ವಿಕಲಚೇತನ ಮಕ್ಕಳು ಎದುರಿಸುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ನ್ಯಾಯಾಂಗ, ಪೊಲೀಸ್‌ ವ್ಯವಸ್ಥೆ ಸಿದ್ಧವಾಗಿಲ್ಲ: ಸಿಜೆಐ

ಆನುವಂಶಿಕ ಖಾಯಿಲೆಯೊಂದಿಗೆ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ ಸಾಕು ಪೋಷಕರಾಗಿ ತಮ್ಮ ವೈಯಕ್ತಿಕ ಅನುಭವಗಳನ್ನು ಸಹ ಸಿಜೆಐ ಸಮಾರಂಭದಲ್ಲಿ ಹಂಚಿಕೊಂಡರು.
CJI D Y Chandrachud
CJI D Y Chandrachud
Published on

ವಿಕಲಚೇತನ ಮಕ್ಕಳು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ದೇಶದ ನ್ಯಾಯಾಂಗ ಮತ್ತು ಕಾನೂನು ಸಂಸ್ಥೆಗಳು ಸಮರ್ಪಕವಾಗಿ ಸಜ್ಜುಗೊಂಡಿಲ್ಲ, ಸಂವೇದನಾಶೀಲವಾಗಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶನಿವಾರ ಬೇಸರ ವ್ಯಕ್ತಪಡಿಸಿದರು.

ಮಕ್ಕಳ ರಕ್ಷಣೆ ಕುರಿತ ರಾಷ್ಟ್ರೀಯ ವಾರ್ಷಿಕ ಪಾಲುದಾರರ ಸಮಾಲೋಚನಾ ಸಮಾರಂಭದಲ್ಲಿ ಸಿಜೆಐ ಮುಖ್ಯ ಭಾಷಣ ಮಾಡುವ ವೇಳೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಒಂದು ರಾಷ್ಟ್ರವಾಗಿ ನಾವು ವಿಕಲಚೇತನ ಮಕ್ಕಳ ಅಗತ್ಯಗಳನ್ನು ನಿಭಾಯಿಸಲು ನಮ್ಮ ನ್ಯಾಯ ಸಂಸ್ಥೆಗಳು, ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಮತ್ತು ವಕೀಲರನ್ನು ಸಿದ್ಧಪಡಿಸಿಲ್ಲ ಎಂದು ಅವರು ಹೇಳಿದರು. "ನ್ಯಾಯಿಕ ವ್ಯವಸ್ಥೆಯಲ್ಲಿ ವಿಕಲಚೇತನ ಮಕ್ಕಳ ಅಗತ್ಯಗಳನ್ನು ನಿರ್ವಹಿಸಲು ನಾವು ನಿಜವಾಗಿಯೂ ಸಜ್ಜುಗೊಂಡಿದ್ದೇವೆಯೇ? ಅಂತಹ ಮಕ್ಕಳು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ನಾವು ನಮ್ಮ ನ್ಯಾಯ ಸಂಸ್ಥೆಗಳು, ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳನ್ನು ಸಿದ್ಧಪಡಿಸಿದ್ದೇವೆಯೇ. ದುಃಖಕರವೆಂದರೆ ಇದಕ್ಕೆ ಉತ್ತರ ಇಲ್ಲ" ಎಂದು ಸಿಜೆಐ ಹೇಳಿದರು.

ಆದ್ದರಿಂದ, ನ್ಯಾಯ ವ್ಯವಸ್ಥೆಯೊಳಗಿನ ವೃತ್ತಿಪರರಿಗೆ ಈ ಮಕ್ಕಳ ಸೂಕ್ಷ್ಮ ದೋಷಗಳನ್ನು ಗ್ರಹಿಸಲು ನಿರಂತರ ತರಬೇತಿ ಮತ್ತು ಸಂವೇದನೆಯ ಅಗತ್ಯವಿರುತ್ತದೆ. "ನ್ಯಾಯ ವ್ಯವಸ್ಥೆಯು ಈ ಮಕ್ಕಳ ಸೂಕ್ಷ್ಮ ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಲು ನಿರಂತರ ತರಬೇತಿಯ ಅಗತ್ಯವಿದೆ. ಅದರ ಬಗ್ಗೆ ಅವರನ್ನು ಸಂವೇದನಾಶೀಲಗೊಳಿಸಿ ಆಗ ಇದು ನ್ಯಾಯ ವ್ಯವಸ್ಥೆಯೊಳಗೆ ಮಕ್ಕಳು ಮರುಸಂತ್ರಸ್ತರಾಗುವುದನ್ನು ಮಿತಿಗೊಳಿಸುತ್ತದೆ ಹಾಗೂ ಅಂತಹ ಪ್ರಕರಣಗಳನ್ನು ಸಹಾನುಭೂತಿಯಿಂದ ನಿರ್ವಹಿಸುವುದನ್ನು ಖಾತರಿಪಡಿಸುತ್ತದೆ" ಎಂದು ಅವರು ಹೇಳಿದರು.

