ದೆಹಲಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ (ಎನ್‌ಸಿಆರ್) ವಾಯು ಮಾಲಿನ್ಯ ತಡೆಗಟ್ಟಲು, ನಿಗಾ ಇಡಲು ಹಾಗೂ ವಾಯು ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಶಾಶ್ವತ ಆಯೋಗವೊಂದನ್ನು ಅಸ್ತಿತ್ವಕ್ಕೆ ತರುವ ಸಂಬಂಧ ಅಕ್ಟೋಬರ್ 28ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಬುಧವಾರ ತಡರಾತ್ರಿ ಗೆಜೆಟ್‌ನಲ್ಲಿ ಸುಗ್ರೀವಾಜ್ಞೆ ಪ್ರಕಟಿಸಲಾಗಿದೆ.
ಎನ್‌ಸಿಆರ್ ವ್ಯಾಪ್ತಿಯಲ್ಲಿ ಗಾಳಿಯ ಗುಣಮಟ್ಟದ ಮೇಲೆ ನಿಗಾ ಇಡುವ ಶಾಶ್ವತ ಸಂಸ್ಥೆ ಸ್ಥಾಪನೆಯ ಬಗ್ಗೆ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಲಾಗಿದೆ. ಕರಡು ಕಾನೂನು ಕೇಂದ್ರ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಭರವಸೆ ನೀಡಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ಕೇಂದ್ರ ಸರ್ಕಾರ ಭರವಸೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ಏಕಸದಸ್ಯ ಸಮಿತಿ ರಚಿಸುವ ಅಕ್ಟೋಬರ್ 16ರ ತನ್ನ ಆದೇಶವನ್ನು ಈಚೆಗೆ ತಡೆ ಹಿಡಿದಿತ್ತು.
ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಗಾಳಿಯ ಗುಣಮಟ್ಟ ನಿರ್ವಹಣೆ ಸಮನ್ವಯ, ಸಂಶೋಧನೆ, ಸಮಸ್ಯೆಗಳ ಗುರುತಿಸುವಿಕೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಸಂಸ್ಥೆ ಸೃಷ್ಟಿಸುವ ಕುರಿತು ತಡರಾತ್ರಿಯಲ್ಲಿ ಹೊರಡಿಸಲಾದ ಕಾರ್ಯಾದೇಶದಲ್ಲಿ ವಿವರಿಸಲಾಗಿದೆ. "ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ ಮತ್ತು ಸುತ್ತಲಿನ ಪ್ರದೇಶಗಳ ವಾಯು ಗುಣಮಟ್ಟ ನಿರ್ವಹಣಾ ಆಯೋಗ" ಎಂದು ಇದನ್ನು ಹೆಸರಿಸಲಾಗಿದೆ.
ಎನ್‌ಸಿಆರ್ ಮತ್ತು ಸುತ್ತಲಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ನಿರ್ವಹಣೆಯ ಉಸ್ತುವಾರಿ ಗಮನಿಸಲಿರುವ ಆಯೋಗಕ್ಕೆ ಕೇಂದ್ರ ಸರ್ಕಾರ ಅಧ್ಯಕ್ಷರನ್ನು ನೇಮಿಸಲಿದ್ದು, ಅದು ಹದಿನೆಂಟು ಸದಸ್ಯರ ಸಮಿತಿಯನ್ನು ಒಳಗೊಂಡಿರಲಿದೆ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ. ಆಯೋಗದ ಪ್ರಧಾನ ಕಚೇರಿಯು ದೆಹಲಿಯಲ್ಲಿರಲಿದ್ದು, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಪ್ರತಿನಿಧಿಗಳು ಆಯೋಗದಲ್ಲಿ ಇರಲಿದ್ದಾರೆ.
ವಾಯು ಮಾಲಿನ್ಯ ತಹಬದಿಯಲ್ಲಿ ಇಡಲು ನಿರ್ದೇಶನ ನೀಡುವುದು ಮತ್ತು ಈ ಸಂಬಂಧ ದಾಖಲಾಗುವ ದೂರುಗಳನ್ನು ಪರಿಗಣಿಸುವ ಸಂಬಂಧ ಸಮಿತಿಯನ್ನು ಸಶಕ್ತಗೊಳಿಸಲಾಗುವುದು. ಕಲುಷಿತ ಗಾಳಿಯ ಹೊರಸೂಸುವಿಕೆ ತಡೆಯುವ ಮೂಲಕ ಗಾಳಿಯ ಗುಣಮಟ್ಟವನ್ನು ಉತ್ತಮ ರೀತಿಯಲ್ಲಿ ಇಡುವುದಕ್ಕೆ ಸಂಬಂಧಿಸಿದಂತೆ ನಿಯಮಗಳು ಮತ್ತು ದಂಡ ವಿಧಿಸುವ ಅಧಿಕಾರವನ್ನೂ ಆಯೋಗ ಒಳಗೊಂಡಿರಲಿದೆ.
ನ್ಯಾಯಾಲಯದ ಆದೇಶದ ಅನ್ವಯ ಹಿಂದೆ ಸ್ಥಾಪಿಸಲಾದ ಎಲ್ಲಾ ಸಂಸ್ಥೆ ಮತ್ತು ಪ್ರಾಧಿಕಾರಗಳನ್ನು ಆಯೋಗವು ರದ್ದುಗೊಳಿಸಲಿದ್ದು (ಸೂಪರ್ ಸೀಡ್), ಸದರಿ ಆಯೋಗವು ವಾಯು ಗುಣಮಟ್ಟ ನಿರ್ವಹಣೆಗೆ ಸಂಬಂಧಿಸಿದಂತೆ ವಿಶೇಷಾಧಿಕಾರ ವ್ಯಾಪ್ತಿ ಹೊಂದಿರಲಿದೆ ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯಲ್ಲಿ ವಿವರಿಸಿದೆ. ಆಯೋಗ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ನಡುವಿನ ಆದೇಶ ಮತ್ತು ನಿರ್ದೇಶನದ ನಡುವೆ ತಿಕ್ಕಾಟ ಸೃಷ್ಟಿಯಾದರೆ ಆಯೋಗದ ಆದೇಶ ಸಿಂಧುತ್ವ ಸಾಧಿಸಲಿದೆ ಎಂದು ಹೇಳಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠವು ಇಂದು ಗಾಳಿಯ ಗುಣಮಟ್ಟ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲಿದೆ.