ಮೊಹರು ಮಾಡಿದ ಲಕೋಟೆಯಲ್ಲಿ ಮಾಹಿತಿ ಸಲ್ಲಿಸಲು ದಾವೆದಾರರಿಗೆ ನ್ಯಾಯಾಲಯಗಳು ಅನುಮತಿಸಬಾರದು: ಬಾಂಬೆ ಹೈಕೋರ್ಟ್

ಪ್ರಮಾಣಪತ್ರದ ಮಾಹಿತಿಯನ್ನು ಬಹಿರಂಗಪಡಿಸಲು ನ್ಯಾಯಾಲಯ ಪಕ್ಷಕಾರರಿಗೆ ನಿರ್ದೇಶಿಸಿದಾಗ ಯಾವುದನ್ನು ಬಹಿರಂಗಪಡಿಸಬೇಕು ಅಥವಾ ಯಾವುದನ್ನು ಬಹಿರಂಗಪಡಿಸಬಾರದು ಎಂಬುದನ್ನು ಅವರು ಎಂದಿಗೂ ನಿರ್ಧರಿಸುವಂತಿಲ್ಲ ಎಂದ ಪೀಠ.
Bombay High Court
Bombay High Court
Published on

ಮೊಹರು ಮಾಡಿದ ಲಕೋಟೆಯಲ್ಲಿ ದಾವೆದಾರರಿಂದ ಮಾಹಿತಿ ಇಲ್ಲವೇ ದಾಖಲೆಗಳನ್ನು ನ್ಯಾಯಾಲಯಗಳು ಸ್ವೀಕರಿಸುವ ಕ್ರಮಕ್ಕೆ ಬಾಂಬೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ  [ಸೋನಾಲಿ ತಂಡ್ಲೆ ಮತ್ತು ರಂಕಾ ಲೈಫ್‌ಸ್ಟೈಲ್ ವೆಂಚರ್ಸ್ ಇನ್ನಿತರರ ನಡುವಣ ಪ್ರಕರಣ ಹಾಗೂ ಸಂಬಂಧಿತ ಪ್ರಕರಣಗಳು].

ನ್ಯಾಯಾಂಗ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ತತ್ವಗಳನ್ನು ಉಲ್ಲಂಘಿಸುವುದರಿಂದ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಕಾರರನ್ನು ಪೂರ್ವಾಗ್ರಹ ಪೀಡಿತರನ್ನಾಗಿ ಮಾಡುವುದರಿಂದ ನ್ಯಾಯಾಲಯಗಳು ಅದಕ್ಕೆ ಅನುಮತಿ ನೀಡಬಾರದು ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ಕಮಲ್ ಖಾತಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.   

Also Read
ವರದಕ್ಷಿಣೆ ಸಾವಿಗೆ ಗಂಡನ ವಿವಾಹೇತರ ಸಂಬಂಧ ಕಾರಣವೆಂದು ಪರಿಗಣಿಸಲಾಗದು: ದೆಹಲಿ ಹೈಕೋರ್ಟ್

“ಯಾವುದೇ ದಾವೆದಾರರು ನ್ಯಾಯಾಲಯದ ದಾಖಲೆಗಳನ್ನು, ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವ ಮೂಲಕ ಎದುರು ಪಕ್ಷಕಾರರಿಗೆ ಅನುಕೂಲ ಉಂಟು ಮಾಡುವಂತಿಲ್ಲ. ಯಾವುದೇ ಪಕ್ಷಕಾರರು ಉಳಿದ ಪಕ್ಷಕಾರರು ಪೂರ್ವಾಗ್ರಹಪೀಡಿತರಾಗುವಂತೆ ಅಂತಹ ಮುಚ್ಚಿದ ಲಕೋಟೆಯನ್ನು ಅವಲಂಬಿಸಬಾರದು ಹಾಗೂ ಅದಕ್ಕೆ ನ್ಯಾಯಾಲಯ  ಅನುಮತಿ ನೀಡಬಾರದು. ಹಾಗೆ ಮಾಡುವುದು ನ್ಯಾಯಸಮ್ಮತತೆ, ಮುಕ್ತತೆ ಹಾಗೂ ಪಾರದರ್ಶಕತೆಗೆ ಎರವಾಗುತ್ತದೆ. ಈ ಪೂರ್ಣಪ್ರಮಾಣದ ವಿನಾಶಕಾರಿ ಅಭ್ಯಾಸವನ್ನು ಹುಗಿದುಹಾಕಲು ಇದು ಸಕಾಲ” ಎಂದು ನ್ಯಾಯಾಲಯ ತಿಳಿಸಿದೆ.

ಪ್ರಮಾಣಪತ್ರದ ಮಾಹಿತಿಯನ್ನು ಬಹಿರಂಗಪಡಿಸಲು ನ್ಯಾಯಾಲಯ  ಪಕ್ಷಕಾರರಿಗೆ ನಿರ್ದೇಶಿಸಿದಾಗ ಯಾವುದನ್ನು ಬಹಿರಂಗಪಡಿಸಬೇಕು ಅಥವಾ ಯಾವುದನ್ನು ಬಹಿರಂಗಪಡಿಸಬಾರದು ಎಂಬುದನ್ನು ಅವರು ಎಂದಿಗೂ ನಿರ್ಧರಿಸುವಂತಿಲ್ಲ‌ ಎಂದು ಕೂಡ  ಅದು ಹೇಳಿದೆ.

Also Read
ನ್ಯಾಯಾಲಯಕ್ಕೆ ಸಲ್ಲಿಸುವ ಮುಚ್ಚಿದ ಲಕೋಟೆ ಪಾರದರ್ಶಕತೆಗೆ ವಿರುದ್ಧ, ಅದಕ್ಕೆ ಅಂತ್ಯ ಹಾಡಬೇಕಿದೆ: ಸುಪ್ರೀಂ ಕೋರ್ಟ್

ಫ್ಲಾಟ್ ಹಂಚಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಎಂಎಚ್‌ಎಡಿಎ) ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯ ಆದೇಶ ಪ್ರಶ್ನಿಸಿ ಸೋನಾಲಿ ತಂಡ್ಲೆ ಎಂಬವವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.

ಪ್ರಕರಣದ ಸಂಬಂಧ ಫ್ಲಾಟ್‌ಗಳನ್ನು ರೂಪಿಸಿದ್ದ ಡೆವಲಪರ್‌ಗೆ ಮಾರಾಟವಾಗದ ಫ್ಲಾಟ್‌ಗಳು ಮತ್ತು ಹಣಕಾಸು ವರ್ಗಾವಣೆ ಮಾಹಿತಿ ಇರುವ ಪ್ರಮಾಣಪತ್ರವನ್ನು  ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸಮನ್ವಯ ಪೀಠ ಈ ಹಿಂದೆ ಸೂಚಿಸಿತ್ತು. ಈ ಆದೇಶಕ್ಕೆ ಇದೀಗ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

Kannada Bar & Bench
kannada.barandbench.com