ಗಮನಾರ್ಹ ಸಂಗತಿಯೆಂದರೆ, ಅಂಗವಿಕಲರ ಹಕ್ಕುಗಳ ಕಾಯಿದೆ, 2016 ಮತ್ತು ಬಾಲ ನ್ಯಾಯಿಕ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ (ಜೆಜೆ ಕಾಯಿದೆ) ರೀತಿಯ ಕಾನೂನುಗಳು ಅಂಗವೈಕಲ್ಯತೆ ಹೊಂದಿರುವ ಮಕ್ಕಳನ್ನು ಘನತೆಯಿಂದ ನಡೆಸಿಕೊಳ್ಳುವುದನ್ನು ಖಾತರಿ ಪಡಿಸಿದ್ದರೂ ಈ ಶಾಸನಗಳ ದಂಡನಾತ್ಮಕ ಧೋರಣೆಗಳು ತಡೆಯಾಗಿಯೇ ಪರಿಣಮಿಸಿವೆ ಎಂದು ಸಿಜೆಐ ಅಭಿಪ್ರಾಯಪಟ್ಟರು.

"ಈ ಶಿಕ್ಷಾಧಾರಿತ ವಿಧಾನವು ನಿಂದನೆ ಅಥವಾ ನಿರ್ಲಕ್ಷ್ಯದ ಮೂಲ ಕಾರಣಗಳನ್ನು ಪರಿಹರಿಸುವುದಿಲ್ಲ. ಅದೇ ರೀತಿ, ಕಾನೂನಿನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ಮಗುವಿಗೆ ಸೂಕ್ತ ಬೆಂಬಲ ಅಥವಾ ಪುನರ್ವಸತಿಯನ್ನು ಒದಗಿಸುವುದಿಲ್ಲ. ಈ ಕಾನೂನುಗಳು ಅಂಗವೈಕಲ್ಯತೆ ಹೊಂದಿರುವ ಮಕ್ಕಳ ದೌರ್ಬಲ್ಯವನ್ನು ಒಪ್ಪಿಕೊಂಡರೂ, ವಾಸ್ತವ ಜಗತ್ತಿನಲ್ಲಿ ಅವುಗಳ ಪ್ರಭಾವವು ಬಹುತೇಕವಾಗಿ ಸೀಮಿತವಾಗಿರುತ್ತವೆ. ಇವು ಹೆಚ್ಚು ಪ್ರತಿಕ್ರಿಯಾತ್ಮಕವಾಗಿದ್ದು, ಪೂರ್ವಭಾವಿ ತಡೆಗಟ್ಟುವಿಕೆ, ಸೂಕ್ತ ಬೆಂಬಲ ಮತ್ತು ಪುನರ್ವಸತಿಯಂತಹ ಕ್ರಮಗಳಿಗಿಂತ ಹೆಚ್ಚಾಗಿ ಅಪರಾಧದ ನಂತರದ ದಂಡಗಳಿಗೆ ಹೆಚ್ಚಿನ ಒತ್ತು ನೀಡುತ್ತವೆ," ಎಂದು ಸಿಜೆಐ ಅಭಿಪ್ರಾಯಪಟ್ಟರು.

ಇದೇ ವೇಳೆ ಸಿಜೆಐ, ನೆಮಲೈನ್ ಮಯೋಪತಿ ಎಂದು ಕರೆಯಲ್ಪಡುವ ಆನುವಂಶಿಕ ಖಾಯಿಲೆಯೊಂದಿಗೆ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ ಸಾಕು ಪೋಷಕರಾಗಿರುವ ತಮ್ಮ ವೈಯಕ್ತಿಕ ಅನುಭವದ ವಿವರಗಳನ್ನು ಸಹ ಹಂಚಿಕೊಂಡರು.

