannada Bar & Bench
kannada.barandbench.com