ಕೋವಿಡ್ ಉಲ್ಬಣ: ರೆಮ್‌ಡಿಸಿವಿರ್‌ ಔಷಧಕ್ಕಾಗಿ ಶತಪ್ರಯತ್ನ ಎಂದು ಗುಜರಾತ್ ಹೈಕೋರ್ಟ್‌ಗೆ ತಿಳಿಸಿದ ರಾಜ್ಯ ಸರ್ಕಾರ

ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯಾಲಯಕ್ಕೆ ಸಹಾಯ ಮಾಡುವುದಾಗಿ ಗುಜರಾತ್ ಹೈಕೋರ್ಟ್ ವಕೀಲರ ಸಂಘ (ಜಿಎಚ್‌ಸಿಎಎ) ಕೂಡ ಅರ್ಜಿ ಸಲ್ಲಿಸಿದೆ.
Gujarat High Court
Gujarat High Court

ಕೋವಿಡ್‌ ಉಲ್ಬಣ ಕುರಿತಂತೆ ಗುಜರಾತ್‌ ಹೈಕೋರ್ಟ್‌ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಬದ್ಧವಾಗಿರುವುದಾಗಿ ತಿಳಿಸಿದೆ. ಸಂಘಟಿತ ಮತ್ತು ವ್ಯವಸ್ಥಿತ ಸ್ಪಂದನೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಅದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಭಾರ್ಗವ್ ಡಿ ಕರಿಯಾ ಅವರಿದ್ದ ಪೀಠ ಏಪ್ರಿಲ್ 12 ರಿಂದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಪ್ರಕರಣ ಕೈಗೆತ್ತಿಕೊಂಡ ದಿನವೇ ಕೋರ್‌ ಕಮಿಟಿ ಸಭೆ ನಡೆಸಲಾಗಿದ್ದು ಬಳಿಕ ಹೊರಡಿಸಿದ ಅಧಿಸೂಚನೆಯಲ್ಲಿ ಕೈಗೊಳ್ಳಬೇಕಾದ ತ್ವರಿತ ಕ್ರಮಗಳ ಕುರಿತು ಸೂಚಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಜನಯಂತಿ ರವಿ ಅವರು ಸರ್ಕಾರ ಕೈಗೊಂಡ ವಿವಿಧ ಕ್ರಮಗಳನ್ನು ನ್ಯಾಯಾಲಯಕ್ಕೆ ವಿವರಿಸಿದರು. ಅಲ್ಲದೆ ಏಪ್ರಿಲ್ 11 ರ ಹೊತ್ತಿಗೆ 30,680 ಸಕ್ರಿಯ ಕೋವಿಡ್‌ ಪ್ರಕರಣಗಳು ಕಂಡು ಬಂದಿದ್ದು 4,855 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ರೆಮ್‌ಡಿಸಿವಿರ್‌ ಔಷಧ ಕೊರತೆ ಕುರಿತಂತೆ ಹೈಕೋರ್ಟ್‌ ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯೆ ನೀಡಿದ ರಾಜ್ಯ ಸರ್ಕಾರ ರೆಮ್‌ಡಿಸಿವಿರ್‌ ಔಷಧ ಕೋವಿಡ್‌ಗೆ ನೇರ ಚಿಕಿತ್ಸೆ ನೀಡಲಾಗದು. ಇದನ್ನು ಹೆಪಟೈಟಿಸ್ ಸಿ ಮತ್ತು ಎಬೋಲಾ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಕೊರೊನಾ ವಿರುದ್ಧ ಹೋರಾಡಲು ಇದನ್ನು ಪ್ರಸ್ತುತ ಸೋಂಕು ಪ್ರತಿರೋಧಕ ಔಷಧವಾಗಿ ಬಳಸಲಾಗುತ್ತಿದೆ. ತೀವ್ರ ಜ್ವರ ಮತ್ತು ಆಮ್ಲಜನಕದ ಕೊರತೆಯಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಮಾತ್ರ ಇದನ್ನು ನೀಡಲು ಸಲಹೆ ನೀಡಲಾಗಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವ ಅವಧಿ ಕಡಿಮೆ ಆಗುತ್ತದೆ ಎಂದು ವರದಿ ತಿಳಿಸಿದೆ. ಆದರೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಕೊರೊನಾ ರೋಗಿಗಳನ್ನು ರೆಮ್‌ಡಿಸಿವಿರ್‌ ಬದುಕುಳಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸರ್ಕಾರ ಉತ್ತರಿಸಿದೆ.