"ವೈದ್ಯರು, ಆರೈಕೆದಾರರು ಮತ್ತು ವಿಶೇಷವಾಗಿ ಅವರ ಪೋಷಕರಲ್ಲಿ ಈ ಸ್ಥಿತಿಯ ಬಗ್ಗೆ ಜ್ಞಾನದ ಕೊರತೆಯಿತ್ತು. ಭಾರತದ ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿಯೂ ಈ ಕುರಿತು ಯಾವುದೇ ಪರೀಕ್ಷಾ ಸೌಲಭ್ಯವಿರಲಿಲ್ಲ. ಲಕ್ನೋದ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯು ನೋವು ನಿವಾರಕವನ್ನು ನೀಡುವ ಮೂಲಕ ಅಂಗಾಂಶಗಳ ಭಾಗವನ್ನು ಇಬ್ಬರು ಮಕ್ಕಳಿಂದಲೂ ತೆಗೆದುಹಾಕಲಾಗುವುದು ಎಂದು ನಮಗೆ ತಿಳಿಸಿದರು. ಈ ವೇಳೆ ನನ್ನ ತಂಗಿ ಈ ನೋವು ಅನುಭವಿಸಲು ಬಿಡಬೇಡಿ ಎಂದು ಹಿರಿಯವಳು ಹೇಳಿದಳು. ಈ ಇಬ್ಬರಿಗೂ ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದಾಗ್ಯೂ ಅವರು ಅಲಹಾಬಾದ್‌ನ ತಮ್ಮ ಮನೆಯಲ್ಲಿ ಬ್ಯಾಗ್‌ಗಳನ್ನು ಹೊಂದಿದ್ದರು. ಅಲ್ಲಿ ಅವರು ಮನೆಯಲ್ಲಿಯೇ ಶಾಲೆಗೆ ಹೋಗುವ ಆಟವಾಡುತ್ತಿದ್ದರು. ನಾವು ಒಮ್ಮೆ ದೆಹಲಿಗೆ ಬಂದ ನಂತರ ಆಟಿಸಂಗೆ (ಕಲಿಕೆ ಮತ್ತು ಸಂವಹನ ಸಾಮರ್ಥ್ಯಕ್ಕೆ ತೊಡಕಾಗುವ ನ್ಯೂನತೆ) ಸಂಬಂಧಿಸಿದ ತಮನ್ನಾ ಶಾಲೆಗೆ ಕರೆದೊಯ್ದೆವು. ಆಗ ಅವರು ಆ ವಿಭಾಗಕ್ಕೆ ಸೇರುವವರಲ್ಲ ಎನ್ನುವುದು ತಿಳಿಯಿತು. ಅವರಿಬ್ಬರೂ ತೀಕ್ಷ್ಣಮತಿಗಳಾಗಿದ್ದು ಕೇವಲ ಅನುವಂಶೀಯ ನ್ಯೂನತೆ ಹೊಂದಿದ್ದರು. ನಾವು ಇತರ ಶಾಲೆಗಳನ್ನು ಎಡತಾಕಿದಾಗ, ಅಲ್ಲಿನ ಪ್ರಾಂಶುಪಾಲರು ಮತ್ತು ಶಿಕ್ಷಕರು ಈ ಮಕ್ಕಳು ಅಲ್ಲಿ ಕೆಲ ಸಂಗತಿಗಳನ್ನು (ಮೂದಲಿಕೆ, ಹೀಯಾಳಿಸುವಿಕೆ ಇತ್ಯಾದಿ) ಎದುರಿಸಬೇಕಾಗಬಹುದು ಎನ್ನುವ ಆತಂಕ ವ್ಯಕ್ತಪಡಿಸಿದರು. ಅಂತಿಮವಾಗಿ ನಮ್ಮ ಸಂಸ್ಕೃತಿ ಶಾಲೆಯು ನಮ್ಮೆಲ್ಲ ಚಿಂತೆಗಳನ್ನು ದೂರಮಾಡಿತು," ಎಂದು ಸಿಜೆಐ ವಿಶೇಷ ಮಕ್ಕಳ ಪೋಷಕರಾಗಿ ತಾವು ಎದುರಿಸಿದ ಸವಾಲುಗಳಿಗೆ ದನಿಯಾದರು.

Kannada Bar & Bench
kannada.barandbench.com