[ಕೋವಿಡ್‌ ನಡುವೆ ಪಶ್ಚಿಮ ಬಂಗಾಳ ಚುನಾವಣೆ] ಉದಾಸೀನ, ಬೇಜವಾಬ್ದಾರಿ ನಡವಳಿಕೆಗೆ ಅವಕಾಶವಿಲ್ಲ: ಕಲ್ಕತ್ತಾ ಹೈಕೋರ್ಟ್‌

ಕೇಂದ್ರ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿ ಜಾರಿಗೊಳಿಸಿರುವ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸುವಂತೆ ಮಂಗಳವಾರ ಕಲ್ಕತ್ತಾ ಹೈಕೋರ್ಟ್‌ ಹೇಳಿದೆ.
Calcutta High Court ,Covid-19
Calcutta High Court ,Covid-19

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿ ಜಾರಿಗೊಳಿಸಿರುವ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸುವಂತೆ ಮಂಗಳವಾರ ಕಲ್ಕತ್ತಾ ಹೈಕೋರ್ಟ್‌ ಅಧಿಕಾರಿಗಳಿಗೆ ಆದೇಶಿಸಿದೆ.

ಕೆಲ ವ್ಯಕ್ತಿಗಳ ಸಂವೇದನಾರಹಿತ, ಬೇಜವಾಬ್ದಾರಿಯುತ, ಉದಾಸೀನ ನಡವಳಿಕೆಯು ಮತ್ತೊಬ್ಬರ ಬದುಕನ್ನು ಸಂಕಷ್ಟಕ್ಕೆ ದೂಡುವಂತಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ ಬಿ ಎನ್‌ ರಾಧಾಕೃಷ್ಣನ್‌ ಮತ್ತು ನ್ಯಾಯಮೂರ್ತಿ ಅರ್ಜಿತ್‌ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠವು ಎಚ್ಚರಿಸಿದೆ. ಅಲ್ಲದೇ, ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

“ಕೋವಿಡ್‌ ಶಿಷ್ಟಾಚಾರಗಳನ್ನು ಪಾಲಿಸಲು ನಿರಾಕರಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಕೆಲವು ವ್ಯಕ್ತಿಗಳ ಸಂವೇದನಾರಹಿತ, ಬೇಜವಾಬ್ದಾರಿಯುತ, ಉದಾಸೀನ ನಡವಳಿಕೆಯು ಸಮಾಜದಲ್ಲಿರುವ ಇತರರ ಬದುಕನ್ನು ಸಂಕಷ್ಟಕ್ಕೆ ದೂಡುವಂತಾಗಬಾರದು. ಕೋವಿಡ್‌ ಶಿಷ್ಟಾಚಾರಗಳನ್ನು ಉಲ್ಲಂಘಿಸುವ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರಾಗಲಿ ಅಥವಾ ಬೇರೆ ಯಾರೇ ಆಗಲಿ ಅವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು” ಎಂದು ಪೀಠ ಹೇಳಿದೆ.

ಸಾಧ್ಯವಾದಷ್ಟೂ ಕೋವಿಡ್‌ ಮಾರ್ಗಸೂಚಿಗಳನ್ನು ಜಾರಿಗೆ ತರಲು ಶ್ರಮಿಸುವಂತೆ ಜಿಲ್ಲಾ ದಂಡಾಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಅಗತ್ಯಬಿದ್ದರೆ ಪೊಲೀಸರ ಸಹಾಯವನ್ನೂ ಪಡೆಯಬಹುದು ಎಂದು ಪೀಠವು ಹೇಳಿದೆ.

“ಪೊಲೀಸರ ಸಹಕಾರದೊಂದಿಗೆ ಕೇಂದ್ರ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಅವರು ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂಬುದನ್ನು ಎಲ್ಲಾ ಜಿಲ್ಲಾ ದಂಡಾಧಿಕಾರಿಗಳು ಖಾತರಿಪಡಿಸಬೇಕು. ನಾವು ಅತ್ಯಂತ ಕಠಿಣವಾದ ಸಂದರ್ಭಕ್ಕೆ ಮುಖಾಮುಖಿಯಾಗಿರುವುದರಿಂದ ವಿಶಿಷ್ಟ ಕ್ರಮಗಳ ಮೂಲಕವೇ ಅದನ್ನು ಎದುರಿಸಬೇಕಿದೆ. ಸಾರ್ವಜನಿಕರ ಹಿತಾಸಕ್ತಿಯಿಂದ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರೂ ಸೇರಿದಂತೆ ಎಲ್ಲರೂ ಕೋವಿಡ್‌ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸ್ಥಳೀಯಾಡಳಿತಗಳು ಎಚ್ಚರವಹಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವವರು ಕೋವಿಡ್‌ ಶಿಷ್ಟಾಚಾರಗಳನ್ನು ಪಾಲಿಸುತ್ತಿಲ್ಲವಾದುದರಿಂದ ಪಶ್ಚಿಮ ಬಂಗಾಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತಪಡಿಸಿ ಆಯ್ದ ಸಾರ್ವಜನಿಕರು ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತರಿಪಡಿಸುವ ಸಂಬಂಧ ಜಿಲ್ಲಾ ದಂಡಾಧಿಕಾರಿಗಳು ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್‌ 144ರ ಅಡಿ ಕ್ರಮಕ್ಕೆ ಮುಂದಾಗಬಹುದು ಎಂದು ನ್ಯಾಯಾಲಯ ಹೇಳಿದ್ದು, “ಕೋವಿಡ್‌ ಪ್ರಕರಣಗಳಲ್ಲಿ ಸಂಭವನೀಯ ಏರಿಕೆಯ ರೂಪದಲ್ಲಿ ನಮಗೆ ಎದುರಾಗಿರುವ ಮಾರಣಾಂತಿಕ ಅನಾಹುತವನ್ನು ತಪ್ಪಿಸಲು ಇದು ಅತ್ಯಂತ ಅವಶ್ಯಕವಾಗಿದೆ“ ಎಂದಿದೆ.

Also Read
ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ ಆರೋಪ-ಕಮಲನಾಥ್, ನರೇಂದ್ರ ತೋಮರ್ ವಿರುದ್ಧ ಎಫ್ಐಆರ್‌ಗೆ ಮಧ್ಯಪ್ರದೇಶ ಹೈಕೋರ್ಟ್ ಸೂಚನೆ

“ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ದೇಶದ ಜವಾಬ್ದಾರಿಯುತ ನಾಗರಿಕರಾಗಿದ್ದು, ಇಂದಿನ ಸಂದರ್ಭದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವ ಅಗತ್ಯತೆ ಹೆಚ್ಚಿದೆ. ಹೀಗಾಗಿ ದೇಶದ ಜನರ ಹಿತದೃಷ್ಟಿಯಿಂದ ಎಲ್ಲರೂ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಪೀಠವು ಹೇಳಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವವರು ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿದ್ದಾರೆ ಎಂಬ ವಿಚಾರ ಚುನಾವಣಾ ಆಯೋಗಕ್ಕೆ ಗೊತ್ತಿದೆ. ಇದನ್ನು ನಿಯಂತ್ರಿಸಲು ಆಯೋಗವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರ್ಜಿದಾರರು ವಾದಿಸಿದರು. ಇದನ್ನು ನಿಯಂತ್ರಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯೋಗ ಪ್ರತಿ ವಾದಿಸಿತು. ವಿಚಾರಣೆಯನ್ನು ಏಪ್ರಿಲ್‌ 19ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com