Also Read
[ಕೋವಿಡ್‌ ನಡುವೆ ಪಶ್ಚಿಮ ಬಂಗಾಳ ಚುನಾವಣೆ] ಉದಾಸೀನ, ಬೇಜವಾಬ್ದಾರಿ ನಡವಳಿಕೆಗೆ ಅವಕಾಶವಿಲ್ಲ: ಕಲ್ಕತ್ತಾ ಹೈಕೋರ್ಟ್‌

ಇದೇ ವೇಳೆ ಕಳೆದ ಕೆಲ ತಿಂಗಳುಗಳಲ್ಲಿ ಉತ್ಪಾದನೆ ಕುಸಿತದಿಂದಾಗಿ ರಾಜ್ಯದಲ್ಲಿ ರೆಮ್‌ಡೆಸಿವಿರ್ ಕೊರತೆ ಹೆಚ್ಚಿದೆ ಎಂದು ಹೇಳಿರುವ ಸರ್ಕಾರ ‌ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೆಮ್‌ಡಿಸಿವಿರ್ ಲಭ್ಯತೆ ಇಲ್ಲದಿದ್ದರೆ ಸರ್ಕಾರ ದಾಸ್ತಾನು ಮಾಡುವಷ್ಟು ಪ್ರಮಾಣದಲ್ಲಿ ಅದನ್ನು ಸಂಗ್ರಹಿಸುವುದು ಕಷ್ಟ ಎಂದು ವಿವರಿಸಿದೆ.

ದೇಶದಲ್ಲಿ ಕೇವಲ ಏಳು ಔಷಧ ಕಂಪೆನಿಗಳು ರೆಮ್‌ಡಿಸಿವಿರ್‌ ತಯಾರಿಸುತ್ತಿವೆ ಎಂದು ಅದು ತಿಳಿಸಿದ್ದು ರೆಮ್‌ಡಿಸಿವಿರ್‌ ಬೆಲೆಯನ್ನು ಔಷಧ ತಯಾರಕರೇ ನಿಗದಿಪಡಿಸುತ್ತಿರುವುದರಿಂದ ಬೆಲೆಯಲ್ಲಿ ಭಾರಿ ವ್ಯತ್ಯಯವಾಗುತ್ತಿದೆ. ಔಷಧವನ್ನು ಅಕ್ರಮವಾಗಿ ಸಂಗ್ರಹಿಡುತ್ತಿರುವವರು ಮತ್ತು ಕಾಳಸಂತೆಕೋರರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು ಇದುವರೆಗೆ ಆರು ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ಅದು ಮಾಹಿತಿ ನೀಡಿದೆ.

ಎಲ್ಲಾ ಮೂಲಗಳಿಂದ ರೆಮ್ಡೆಸಿವಿರ್ ಚುಚ್ಚುಮದ್ದಿನ ದಾಸ್ತಾನು ಸಂಗ್ರಹಿಸಲು ಸರ್ಕಾರ ಇನ್ನಿಲ್ಲದಂತೆ ಯತ್ನಿಸುತ್ತಿದೆ. ಏಪ್ರಿಲ್ 1ರಿಂದ 12ರವರೆಗೆ ನೂರು ಮಿಲಿ ಗಾತ್ರದ 4 ಲಕ್ಷ ಬಾಟಲುಗಳನ್ನು ಪಡೆಯಲು ಯಶಸ್ವಿಯಾಗಿದ್ದು ಇನ್ನೂ 3 ಲಕ್ಷ ಬಾಟಲುಗಳಿಗೆ ಆದೇಶಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ವಿವರಿಸಿದೆ.

ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ ಗುಜರಾತ್‌ ವಕೀಲರ ಸಂಘ

ಮಧ್ಯೆ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯಾಲಯಕ್ಕೆ ಸಹಾಯ ಮಾಡುವುದಾಗಿ ಗುಜರಾತ್ ಹೈಕೋರ್ಟ್ ವಕೀಲರ ಸಂಘ (ಜಿಎಚ್‌ಸಿಎಎ) ಕೂಡ ಅರ್ಜಿ ಸಲ್ಲಿಸಿದೆ. ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಲಭ್ಯವಿರುವ ಸಂಪನ್ಮೂಲ ಹಾಗೂ ಮೂಲಸೌಕರ್ಯಗಳಿಂದ ಕೋವಿಡ್‌ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರಿಯಾದ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ. ನ್ಯಾಯಾಲಯ ನೀಡುವ ಮಾರ್ಗಸೂಚಿಗಳು ದುಡುಕಿನ ಕ್ರಮವಾಗಿರಬಾರದು ಮತ್ತು ಮಾಧ್ಯಮಗಳು ನೀಡುವ ತಪ್ಪು ಮಾಹಿತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು. ಜನಜಾಗೃತಿಗಾಗಿ ಮತ್ತು ಸರ್ಕಾರದ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಖ್ಯಾತನಾಮರನ್ನು ಹಾಗೂ ಶಾಸಕರನ್ನು ಬಳಸಿಕೊಳ್ಳಬೇಕು. ಪೋರ್ಟಲ್‌ ಬಳಸಿ ರಿಯಲ್‌ ಟೈಂ ವಿಧಾನದಲ್ಲಿ ನಿಖರ ಮಾಹಿತಿ ಒದಗಿಸಲು, ಆಸ್ಪತ್ರೆಗಳು ವೀಡಿಯೊ ಕರೆ ಸೌಲಭ್ಯ ಬಳಸಿಕೊಳ್ಳಲು ಹಾಗೂ ಕೋವಿಡ್‌ ಚಿಕಿತ್ಸೆ ಶುಲ್ಕ ನಿಯಂತ್ರಿಸಲು ನ್ಯಾಯಾಲಯ ಮುಂದಾಗಬೇಕು ಎಂದು ಅದು ಹೇಳಿದೆ.

Related Stories

No stories found.
Kannada Bar & Bench
kannada.barandbench.com